ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕ ತಡೆ ಕುರಿತು ತರಬೇತಿ ಕಾರ್ಯಕ್ರಮ ಶುಕ್ರವಾರ ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕ ತಡೆ ಕುರಿತು ತರಬೇತಿ ಕಾರ್ಯಕ್ರಮ ಶುಕ್ರವಾರ ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ಮಾತನಾಡಿ, ಅಕ್ರಮ ಮಾನವ ಕಳ್ಳ ಸಾಗಣೆ ಒಂದು ಸಾಮಾಜಿಕ ಪಿಡುಗು, ಮಕ್ಕಳು ಮತ್ತು ಮಹಿಳೆಯರು ಈ ಜಾಲಕ್ಕೆ ಸಿಲುಕುತ್ತಿರುವುದು ವಿಷಾದನೀಯ. ಸಾರ್ವಜನಿಕರು ಜಾಗೃತರಾಗಬೇಕೇ ಹೊರತು ಎಷ್ಟೇ ಕಾನೂನು ಜಾರಿಗೆ ತಂದರೂ ಇದನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಡಾ.ಅಕ್ಷತ ಆದರ್ಶ್ ಮಾತನಾಡಿ, ದೇಶದಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನವಿದೆ. ಮಹಿಳೆ ವೈಚಾರಿಕವಾಗಿ ಬೆಳೆಯುತ್ತಾ ವಿಚಾರಶೀಲರಾಗಬೇಕು. ಕಾನೂನುಗಳ ಬಗ್ಗೆ ಅರಿವಿದ್ದಾಗ ಮಾತ್ರ ಎಲ್ಲವೂ ಸುವ್ಯವಸ್ಥಿತವಾಗಿರುತ್ತದೆ ಎಂದು ಹೇಳಿದರು.ಸಂಪನ್ಮೂಲ ವ್ಯಕ್ತಿ ರೋಹಿತ್ ಸಿ.ಜೆ ಅವರು ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆಯ ಕುರಿತು ಹಾಗೂ ಅನೈತಿಕ ಸಂಚಾರ ತಡೆ ಕಾಯ್ದೆ, ಬಾಲ್ಯ ನ್ಯಾಯ ಕಾಯ್ದೆ-2015 ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಎಸಿಪಿ ಗೀತಾ ಕುಲಕರ್ಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ರಶ್ಮಿ ಕೆ.ಎಂ, ಪಡಿ ಸಂಸ್ಥೆ ನಿರ್ದೇಶಕ ರೆನ್ನಿ ಡಿಸೋಜಾ, ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಮತ್ತಿತರರಿದ್ದರು. ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ. ಕಾರಗಿ ಸ್ವಾಗತಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ವಂದಿಸಿದರು. ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಚಂದ್ರಿಕಾ ನಿರೂಪಿಸಿದರು.