ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಚ್ಐವಿ ಸೋಂಕಿನ ಪ್ರಮಾಣ ಕಳೆದ ಹತ್ತು ವರ್ಷಗಳ ಅಂಕಿಅಂಶಗಳನ್ನು ಗಮನಿಸಿದಾಗ ಗಣನೀಯವಾಗಿ ಇಳಿಕೆ ಕಂಡುಬಂದಿದ್ದು, ಇದು ಇಲಾಖೆಯ ಹಲವಾರು ತಿಳಿವಳಿಕೆ ಕಾರ್ಯಕ್ರಮಗಳು ಹಾಗೂ ಜಾಗೃತಿ ಜಾಥಾಗಳು ಕಾರಣ ಎಂದರು.

ಗದಗ: ಏಡ್ಸ್‌ ರೋಗ ಹರಡುತ್ತಿರುವ ಪ್ರಮಾಣವನ್ನು ಸೊನ್ನೆಗೆ ತಂದಾಗ ಮಾತ್ರ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮದ ಉದ್ದೇಶ ಪೂರ್ಣವಾಗುತ್ತದೆ ಎಂದು ಡಾ. ಆರ್.ಎನ್. ಗೋಡಬೋಲೆ ತಿಳಿಸಿದರು.

ಜಿಲ್ಲಾ ಆಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ ಮತ್ತು ಪ್ರಸಾರ ಇಲಾಖೆ, ಕೆಎಚ್‌ಪಿ ಐಎಂಎಸ್ ಜಿಲ್ಲಾ ಆಸ್ಪತ್ರೆಯ ಆಶ್ರಯದಲ್ಲಿ ಸೋಮವಾರ ಕೆ.ಎಚ್. ಪಾಟೀಲ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜು, ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ಜಾಗೃತಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಎಚ್ಐವಿ ಏಡ್ಸ್ ಹರಡುವಿಕೆಯನ್ನು ನಿಯಂತ್ರಿಸಲು ಇರುವ ಅಡೆತಡೆಗಳನ್ನು ಕೊನೆಗಾನಿಸೋಣ ಎಂಬ ನುಡಿಯಂತೆ ಸಮುದಾಯ ಜಾಗೃತವಾಗಿ ನಮ್ಮ ಆರೋಗ್ಯವನ್ನು ಪಡೆಯಲು ಸರಿಯಾದ ಮಾರ್ಗದಲ್ಲಿ ಹೆಜ್ಜೆ ಇಡಲು ಮುಂದಾಗುವಂತೆ ಕರೆ ನೀಡಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಚ್ಐವಿ ಸೋಂಕಿನ ಪ್ರಮಾಣ ಕಳೆದ ಹತ್ತು ವರ್ಷಗಳ ಅಂಕಿಅಂಶಗಳನ್ನು ಗಮನಿಸಿದಾಗ ಗಣನೀಯವಾಗಿ ಇಳಿಕೆ ಕಂಡುಬಂದಿದ್ದು, ಇದು ಇಲಾಖೆಯ ಹಲವಾರು ತಿಳಿವಳಿಕೆ ಕಾರ್ಯಕ್ರಮಗಳು ಹಾಗೂ ಜಾಗೃತಿ ಜಾಥಾಗಳು ಕಾರಣ ಎಂದರು.

ಎಚ್‌ಐವಿ ಮತ್ತು ಏಡ್ಸ್ ಬಹಳಷ್ಟು ಅಂತರವಿದ್ದು, ಎಚ್ಐವಿ ಸೋಂಕಿತರು ಭಯಪಡುವ ಅಗತ್ಯವಿಲ್ಲ. ಆಪ್ತ ಸಮಾಲೋಚಕರಿಂದ ನೈತಿಕ ಬೆಂಬಲ ಮಾನಸಿಕ ಬೆಂಬಲವನ್ನು ಪಡೆದು ಇತರರಂತೆ ಸಾಮಾನ್ಯ ಜೀವನ ನಡೆಸಬಹುದು. ಜಿಲ್ಲೆಯ ಎಚ್ಐ. ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಎಲ್ಲ ಸಿಬ್ಬಂದಿ, ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿ, ಸಂಘ ಸಂಸ್ಥೆಗಳು ಜಿಲ್ಲೆಯ ಎಲ್ಲ ಇಲಾಖೆಗಳ ಸಹಕಾರದಿಂದ ಈ ಸೋಂಕನ್ನು ಕಡಿಮೆ ಮಾಡಲು ಸಾಧ್ಯವಾಗಿದೆ ಎಂದರು.

ಪ್ರಭಾರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸೋಮಶೇಖರ ಬಿಜ್ಜಳ ಮಾತನಾಡಿ, ಗದಗ ಜಿಲ್ಲೆ ಎಚ್ಐವಿ ಏಡ್ಸ್ ನಿಯಂತ್ರಣದಲ್ಲಿ ಉತ್ತಮ ಸಾಧನೆ ಮಾಡಿದ್ದು, ಕಳೆದ ಹತ್ತು ವರ್ಷಗಳಲ್ಲಿ ಎಚ್ಐವಿ ಸೋಂಕಿತ ಗರ್ಭಿಣಿಯರಿಂದ ಹುಟ್ಟಿದ ಮಗುವನ್ನು ಎಚ್ಐವಿ ಸೋಂಕು ಮುಕ್ತ ಮಗುವನ್ನು ಪಡೆಯಲಾಗಿದ್ದು, ಉತ್ತಮ ಸಾಧನೆ ಎಂದರು.

ಜಿಲ್ಲೆಯಲ್ಲಿ ಎಚ್‌ಐವಿ ನಿಯಂತ್ರಣದಲ್ಲಿ ಉತ್ತಮ ಸೇವೆ ಸಲ್ಲಿಸಿದಕ್ಕಾಗಿ ಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ. ಹನುಮಂತ ನಿಪನಾಳ ಅವರಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು. ಜೈ ಕಿಸಾನ ಕಲಾ ತಂಡದಿಂದ ಏಡ್ಸ್ ಕುರಿತು ಜಾನಪದ ಹಾಡುಗಳಿಂದ ಅರಿವು ಮೂಡಿಸಲಾಯಿತು. ಬಿ.ಬಿ. ಲಾಲಗಟ್ಟಿ ನಿರೂಪಿಸಿದರು. ನೀಲಕಂಠ ಮಡಿವಾಳರ ವಂದಿಸಿದರು.

ಈ ಸಂದರ್ಭದಲ್ಲಿ ಡಾ. ಅನಂತ ಶಿವಪೂರ, ಡಾ. ರಮೇಶ, ಡಾ. ಅರವಿಂದ ಕರಿನಾಗಣ್ಣವರ, ಪುಷ್ಪಾ ಪಾಟೀಲ, ಸಿದ್ದಪ್ಪ ಲಿಂಗದಾಳ, ರಾಜೇಂದ್ರ ಗಡಾದ, ಮಂಜುನಾಥ ಸಜ್ಜನರ, ಆರೋಗ್ಯ ಇಲಾಖೆಯ ಸಿಬ್ಬಂದಿ, ಎನ್‌ಜಿಒ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.