ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರದ ಯೋಜನೆಗಳು ಗ್ರಾಮೀಣ ಜನರಿಗೆ ಸಮರ್ಪಕವಾಗಿ ತಲುಪಲು ಯೋಜನೆಗಳ ಅರಿವು ಅಗತ್ಯವಿದೆ ಎಂದು ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿ ಶಿಕ್ಷಣಾಧಿಕಾರಿ ಸತೀಶ್‌ಕುಮಾರ್ ತಿಳಿಸಿದರು.ತಾಲೂಕಿನ ತಗ್ಗಹಳ್ಳಿಯಲ್ಲಿ ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿ ಬೆಂಗಳೂರು, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಮಮತೆಯ ಮಡಿಲು, ಗ್ರಾಮ ಪಂಚಾಯ್ತಿ, ಇತರೆ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಮೂರು ದಿನಗಳ ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆ ಯೋಜನೆಗಳ ನೋಂದಣಿ ಶಿಬಿರ ಮತ್ತು ಜಾಗೃತಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಅಸಂಘಟಿತ ವಲಯ ಹೆಚ್ಚಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಸ್ಥಿರ ಜೀವನ ಸಾಗಿಸುವಂತಾಗಲು ಹಲವು ಕಾರ್ಯಕ್ರಮ ರೂಪಿಸಿದ್ದಾರೆ. ಇದನ್ನು ಜನಸಾಮಾನ್ಯರಿಗೆ ತಲುಪಿಸುವ ಕಾಯಕವನ್ನು ಸ್ವಯಂಸೇವಾ ಸಂಸ್ಥೆಗಳ ಮೂಲಕ ಸರ್ಕಾರ ಮಾಡುತ್ತಿದೆ ಎಂದರು.ಹಳ್ಳಿಯಿಂದ ನಗರ ಪ್ರದೇಶದತ್ತ ಸರ್ಕಾರಿ ಕಚೇರಿಗಳಿಗೆ ತೆರಳಿ ಯೋಜನೆಯ ಫಲ ಪಡೆಯಲು ಸಾಧ್ಯವಾಗದ ಕಾರಣದಿಂದ ಸರ್ಕಾರದ ಕಚೇರಿಗಳು ಹಳ್ಳಿಯ ಕಡೆಗೆ ಬಂದು ಹಳ್ಳಿಯಲ್ಲಿಯೇ ಯೋಜನೆಗಳ ನೋಂದಣಿ ಮತ್ತು ಈ ಸಂಬಂಧಿತ ಜಾಗೃತಿ ಆಂದೋಲನ ಹಮ್ಮಿಕೊಂಡು ಪ್ರತಿಯೊಬ್ಬರಿಗೂ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವಂತಾಗಬೇಕು ಎಂಬುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಗ್ರಾಮ ಸ್ವರೂಪವನ್ನು ಅರ್ಥೈಸಿಕೊಂಡು ಮಹಿಳೆಯರು, ವಿದ್ಯಾರ್ಥಿಗಳು ಅಸಂಘಟಿತ ಕಾರ್ಮಿಕ ವಲಯವನ್ನು ಕೇಂದ್ರೀಕರಿಸಿಕೊಂಡು ಸರಳ ಮಾರ್ಗೋಪಾಯದಲ್ಲಿ ಉಚಿತವಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ನೋಂದಣಿ ಮಾಡಲು ಇದು ಸಕಾಲವಾಗಿದೆ. ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆಯಬೇಕು ಎಂದರು.ಬ್ಯಾಂಕ್ ಆಫ್ ಬರೋಡಾದ ಸಾರ್ಥಿ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕಿ ಕೆ.ಪಿ.ಅರುಣಕುಮಾರಿ ಮಾತನಾಡಿ, ಮಹಿಳೆಯರಿಗೆ ಸುಕನ್ಯ ಸಮೃದ್ಧಿ ಯೋಜನೆ, ಈ ಶ್ರಮ್ ಕಾರ್ಡ್, ಜನಧನ್ ಯೋಜನೆ, ಪಿಎಂಜೆಜೆಬಿವೈ, ಪಿಎಂಎಫ್‌ಬಿವೈ, ಎಪಿವೈ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿದರು.
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀ ಮಾತನಾಡಿ, ಸರ್ಕಾರ ಜನನ ಮತ್ತು ಮರಣ ನೋಂದಣಿ ಮಾಡುವ ಅಧಿಕಾರವನ್ನು ಪಂಚಾಯ್ತಿಗೆ ನೀಡಿದೆ. ದೂರದ ತಾಲೂಕು ಕೇಂದ್ರಗಳಿಗೆ ಹೋಗಿ ಅಲೆದಾಡುತ್ತಿದ್ದುದನ್ನು ತಪ್ಪಿಸಿ ಮನೆ ಬಾಗಿಲಲ್ಲೇ ಈ ಯೋಜನೆಯನ್ನು ಸರ್ಕಾರ ತಂದಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.ಈ ವೇಳೆ ಗ್ರಾಪಂ ಅಧ್ಯಕ್ಷೆ ಶೃತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉದ್ಯೋಗಾಧಿಕಾರಿ ಕನ್ನಯ್ಯ ಕುಮಾರ್, ಉಪನ್ಯಾಸಕ ಸಿದ್ದೇಶ್, ಪಂಚಾಯ್ತಿ ಸದಸ್ಯರು ಇತರರು ಉಪಸ್ಥಿತರಿದ್ದರು.