ಅಪರಾಧಮುಕ್ತ ಸಮಾಜ ನಿರ್ಮಾಣ ಆಗಬೇಕಾದರೆ ಪ್ರತಿಯೊಬ್ಬರೂ ವಿದ್ಯಾರ್ಥಿ ದೆಸೆಯಲ್ಲಿಯೇ ಪೋಕ್ಸೋ ಕಾಯ್ದೆ ಸೇರಿದಂತೆ ದೇಶದ ವಿವಿಧ ಕಾನೂನುಗಳ ಕುರಿತು ಕನಿಷ್ಠ ಜ್ಞಾನ ಹೊಂದಿರಬೇಕು. ಕಾನೂನಿನ ಅರಿವು ಇದ್ದಾಗ ಮಾತ್ರ ಅಪರಾಧಗಳನ್ನು ತಡೆಗಟ್ಟುವುದರ ಜೊತೆಗೆ ಸುರಕ್ಷಿತ ಸಮಾಜ ನಿರ್ಮಿಸಲು ಸಾಧ್ಯ ಎಂದು ವಕೀಲ ತಿಪ್ಪೇಸ್ವಾಮಿ ಎಸ್. ಗೋಗುದ್ದು ತಿಳಿಸಿದ್ದಾರೆ.

- ವಕೀಲ ತಿಪ್ಪೇಸ್ವಾಮಿ ಎಸ್. ಗೋಗುದ್ದು ಸಲಹೆ । ಹನುಮಂತಾಪುರ ಪ್ರೌಢಶಾಲೆಯಲ್ಲಿ ಪೋಕ್ಸೋ ಕಾಯ್ದೆ ಜಾಗೃತಿ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ಜಗಳೂರು

ಅಪರಾಧಮುಕ್ತ ಸಮಾಜ ನಿರ್ಮಾಣ ಆಗಬೇಕಾದರೆ ಪ್ರತಿಯೊಬ್ಬರೂ ವಿದ್ಯಾರ್ಥಿ ದೆಸೆಯಲ್ಲಿಯೇ ಪೋಕ್ಸೋ ಕಾಯ್ದೆ ಸೇರಿದಂತೆ ದೇಶದ ವಿವಿಧ ಕಾನೂನುಗಳ ಕುರಿತು ಕನಿಷ್ಠ ಜ್ಞಾನ ಹೊಂದಿರಬೇಕು. ಕಾನೂನಿನ ಅರಿವು ಇದ್ದಾಗ ಮಾತ್ರ ಅಪರಾಧಗಳನ್ನು ತಡೆಗಟ್ಟುವುದರ ಜೊತೆಗೆ ಸುರಕ್ಷಿತ ಸಮಾಜ ನಿರ್ಮಿಸಲು ಸಾಧ್ಯ ಎಂದು ವಕೀಲ ತಿಪ್ಪೇಸ್ವಾಮಿ ಎಸ್. ಗೋಗುದ್ದು ತಿಳಿಸಿದರು.

ತಾಲೂಕಿನ ಹನುಮಂತಾಪುರ ಗ್ರಾಮದ ರಾಜೀವ್ ಗಾಂಧಿ ಸ್ಮಾರಕ ಪ್ರೌಢಶಾಲೆಯಲ್ಲಿ ಸುರಕ್ಷಿತ್ ಬಚ್ಪನ್ ಅಭಿಯಾನ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸಿ ಅವರು ಮಾತನಾಡಿದರು.

ಭವಿಷ್ಯದಲ್ಲಿ ಕಾನೂನುಬದ್ಧವಾಗಿ ಉತ್ತಮ ಜೀವನ ನಡೆಸಲು ಕೆಲವು ಕಾನೂನಿನ ಪ್ರಾಥಮಿಕ ಜ್ಞಾನ ಹೊಂದುವುದು ಅತ್ಯವಶ್ಯಕ. ಯಾವುದೇ ತಪ್ಪು ಮಾಡುವ ಮುನ್ನ ಅದರ ಪರಿಣಾಮ ಹಾಗೂ ಕಾನೂನಿನ ಶಿಕ್ಷೆಯ ಅರಿವಿರಬೇಕು. ಹಾಗಿದ್ದಾಗ ಅಪರಾಧ ಕೃತ್ಯಗಳಿಗೆ ಮುಂದಾಗುವ ಪ್ರವೃತ್ತಿಯನ್ನು ತಡೆಯಬಹುದು. ಇತ್ತೀಚಿನ ವರದಿಗಳ ಪ್ರಕಾರ ದೇಶದಲ್ಲಿ ವಾರ್ಷಿಕವಾಗಿ 69 ಸಾವಿರಕ್ಕೂ ಹೆಚ್ಚು ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿರುವುದು ಆತಂಕಕಾರಿ ಸಂಗತಿ ಎಂದರು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಗಂಭೀರ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಹಾಗೂ ಮಕ್ಕಳನ್ನು ಅಶ್ಲೀಲ ಉದ್ದೇಶಗಳಿಗೆ ಬಳಸಿಕೊಳ್ಳುವುದು ಸೇರಿದಂತೆ ವಿವಿಧ ಅಪರಾಧಗಳು ಪೋಕ್ಸೋ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ. ಇಂತಹ ಅಪರಾಧಗಳ ಸ್ವರೂಪ ಮತ್ತು ಕಾಯ್ದೆಯಲ್ಲಿರುವ ಕಾನೂನು ಕ್ರಮಗಳ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಸಂಭವಿಸಿದಾಗ ಅಥವಾ ಬೆಳಕಿಗೆ ಬಂದಾಗ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಭಯದಿಂದ ಅಥವಾ ಸಂಕುಚಿತ ಮನೋಭಾವದಿಂದ ಘಟನೆ ಮುಚ್ಚಿಡಬಾರದು. ಮೊದಲು ಕುಟುಂಬದ ಸದಸ್ಯರು, ಶಾಲಾ ಶಿಕ್ಷಕರಿಗೆ ಮಾಹಿತಿ ನೀಡಬೇಕು. ಅಗತ್ಯವಿದ್ದಲ್ಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಬೇಕು. ಅನಂತರ ಸಂಬಂಧಪಟ್ಟ ಇಲಾಖೆಯು ಮಗುವಿನ ಹೇಳಿಕೆ ದಾಖಲಿಸಿಕೊಂಡು, ವೈದ್ಯಕೀಯ ಪರೀಕ್ಷೆ ಹಾಗೂ ನ್ಯಾಯಾಲಯದ ವಿಚಾರಣೆಯ ಮೂಲಕ ಸಂತ್ರಸ್ತರಿಗೆ ಕಾನೂನಿನಡಿ ನ್ಯಾಯ ದೊರಕಿಸಿಕೊಡುವ ಪ್ರಕ್ರಿಯೆ ನಡೆಸುತ್ತದೆ. ಹೀಗಾಗಿ ಮಕ್ಕಳು ಧೈರ್ಯದಿಂದ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಆರ್. ತಿಪ್ಪೇಸ್ವಾಮಿ, ಚೆನ್ನವೀರಪ್ಪ, ಸತೀಶ್, ನಾಗರಾಜ್ ಹಾಗೂ ಸಿಬ್ಬಂದಿ ಮಂಜಪ್ಪ ಉಪಸ್ಥಿತರಿದ್ದರು.

- - -

(ಬಾಕ್ಸ್‌)

* ಮೊಬೈಲ್‌ ತ್ಯಜಿಸಿ ಪುಸ್ತಕಗಳ ಓದಿ: ತಿಪ್ಪೇಸ್ವಾಮಿ

ಶಾಲೆ ಮುಖ್ಯೋಪಾಧ್ಯಾಯ ಎನ್.ಎಸ್. ತಿಪ್ಪೇಸ್ವಾಮಿ ಮಾತನಾಡಿ, ಮೊಬೈಲ್ ಬಳಕೆಯ ಗೀಳಿನಿಂದ ಮಕ್ಕಳು ದಾರಿ ತಪ್ಪಿ ಅಪರಾಧ ಪ್ರಕರಣಗಳಿಗೆ ಒಳಗಾಗುತ್ತಿರುವ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಮೊಬೈಲ್ ಬಳಸುವುದು ತಪ್ಪಲ್ಲ. ಆದರೆ, ಅದನ್ನು ಯಾವ ಉದ್ದೇಶಕ್ಕಾಗಿ ಬಳಸುತ್ತೇವೆ ಎಂಬುದು ಮುಖ್ಯ. ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಪುಸ್ತಕ ಓದುವುದರ ಕಡೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಕಾನೂನು ನಮ್ಮ ರಕ್ಷಣೆಗಾಗಿಯೇ ಇರುವುದರಿಂದ ಅದರ ಅರಿವು ಪ್ರತಿಯೊಬ್ಬರಿಗೂ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

- - -

-04ಜೆ.ಜಿಎಲ್.1: ಜಗಳೂರು ತಾಲೂಕಿನ ಹನುಮಂತಾಪುರದ ರಾಜೀವ್ ಗಾಂಧಿ ಸ್ಮಾರಕ ಪ್ರೌಢಶಾಲೆಯಲ್ಲಿ ಸುರಕ್ಷಿತ್ ಬಚ್ಪನ್ ಅಭಿಯಾನ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ವಕೀಲ ತಿಪ್ಪೇಸ್ವಾಮಿ ಎಸ್. ಗೋಗುದ್ದು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.