ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಗಳು ಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುವ ಸಾಮಾಜಿಕ ಪಿಡುಗುಗಳಾಗಿವೆ. ಇವುಗಳ ವಿರುದ್ಧ ವಿದ್ಯಾರ್ಥಿಗಳು ಮತ್ತು ಸಮಾಜ ಜಾಗೃತವಾಗಬೇಕು ಎಂದು ಡಾನ್ ಬಾಸ್ಕೋ ಶಾಲೆ ಸಂಯೋಜಕ ನಟರಾಜ್ ಹೇಳಿದ್ದಾರೆ.

- ಡಾನ್ ಬಾಸ್ಕೋ ಶಾಲೆ ಸಂಯೋಜಕ ನಟರಾಜ್ ಸಲಹೆ । ಬಿಳಿಚೋಡು ಗ್ರಾಮದಲ್ಲಿ ವಿಶೇಷ ಮಕ್ಕಳ ಗ್ರಾಮಸಭೆ

- - -

ಕನ್ನಡಪ್ರಭ ವಾರ್ತೆ ಜಗಳೂರು

ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಗಳು ಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುವ ಸಾಮಾಜಿಕ ಪಿಡುಗುಗಳಾಗಿವೆ. ಇವುಗಳ ವಿರುದ್ಧ ವಿದ್ಯಾರ್ಥಿಗಳು ಮತ್ತು ಸಮಾಜ ಜಾಗೃತವಾಗಬೇಕು ಎಂದು ಡಾನ್ ಬಾಸ್ಕೋ ಶಾಲೆ ಸಂಯೋಜಕ ನಟರಾಜ್ ಹೇಳಿದರು.

​ತಾಲೂಕಿನ ಬಿಳಿಚೋಡು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಮಕ್ಕಳ ಗ್ರಾಮಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಯಿಂದ ಮಕ್ಕಳು ಶಿಕ್ಷಣ ಹಾಗೂ ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತಾರೆ. ಇಂತಹ ಅನಿಷ್ಟ ಪದ್ಧತಿಗಳ ದುಷ್ಪರಿಣಾಮಗಳನ್ನು ಅರಿತು, ಮಕ್ಕಳು ತಮ್ಮ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಎಂದ ಅವರು, ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿಯ ಗಂಭೀರ ಪರಿಣಾಮಗಳ ಕುರಿತು ಜ್ವಲಂತ ನಿದರ್ಶನಗಳ ಮೂಲಕ ಮಾಹಿತಿ ನೀಡಿದರು.

ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಶ್ವೇತ ಸಭೆ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಯ ಶ್ರೀ ವೀರೇಶ್ ಅವರು ಮಕ್ಕಳ ಹಕ್ಕುಗಳು ಹಾಗೂ ಪೋಕ್ಸೋ ಕಾಯ್ದೆಯ ಕುರಿತು ಜಾಗೃತಿ ಮೂಡಿಸಿದರು.

ಪಿಡಿಒ ತಿಪ್ಪೇಸ್ವಾಮಿ ಅವರು ಶಾಲೆಯ ಮೂಲಭೂತ ಸೌಕರ್ಯ, ಕುಂದುಕೊರತೆಗಳ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿ, ದಾಖಲಾದ ದೂರುಗಳನ್ನು ಹಂತ ಹಂತವಾಗಿ ಸರಿಪಡಿಸುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಪಿಎಸ್‌ಐ ಓಂಕಾರ್ ನಾಯಕ್, ಹಿರಿಯ ಶಿಕ್ಷಕ ಶ್ರೀ ಹುಲುಗಪ್ಪ, ಸಹ ಶಿಕ್ಷಕರಾದ ನಟರಾಜ್, ಪರಶುರಾಮಪ್ಪ, ರತ್ನಮಾಲ, ರವಿಕುಮಾರ್, ಶಿವಮೂರ್ತಿ, ಮಂಜು ಕೆ.ಎಚ್., ಎಸ್‌ಡಿಎಂಸಿ ಉಪಾಧ್ಯಕ್ಷ ಹಾಗೂ ಗ್ರಾ.ಪಂ. ಮಾಜಿ ಸದಸ್ಯ ಅಜಮುಲ್ಲಾ, ಎಸ್‌ಡಿಎಂಸಿ ಸದಸ್ಯರಾದ ಹಾಲಪ್ಪ, ಚಂದ್ರಪ್ಪ, ಕೆಪಿಎಸ್ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಡಿ.ಕೆ.ಜಯ, ವಾಣಿ ಶಾಲೆಯ ದೈಹಿಕ ಶಿಕ್ಷಕ ಶಿವಕುಮಾರ್, ಮಾದನಹಳ್ಳಿ ಶಾಲೆ ಮುಖ್ಯ ಶಿಕ್ಷಕ ನಾಗರಾಜ್, ಕಾಟೇನಹಳ್ಳಿ ಶಾಲೆ ಮುಖ್ಯ ಶಿಕ್ಷಕ ರಮೇಶ್, ಜನತಾ ಕಾಲೋನಿ ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಸೇರಿದಂತೆ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಮತ್ತು ಗ್ರಾ.ಪಂ. ಸಿಬ್ಬಂದಿ ಉಪಸ್ಥಿತರಿದ್ದರು.

ಸಂಗೀತ ಶಿಕ್ಷಕ ಸತೀಶ್ ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಹಶಿಕ್ಷಕ ಎಚ್. ಬಸವರಾಜ್ ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಶಿಕ್ಷಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.

- - -

-22ಜೆ.ಜಿ.ಎಲ್.1:

ವಿಶೇಷ ಮಕ್ಕಳ ಗ್ರಾಮಸಭೆಗೆ 10ನೇ ತರಗತಿ ವಿದ್ಯಾರ್ಥಿನಿ ಶ್ವೇತ ಚಾಲನೆ ನೀಡಿದರು.