ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ಮಹಿಳೆಯರು ತಮ್ಮ ಹಕ್ಕುಗಳು ಮತ್ತು ರಕ್ಷಣಾ ಕಾನೂನುಗಳ ಬಗ್ಗೆ ಅರಿವು ಹೊಂದಿದಾಗ ಮಾತ್ರ ದೌರ್ಜನ್ಯಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯ ಎಂದು ರಾಯಬಾಗದ ಎಸ್‌ಪಿಎಂ ಕಾನೂನು ಪದವಿ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ.ಸುನಿತಾ ಕುರಬೇಟ ಹೇಳಿದರು.ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಐಕ್ಯೂಎಸಿ, ಲೈಂಗಿಕ ಕಿರುಕುಳ ತಡೆಗಾವಲು ಸಮಿತಿ, ಮಹಿಳಾ ಸಬಲೀಕರಣ ಘಟಕ, ರ್‍ಯಾಗಿಂಗ್ ತಡೆಗಾವಲು ಸಮಿತಿ ಹಾಗೂ ಎನ್.ಎಸ್.ಎಸ್ ಘಟಕಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಮತ್ತು ಪರಿಹಾರ ಕುರಿತ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು. ಇಂದಿನ ದಿನಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಿದ್ದು, ವಿದ್ಯಾರ್ಥಿನಿಯರು ಭಯಪಡದೆ ದೂರು ನೀಡಲು ಮುಂದಾಗಬೇಕು. ಕೆಲಸದ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಇರುವ ಪೋಕ್ಸೋ ಮತ್ತು ಪೋಷ್ (POSH)-2013ರ ಕಾಯ್ದೆಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
ಘಟಪ್ರಭಾ ಠಾಣೆಯ ಪಿ.ಎಸ್.ಐ ಎಸ್.ಆರ್.ಕಣವಿ ಮಾತನಾಡಿ, ಪೊಲೀಸ್ ಇಲಾಖೆ ಸದಾ ಮಹಿಳೆಯರ ರಕ್ಷಣೆಗೆ ಬದ್ಧವಾಗಿದೆ. ಯಾವುದೇ ರೀತಿಯ ಕಿರುಕುಳ ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಸಹಾಯವಾಣಿಗೆ ಅಥವಾ ಠಾಣೆಗೆ ಸಂಪರ್ಕಿಸಬೇಕು ಎಂದು ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದರು. ಜೊತೆಗೆ ಸೈಬರ್ ಕ್ರೈಮ್ ಕುರಿತು ಮಾಹಿತಿ ನೀಡಿದರು.ಕಾಲೇಜಿನ ಪ್ರಾಚಾರ್ಯ ಡಾ.ಸುರೇಶ ಹನಗಂಡಿ ಮಾತನಾಡಿ, ೧೨ನೇ ಶತಮಾನದಲ್ಲಿ ಶಿವಶರಣೆ ಅಕ್ಕಮಹಾದೇವಿ ಲೈಂಗಿಕ ಕಿರುಕುಳವನ್ನು ಬಹಿರಂಗವಾಗಿ ವಿರೋಧಿಸಿದ್ದಾಳೆ. ಹಾಗೆಯೇ ಪ್ರತಿಯೊಬ್ಬ ಹೆಣ್ಣು ಮಕ್ಕಳು ಕಾನೂನಿನ ನೆರವು ಪಡೆಯುವ ಮೂಲಕ ತಮ್ಮ ವಿರುದ್ಧ ನಡೆಯುವ ದೌರ್ಜನ್ಯವನ್ನು ವಿರೋಧಿಸಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚೇರಮನ್ ಬಸಗೌಡ ಪಾಟೀಲ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಶಿಸ್ತು ಪಾಲನೆಗೆ ವಿಶೇಷ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.ಘಟಪ್ರಭಾ ಠಾಣೆಯ ಹವಾಲ್ದಾರ್‌ಗಳಾದ ರಾಮಕೃಷ್ಣ ಗಿಡ್ಡಪ್ಪಗೋಳ, ಹವಾಲ್ದಾರ್ ಶ್ರೀಕಾಂತ ದೇವರ ಮಾತನಾಡಿದರು. ಈ ಸಂದರ್ಭದಲ್ಲಿ ಮಹಿಳಾ ಸಬಲೀಕರಣ ಘಟಕದ ಸಂಯೋಜಕಿ ವಿ.ವೈ.ಕಾಳೆ ಪ್ರತಿಜ್ಞಾ ವಿಧಿ ಬೋಧಿಸಿದರು, ರಾಧಿಕಾ ಕರೆಪ್ಪಗೋಳ ಪ್ರಾರ್ಥನೆ ಹಾಡಿದರು. ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಶಂಕರ ನಿಂಗನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೈಂಗಿಕ ಕಿರುಕುಳ ತಡೆ ಸಮಿತಿ ಸಂಯೋಜಕ ಬಿ.ಸಿ.ಮಾಳಿ ಸ್ವಾಗತಿಸಿದರು. ಡಾ.ಕೆ.ಎಸ್.ಪರವ್ವಗೋಳ ನಿರೂಪಿಸಿದರು. ಡಾ.ಆರ್.ಎನ್.ತೋಟಗಿ ವಂದಿಸಿದರು.ಕಾರ್ಯಕ್ರಮದಲ್ಲಿ ರ್‍ಯಾಗಿಂಗ್ ತಡೆ ಸಮಿತಿ ಸಂಯೋಜಕ ಎಂ.ಎನ್.ಮುರಗೋಡ, ಐಕ್ಯೂಎಸಿ ಸಂಯೋಜಕ ಡಾ.ಎಂ.ಬಿ.ಕುಲಮೂರ, ಆರ್.ಎಸ್.ಪಂಡಿತ, ಸಂತೋಷ ಬಂಡಿ, ವಿಲಾಸ ಕೆಳಗಡೆ, ಬಿ.ಬಿ.ವಾಲಿ, ಎಂ.ಆರ್.ಕರಗಣ್ಣಿ ಹಾಗೂ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))