ಇಎಸ್‌ಐ ವಿಸ್ತೃತ ಸೌಲಭ್ಯಗಳ ಅರಿವು ಅಗತ್ಯ: ವಿಮಾ ಆಯುಕ್ತ

| Published : Jun 27 2024, 01:16 AM IST

ಸಾರಾಂಶ

ದೊಡ್ಡಬಳ್ಳಾಪುರ: ಖಾಸಗಿ ಸಂಸ್ಥೆಗಳೂ ಸೇರಿದಂತೆ ಎಲ್ಲ ಬಗೆಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಇಎಸ್‌ಐ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ವಿವಿಧ ಸೌಲಭ್ಯಗಳ ಕುರಿತು ಕಾರ್ಮಿಕ ವರ್ಗ ಅರಿವು ಹೊಂದುವುದು ಅಗತ್ಯ ಎಂದು ದಕ್ಷಿಣ ವಲಯ ವಿಮಾ ಆಯುಕ್ತ ರಾಜೇಶ್‌ಕುಮಾರ್ ಕಯಿಮ್ ಹೇಳಿದರು.

ದೊಡ್ಡಬಳ್ಳಾಪುರ: ಖಾಸಗಿ ಸಂಸ್ಥೆಗಳೂ ಸೇರಿದಂತೆ ಎಲ್ಲ ಬಗೆಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಇಎಸ್‌ಐ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ವಿವಿಧ ಸೌಲಭ್ಯಗಳ ಕುರಿತು ಕಾರ್ಮಿಕ ವರ್ಗ ಅರಿವು ಹೊಂದುವುದು ಅಗತ್ಯ ಎಂದು ದಕ್ಷಿಣ ವಲಯ ವಿಮಾ ಆಯುಕ್ತ ರಾಜೇಶ್‌ಕುಮಾರ್ ಕಯಿಮ್ ಹೇಳಿದರು.

ಇಲ್ಲಿನ ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಮಾನವ ಸಂಪನ್ಮೂಲ ವಿಭಾಗದ ನೇತೃತ್ವದಲ್ಲಿ ನಡೆದ ಇಎಸ್‌ಐ ಸೌಲಭ್ಯ ಕುರಿತು ಅರಿವು ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತ ಸರ್ಕಾರ ಕಾರ್ಮಿಕರಿಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ಒದಗಿಸುತ್ತದೆ. ವಿಮೆ ಮತ್ತು ಇತರ ಪ್ರಯೋಜನಗಳನ್ನು ಒಳಗೊಳ್ಳುತ್ತದೆ. ಉದ್ಯೋಗಿಗಳ ರಾಜ್ಯ ವಿಮಾ ಕಾಯಿದೆಯನ್ನು ಆರೋಗ್ಯ-ಸಂಬಂಧಿತ ಘಟನೆಗಳ ವಿರುದ್ಧ ಕಾರ್ಮಿಕರನ್ನು ರಕ್ಷಿಸಲು ಪರಿಚಯಿಸಲಾಯಿತು. ನೌಕರರ ರಾಜ್ಯ ವಿಮಾ ನಿಗಮವನ್ನು ESIC ಎಂದು ಉಲ್ಲೇಖಿಸಲಾಗಿದೆ. ಇದು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ESI ಕಾಯಿದೆಯಿಂದ ಸ್ಥಾಪಿಸಲ್ಪಟ್ಟ ಸ್ವಾಯತ್ತ ಸಂಸ್ಥೆಯಾಗಿದ್ದು, ಯೋಜನೆಯಡಿ ಒಳಗೊಂಡಿರುವ ಸದಸ್ಯರು ಮತ್ತು ಅವರ ಅವಲಂಬಿತರಿಗೆ ಆರ್ಥಿಕ ರಕ್ಷಣೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದರು.

ಕರ್ನಾಟಕ ಪ್ರಾದೇಶಿಕ ನಿರ್ದೇಶಕ ಮತ್ತು ಹೆಚ್ಚುವರಿ ಆಯುಕ್ತ ರೇಣುಕಾ ಪ್ರಸಾದ್‌ ಮಾತನಾಡಿ, ಇಎಸ್‌ಐ ಅಥವಾ ಉದ್ಯೋಗಿಗಳ ರಾಜ್ಯ ವಿಮಾ ಯೋಜನೆ, ಇಎಸ್‌ಐಸಿಯಿಂದ ನಿರ್ವಹಿಸಲ್ಪಡುತ್ತದೆ, ಉದ್ಯೋಗದ ಸಮಯದಲ್ಲಿ ಅನಾರೋಗ್ಯ, ಹೆರಿಗೆ ಮತ್ತು ಗಾಯದ ಸಂದರ್ಭದಲ್ಲಿ, ಇಎಸ್‌ಐ ಕಾಯಿದೆ 1948 ರಲ್ಲಿ ವ್ಯಾಖ್ಯಾನಿಸಿದಂತೆ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ಒದಗಿಸಲು ವಿನ್ಯಾಸಗೊಳಿಸಲಾದ ಯೋಜನೆಯಾಗಿದೆ. ಇದು ಅವರಿಗೆ ವೈದ್ಯಕೀಯ, ಅಂಗವಿಕಲತೆ, ಹೆರಿಗೆ ಮತ್ತು ನಿರುದ್ಯೋಗ ಭತ್ಯೆ ಪ್ರಯೋಜನಗಳಿಗೆ ಅರ್ಹತೆ ನೀಡುತ್ತದೆ ಎಂದು ತಿಳಿಸಿದರು.

ESI ಯೋಜನೆಯನ್ನು ನೌಕರರ ರಾಜ್ಯ ವಿಮಾ ನಿಗಮ ಕಡಿಮೆ ಆದಾಯದ ಜನರಿಗಾಗಿ ನಡೆಸುತ್ತದೆ. ಇದರ ಅಡಿಯಲ್ಲಿ, ಇಎಸ್‌ಐ ಕಾರ್ಡ್ ಅನ್ನು ನೌಕರರು ಮತ್ತು ಅದನ್ನು ಅವಲಂಬಿಸಿರುವ ಜನರಿಗೆ ನೀಡಲಾಗುತ್ತದೆ. ಇಎಸ್‌ಐ ಕಾರ್ಡ್‌ ಆಧಾರದ ಮೇಲೆ ಉದ್ಯೋಗಿ ಇಎಸ್‌ಐ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಯಾವುದೇ ಕಾರಣದಿಂದ ತಾತ್ಕಾಲಿಕ ಅಂಗವೈಕಲ್ಯ ಉಂಟಾದರೆ, ವಿಮಾದಾರರಿಗೆ ಅವರು ಚೇತರಿಸಿಕೊಳ್ಳುವವರೆಗೆ ಮತ್ತು ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ ಇಡೀ ಜೀವನಕ್ಕೆ ಮಾಸಿಕ ಪಿಂಚಣಿ ನೀಡಲಾಗುತ್ತದೆ. ಅವಲಂಬಿತರಿಗೆ ನಿವೃತ್ತಿಯ ನಂತರ ನಿರುದ್ಯೋಗ ಭತ್ಯೆ, ಪಿಂಚಣಿ, ಉಚಿತ ಚಿಕಿತ್ಸೆ ದೊರೆಯುತ್ತದೆ. ಉದ್ಯೋಗದ ಸಮಯದಲ್ಲಿ ವಿಮಾದಾರನು ಮರಣಹೊಂದಿದರೆ, ಅವನ ಅಂತ್ಯಕ್ರಿಯೆಗಾಗಿ ESIC ನಿಂದ ಗರಿಷ್ಠ 10 ಸಾವಿರ ರು, ಇದಲ್ಲದೆ, ಅವಲಂಬಿತರಿಗೆ ನಿಗದಿತ ಅನುಪಾತದಲ್ಲಿ ಮಾಸಿಕ ಪಿಂಚಣಿ ನೀಡಲಾಗುತ್ತದೆ. ಇಎಸ್‌ಐ ಮೂಲಕವೂ ಹೆರಿಗೆ ರಜೆ ದೊರೆಯುತ್ತದೆ ಎಂದು ವಿವರಿಸಿದರು.

ಇಎಸ್‌ಐ ಆಸ್ಪತ್ರೆ ಶೀಘ್ರ ಕಾರ್ಯಾರಂಭಕ್ಕೆ ಒತ್ತಾಯ:

ಇದೇ ವೇಳೆ ದೊಡ್ಡಬಳ್ಳಾಪುರದಲ್ಲಿ ನಿರ್ಮಾಣ ಪೂರ್ಣಗೊಂಡಿರುವ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ನೂತನ ಕಾರ್ಯಾರಂಭ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಉಪನಿರ್ದೇಶಕರಾದ ಅರ್ಶದಾ ಕಿಶೋರ್, ಸ್ಯಾಂಗ್‌ಪ್ರಿಯಾ ಆನಂದ್, ಎಸ್‌ಡಿಯುಇಟಿ ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಆರ್‌ಎಲ್‌ಜೆ ಸಮೂಹ ಶಿಕ್ಷಣ ಸಂಸ್ಥೆಗಳ ಮಾನವ ಸಂಪನ್ಮೂಲ ನಿರ್ದೇಶಕ ಎನ್.ಎಸ್.ಬಾಬುರೆಡ್ಡಿ, ಆರ್‌ಎಲ್‌ಜೆಐಟಿ ಪ್ರಾಂಶುಪಾಲ ಡಾ.ವಿಜಯ್‌ಕಾರ್ತಿಕ್‌ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ನೌಕರರು ಉಪಸ್ಥಿತರಿದ್ದರು.

26ಕೆಡಿಬಿಪಿ1-

ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಇಎಸ್‌ಐಸಿ ಕುರಿತು ಅರಿವು ಕಾರ್ಯಾಗಾರಕ್ಕೆ ದಕ್ಷಿಣ ವಲಯ ವಿಮಾ ಆಯುಕ್ತ ರಾಜೇಶ್‌ಕುಮಾರ್ ಕಯಿಮ್ ಚಾಲನೆ ನೀಡಿದರು.