ಶೋಷಿತ ಸಮುದಾಯಗಳ ಜಾಗೃತಿ ಅನಿವಾರ್ಯ: ಹೊದಿಗೆರೆ ರಮೇಶ್

| Published : Jan 26 2024, 01:45 AM IST

ಶೋಷಿತ ಸಮುದಾಯಗಳ ಜಾಗೃತಿ ಅನಿವಾರ್ಯ: ಹೊದಿಗೆರೆ ರಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಹಕ್ಕುಗಳ ರಕ್ಷಣೆಗಾಗಿ ಐಕ್ಯತೆಯಿಂದ ಹೋರಾಡಬೇಕು. ಶೋಷಿತ ಸಮುದಾಯಗಳು ಜಾಗೃತರಾಗಬೇಕಾದ ಅನಿವಾರ್ಯತೆ ಇದೆ. ಶೋಷಿತ ಸಮುದಾಯಗಳು 8 ರು. ಮೌಲ್ಯವಾಗಿದ್ದರೂ, ಅದನ್ನು ಎರಡು ರುಪಾಯಿಯೆಂಬ ದೃಷ್ಟಿಯಲ್ಲಿ ಕೆಲ ಸಮುದಾಯಗಳು ನೋಡುತ್ತಿವೆ. 8 ರು. ಮೌಲ್ಯದ ವಾಸ್ತವಾಂಶ ಗೊತ್ತಾಗಬೇಕೆಂದರೆ, ವೈಜ್ಞಾನಿಕವಾಗಿ ಆಗಿರುವ ಜಾತಿಗಣತಿ ವರದಿ ಅಂಗೀಕರಿಸಿ, ಜಾರಿಗೊಳಿಸುವ ಕೆಲಸ ಸರ್ಕಾರ ಮಾಡಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಾತಿ ಸಮೀಕ್ಷೆ ವೈಜ್ಞಾನಿಕವಾಗಿದ್ದರೂ ಕೆಲವರು ಅವೈಜ್ಞಾನಿಕವೆಂದು ಅಪಪ್ರಚಾರ ಮಾಡುತ್ತಿದ್ದು, ಯಾವುದೇ ಒತ್ತಡಗಳಿಗೂ ಮಣಿಯದೇ ರಾಜ್ಯ ಸರ್ಕಾರವು ಕಾಂತರಾಜು ವರದಿ ಜಾರಿಗೊಳಿಸಲಿ ಎಂದು ನಾಯಕ ಸಮಾಜದ ಮುಖಂಡ ಹೊದಿಗೆರೆ ರಮೇಶ್ ಒತ್ತಾಯಿಸಿದ್ದಾರೆ.

ನಗರದ ಛಲವಾದಿ ಮಹಾಸಭಾ ಸಮುದಾಯ ಭವನದಲ್ಲಿ ಗುರುವಾರ ಶೋಷಿತ ಸಮುದಾಯಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ,

ನಮ್ಮ ಹಕ್ಕುಗಳ ರಕ್ಷಣೆಗಾಗಿ ಐಕ್ಯತೆಯಿಂದ ಹೋರಾಡಬೇಕು. ಶೋಷಿತ ಸಮುದಾಯಗಳು ಜಾಗೃತರಾಗಬೇಕಾದ ಅನಿವಾರ್ಯತೆ ಇದೆ. ಶೋಷಿತ ಸಮುದಾಯಗಳು 8 ರು. ಮೌಲ್ಯವಾಗಿದ್ದರೂ, ಅದನ್ನು ಎರಡು ರುಪಾಯಿಯೆಂಬ ದೃಷ್ಟಿಯಲ್ಲಿ ಕೆಲ ಸಮುದಾಯಗಳು ನೋಡುತ್ತಿವೆ. 8 ರು. ಮೌಲ್ಯದ ವಾಸ್ತವಾಂಶ ಗೊತ್ತಾಗಬೇಕೆಂದರೆ, ವೈಜ್ಞಾನಿಕವಾಗಿ ಆಗಿರುವ ಜಾತಿಗಣತಿ ವರದಿ ಅಂಗೀಕರಿಸಿ, ಜಾರಿಗೊಳಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

ಚಿತ್ರದುರ್ಗದಲ್ಲಿ ಜ.28ರಂದು ನಡೆಯುವ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶ ಒಂದು ಚಳವಳಿ ರೂಪದಲ್ಲಿ ಯಶಸ್ವಿಯಾಗಬೇಕು. ದಾವಣಗೆರೆ ಜಿಲ್ಲೆಯಿಂದ ಅತೀ ಹೆಚ್ಚಿನ ಬಾಂಧವರು ಸಮಾವೇಶದಲ್ಲಿ ಪಾಲ್ಗೊಳ್ಳಬೇಕು. ಈ ಮೂಲಕ ಅಹಿಂದ ವರ್ಗಗಳ ನಾಯಕ ಸಿದ್ದರಾಮಯ್ಯನವರ ಕೈ ಬಲಪಡಿಸಲು ನಾವು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ನ್ಯಾಯಕ್ಕಾಗಿ ಸಂಘಟನೆ, ಹೋರಾಟ:

ನಾಯಕ ಸಮಾಜದ ಜಿಲ್ಲಾಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ ಮಾತನಾಡಿ, ಸಮಪಾಲು, ಸಮಬಾಳು ಕೇಳುವ ಹಕ್ಕು ಎಲ್ಲರಿಗೂ ಇದೆ. ಸೌಲಭ್ಯ ವಂಚಿತ ಸಮುದಾಯಗಳಿಗೆ ನ್ಯಾಯ ಸಿಗಬೇಕಾದರೆ, ಸಂಘಟನೆ, ಹೋರಾಟ, ಸಮಾವೇಶಗಳು ಮುಖ್ಯ. ಅಹಿಂದ ನಾಯಕ ಸಿದ್ದರಾಮಯ್ಯರಿಗೆ ಬಲ ತುಂಬಲು, ಶೋಷಿತ ಸಮುದಾಯಗಳು ಚಿತ್ರದುರ್ಗ ಸಮಾವೇಶ ಯಶಸ್ವಿಗೊಳಿಸಬೇಕು ಎಂದರು.

ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ, ನಿವೃತ್ತ ಎಸ್ಪಿ ಎನ್‌.ರುದ್ರಮುನಿ ಮಾತನಾಡಿ, ಸಂವಿಧಾನ ಸಾಮಾಜಿಕ ನ್ಯಾಯ, ಸಹಬಾಳ್ವೆ, ಸ್ವಾಭಿಮಾನದ ಸಂರಕ್ಷಣೆಗಾಗಿ ರಾಜ್ಯಾದ್ಯಂತ ಜಾಗೃತಿ ಮೂಡಿಸಿ, ಸಂಘಟಿತರಾಗಿ ಐಕ್ಯತೆಯಿಂದ ಹೋರಾಡೋಣ. ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಮತ್ತು ಮೀಸಲಾತಿಯ ಆಶಯಗಳ ನಾಶಪಡಿಸುತ್ತಿರುವ ಸರ್ಕಾರಗಳ ದುರಾಡಳಿತದ ವಿರುದ್ಧ ಶೋಷಿತರ ಜಾಗೃತಿ ಸಮಾವೇಶದಲ್ಲಿ ಸಂಕಲ್ಪ ಮಾಡೋಣ ಎಂದು ಮನವಿ ಮಾಡಿದರು.

ಕುರುಬ ಸಮಾಜದ ಬಿ.ಎಚ್.ಪರಶುರಾಮಪ್ಪ ಮಾತನಾಡಿ, ಚಿತ್ರದುರ್ಗದ ಸಮಾವೇಶ ಶೋಷಿತ ವರ್ಗಗಳ ಜಾಗೃತಿಗಾಗಿ ನಡೆಯುತ್ತಿದ್ದು, ಶೋಷಿತ ಸಮುದಾಯಗಳ ಒಗ್ಗಟ್ಟಾಗಿ ನಿಂತರೆ, ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಜೊತೆಗೆ ಸಾಮಾಜಿಕ ನ್ಯಾಯ ಪಡೆಯಲು ಸಾಧ್ಯ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಶಿವಕುಮಾರ ಒಡೆಯರ್ ಮಾತನಾಡಿ, ಸಂವಿಧಾನ ಆಶಯ ಸಾಮಾಜಿಕ ನ್ಯಾಯ, ಸಹಬಾಳ್ವೆ, ಸ್ವಾಭಿಮಾನ ಸಂರಕ್ಷಣೆಯಾಗಿದೆ. ಶೋಷಿತ ಸಮುದಾಯಗಳಿಗೆ ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಇದೆ. ದಾವಣಗೆರೆ ಜಿಲ್ಲೆಯಲ್ಲಿ ಪ್ರಬಲವಾಗಿರುವ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ದಲಿತರು ಲಕ್ಷಾಂತರ ಸಂಖ್ಯೆಯಲ್ಲಿ ಚಿತ್ರದುರ್ಗ ಸಮಾವೇಶದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಬಂಜಾರ ಸಮಾಜದ ಜಯದೇವ ನಾಯ್ಕ, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ವೀರೇಶ ನಾಯ್ಕ, ಡಾ.ಜಗನ್ನಾಥ, ಶೇಖರಪ್ಪ, ಚಂದ್ರಪ್ಪ, ಕೊಟ್ರಬಸಪ್ಪ, ಚಿದಾನಂದಪ್ಪ, ಎಸ್.ಎಸ್.ಗಿರೀಶ, ಕೆ.ರೇವಣಸಿದ್ದಪ್ಪ, ಎಂ.ಇ.ಮೌನೇಶ್ ಆಚಾರ, ಕರಿಬಸಪ್ಪ, ಸೋಮಶೇಖರ, ಆರ್‌.ರವಿ, ಶಿರಾಜ ಶೇಕ್‌, ಕೆ.ರೇವಣಸಿದ್ದಪ್ಪ, ಎನ್.ಎಂ.ಆಂಜನೇಯ ಗುರೂಜಿ, ದೇವರ ಬೆಳಕೆರೆ ಮಹೇಶ್ವರಪ್ಪ, ಕರಿಬಸಪ್ಪ, ಕವಿತಾ ಚಂದ್ರಶೇಖರ ಇತರರಿದ್ದರು.

ಶೋಷಿತ ಸಮುದಾಯಗಳು, ಅಹಿಂದ ವರ್ಗಗಳ ಮತವನ್ನು ಪಡೆದ ಜನ ಪ್ರತಿನಿಧಿಗಳು ಇಂತಹ ಸಮುದಾಯಗಳ ಸಮಾವೇಶಗಳಿಗೆ ಕೈಜೋಡಿಸಬೇಕಾಗಿದೆ. ಇಲ್ಲವಾದರೆ, ಮುಂದಿನ ದಿನಗಳಲ್ಲಿ ನೀವು ಅದರ ಪರಿಣಾಮ ಎದುರಿಸಬೇಕಾಗುತ್ತದೆ. ವೀರೇಶ ನಾಯ್ಕ, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ. ಶೋಷಿತರೆಲ್ಲಾ ಒಂದಾಗದಿದ್ದರೆ ಮುಂದೊಂದು ದಿನ ಅದರ ಪರಿಣಾಮ ನಾವೇ ಎದುರಿಸಬೇಕಾಗುತ್ತದೆ. ಅಹಿಂದ ವರ್ಗಗಳಿಗೆ ಜಾಗೃತಿ ಇದೆ. ಅಂತಹವರನ್ನು ಮುಖ್ಯವಾಹಿನಿಗೆ ತರಬೇಕಿದೆ. ಸರಿಯಾಗ ಮಾರ್ಗದರ್ಶನವು ಈ ಸಮುದಾಯಗಳಿಗೆ ಬೇಕಿದೆ.

ಜಯದೇವ ನಾಯ್ಕ, ಬಂಜಾರ ಸಮಾಜದ ಮುಖಂಡರು.