ಕೀರ್ತನೆಗಳ ಮೂಲಕ ಸಮಾಜದಲ್ಲಿ ಕನಕರು ಜಾಗೃತಿ: ಪುರುಷೋತ್ತಮ್

| Published : Nov 12 2025, 01:30 AM IST

ಕೀರ್ತನೆಗಳ ಮೂಲಕ ಸಮಾಜದಲ್ಲಿ ಕನಕರು ಜಾಗೃತಿ: ಪುರುಷೋತ್ತಮ್
Share this Article
  • FB
  • TW
  • Linkdin
  • Email

ಸಾರಾಂಶ

ಕನಕದಾಸರು ಮೂಡನಂಬಿಕೆ, ಅಸಮಾನತೆ ವಿರುದ್ದ ತಮ್ಮ ಕೀರ್ತನೆ ಮೂಲಕ ಜನರಲ್ಲಿ ಜಾಗೃತಿಗೊಳಿಸಿದರು ಎಂದು ತಾಲೂಕು ಕುರುಬ ಸಮಾಜದ ಮುಖಂಡ ಜಿ.ಪುರುಷೋತ್ತಮ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಕನಕದಾಸರು ಮೂಡನಂಬಿಕೆ, ಅಸಮಾನತೆ ವಿರುದ್ದ ತಮ್ಮ ಕೀರ್ತನೆ ಮೂಲಕ ಜನರಲ್ಲಿ ಜಾಗೃತಿಗೊಳಿಸಿದರು ಎಂದು ತಾಲೂಕು ಕುರುಬ ಸಮಾಜದ ಮುಖಂಡ ಜಿ.ಪುರುಷೋತ್ತಮ್ ತಿಳಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕನಕ ಜಯಂತಿ ಹಾಗೂ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಬಗ್ಗೆ ಉಪನ್ಯಾಸ ನೀಡಿದರು. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ 12ನೇ ಶತಮಾನದಲ್ಲಿ ಬಸವಣ್ಣನವರು ವಚನ ಸಾಹಿತ್ಯ ದ ಮೂಲಕ ಜನರಿಗೆ ತಿಳುವಳಿಕೆ ಮೂಡಿಸಿದರು.15-16ನೇ ಶತಮಾನದಲ್ಲಿ ದಾಸ ಸಾಹಿತ್ಯದ ಪರಂಪರೆ ಪ್ರಾರಂಭವಾಯಿತು. ಕನಕದಾಸರ ಮೊದಲ ಹೆಸರು ತಿಮ್ಮಪ್ಪ. ಕನಕದಾಸರು ಉಡುಪಿಯ ಕೃಷ್ಣನ ದರ್ಶನಕ್ಕೆ ಬಂದಾಗ ಅವರಿಗೆ ಕೃಷ್ಣನ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಲಾಯಿತು. ಆಗ ಕನಕದಾಸರು ದೇವಸ್ಥಾನದ ಸುತ್ತ ತಿರುಗುತ್ತ ಕೀರ್ತನೆ ಹಾಡುತ್ತಿದ್ದಾಗ ಕೃಷ್ಣನೇ ತಿರುಗುತ್ತಾನೆ. ಅಲ್ಲಿ ಕಿಂಡಿಯೊಂದು ನಿರ್ಮಾಣವಾಗಿ ಕೃಷ್ಣನು ಕನಕದಾಸರಿಗೆ ದರ್ಶನ ನೀಡಿದ್ದರು ಎಂದರು.

ಶಿಕ್ಷಕ ಹಿರೇನಲ್ಲೂರು ಶ್ರೀನಿವಾಸ್ ಒನಕೆ ಓಬವ್ವ ಅವರ ಬಗ್ಗೆ ಉಪನ್ಯಾಸ ನೀಡಿ, ಚಿತ್ರದುರ್ಗದ ಕೋಟೆಯ ರಕ್ಷಣೆಯನ್ನು ಮಾಡಿದ ಓಬವ್ವ ನ ಪರಿಚಯವು ನಾಗರಹಾವು ಸಿನಿಮಾದ ಒನಕೆ ಓಬವ್ವನ ಹಾಡು ಹಾಗೂ ನಟಿ ಜಯಂತಿಯ ಒನಕೆ ಓಬವ್ವನ ಪಾತ್ರದಿಂದ ಹೆಚ್ಚು ಜನಪ್ರಿಯವಾಯಿತು..ಚಿತ್ರದುರ್ಗದಲ್ಲಿ ಮದಕರಿನಾಯಕ ಆಳ್ವಿಕೆ ಮಾಡುತ್ತಿದ್ದಾಗ ಹೈದರಾಲಿಯು ಸೈನ್ಯ ಕಟ್ಟಿಕೊಂಡು ದಾಳಿಗೆ ಬಂದಾಗ ಕೋಟೆ ಕಾವಲು ಕಾಯುತ್ತಿರುವ ಒನಕೆ ಓಬವ್ವನ ಗಂಡ ಊಟ ಮಾಡುತ್ತಿದ್ದ. ಆಗ ಸಣ್ಣ ಕಿಂಡಿಯೊಳಗಿನಿಂದ ಹೈದರಾಲಿಯ ಸೈನಿಕರು ಒಬ್ಬರಾಗಿ ಕೋಟೆಯೊಳಗೆ ನುಗ್ಗುತ್ತಿದ್ದಾಗ ಕಾವಲುಗಾರನ ಪತ್ನಿ ಓಬವ್ವ ಒನಕೆಯಿಂದ ಒಬ್ಬರನ್ನೇ ಕೊಂದು ಸೈನ್ಯವನ್ನು ನಾಶ ಮಾಡಿ ಚಿತ್ರದುರ್ಗದ ಕೋಟೆ ರಕ್ಷಣೆ ಮಾಡಿದ ಕೀರ್ತಿ ಓಬವ್ವಗೆ ಸಲ್ಲುತ್ತದೆ. ಕೋಟೆ ರಕ್ಷಣೆ ಮಾಡಿದ ಓಬವ್ವ ಮತ್ತೆ 3 ವರ್ಷ ಬದುಕುತ್ತಾಳೆ.ಮದಕರಿ ನಾಯಕ ಒನಕೆ ಓಬವ್ವಳ ನೆನಪಿನಲ್ಲಿ ಮತ್ತೆ 3 ಕೋಟೆ ಕಟ್ಟಿ ಓಬವ್ವಳನ ಕಿಂಡಿ ಎಂದು ನಾಮಕರಣ ಮಾಡುತ್ತಾನೆ.ಅಗಸದ ಕಲ್ಲು ಎಂಬ ಊರಿನಲ್ಲಿ ಒನಕೆ ಓಬವ್ವಳ ಹೆಸರಿನಲ್ಲಿ ದೇವಸ್ಥಾನ ಕಟ್ಟಲಾಗಿದೆ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ ಮಾತನಾಡಿ, ಒನಕೆ ಓಬವ್ವ ಎಲ್ಲಾ ಮಹಿಳೆಯರಿಗೆ ಆದರ್ಶವಾಗಿ ನಿಲ್ಲುತ್ತಾಳೆ. ಹಿಂದಿನ ಸಾಧಕರ ಆದರ್ಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕೊಪ್ಪ ಎ.ಪಿ.ಎಂ.ಸಿ. ನಿರ್ದೇಶಕ ಎಚ್‌.ಎಂ.ಶಿವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಒನಕೆ ಓಬವ್ವ ಹಾಗೂ ಕನಕದಾಸರ ಜಯಂತಿಯನ್ನು ಸರ್ಕಾರ ಆಚರಿಸುತ್ತಿರುವುದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.

ಪೊಲೀಸ್ ಠಾಣಾಧಿಕಾರಿ ನಿರಂಜನಗೌಡ, ತಹಸೀಲ್ದಾರ್ ಡಾ.ನೂರಲ್ ಹುದಾ, ಜಿಲ್ಲಾ ಎಸ್.ಟಿ. ಎಸ್.ಸಿ ದೌರ್ಜನ್ಯ ಸಮಿತಿ ಸದಸ್ಯ ಶೆಟ್ಟಿಕೊಪ್ಪ ಮಹೇಶ್, ಚೆಲುವಾದಿ ಮಹಾ ಸಭಾದ ಕ್ಷೇತ್ರ ಅಧ್ಯಕ್ಷ ಡಿ.ರಾಮು, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಇದ್ದರು. ಅತಿಥಿಗಳು ಕನಕದಾಸರು, ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಿಷ್ಮಾ ಜೈನ್ ಕಾರ್ಯಕ್ರಮ ನಿರೂಪಿಸಿದರು.