ಕುಶಾಲನಗರದಲ್ಲಿ ವಾಸವಿ ಸಪ್ತಾಹದ ಮೊದಲ ಕಾರ್ಯಕ್ರಮ ಮಾದಕ ವ್ಯಸನ‌ಮುಕ್ತ ಸಮಾಜ ನಿರ್ಮಾಣ ಹಿನ್ನೆಲೆಯಲ್ಲಿ ವಾಕಥಾನ್, ಸೈಕ್ಲಾಥಾನ್ ಸಂಪನ್ನಗೊಂಡಿತು.

ಕುಶಾಲನಗರ: ಸಂಘ ಸಂಸ್ಥೆಗಳ ಮೂಲಕ ಯುವ ಪೀಳಿಗೆ ದುಶ್ಚಟಗಳಿಗೆ ದಾಸರಾಗದಂತೆ ಅರಿವು, ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.ಕುಶಾಲನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಹಾಗೂ ಆರ್ಯವೈಶ್ಯ ಮಂಡಳಿಯಿಂದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ನಾನಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ವಾಸವಿ ಸಪ್ತಾಹದ ಮೊದಲ ಕಾರ್ಯಕ್ರಮ ಮಾದಕ ವ್ಯಸನ‌ಮುಕ್ತ ಸಮಾಜ ನಿರ್ಮಾಣ ಹಿನ್ನೆಲೆಯಲ್ಲಿ ನಡೆದ ವಾಕಥಾನ್, ಸೈಕ್ಲಾಥಾನ್ ಗೆ ಚಾಲನೆ ನೀಡಿ ಮಾತನಾಡಿದರು.

ಪೋಷಕರು ತಮ್ಮ ಮಕ್ಕಳ ಬಗ್ಗೆ ಸದಾ ನಿಗಾ ವಹಿಸಬೇಕು. ಮಾದಕ ವ್ಯಸನಕ್ಕೆ ತುತ್ತಾಗಿ ಜೀವನ ಹಾಳುಮಾಡಿಕೊಳ್ಳಬಾರದು. ಮಾದಕ ವಸ್ತುಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೂಡ ಹೆಚ್ಚಿನ ಜವಾಬ್ದಾರಿ ತೋರಬೇಕು ಎಂದು ಕರೆ ನೀಡಿದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ‌ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಕುಶಾಲನಗರದ ಅಭಿವೃದ್ಧಿಯಲ್ಲಿ ಆರ್ಯವೈಶ್ಯ ಸಮಾಜದ ಕೊಡುಗೆ ಅಪಾರವಿದೆ ಎಂದರು. ಶೈಕ್ಷಣಿಕ ಕೇಂದ್ರಗಳ ಸ್ಥಾಪನೆ ಅಪಾರ ಪ್ರಮಾಣದ ಭೂಮಿ ಒದಗಿಸಿ ಊರನ್ನು ಕಟ್ಟುವ ‌ಕೆಲಸ‌ ಮಾಡಿದ್ದಾರೆ. ಇಂದು ಕೂಡ ಆರ್ಯವೈಶ್ಯ ಸಮಾಜ ಹಲವು ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವ ಶ್ಲಾಘನೀಯ ವಿಚಾರ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಶಕ್ತಿ ಸಲಹಾ ಸಂಪಾದಕರಾದ ಬಿ.ಜಿ. ಅನಂತಶಯನ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ , ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಚ್.ಟಿ. ಅನಿಲ್ಅ ಮಾತನಾಡಿದರು.

ವಾಸವಿ ಸಪ್ತಾಹ ಕಾರ್ಯಕ್ರಮ ಆಯೋಜಕರು ಹಾಗೂ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ವಾಸವಿ ಸಪ್ತಾಹ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು.

ಕುಶಾಲನಗರದ ರೋಟರಿ, ಲಯನ್ಸ್, ಜೆಸಿಐ, ಕಾರ್ಯನಿರತ ಪತ್ರಕರ್ತರ ಸಂಘ, ಪೊಲೀಸ್ ಇಲಾಖೆ, ಸ್ಕೌಟ್ಸ್ ಅಂಡ್ ಗೈಡ್ಸ್, ಸ್ಟೂಡೆಂಟ್ ಪೊಲೀಸ್ ಕೆಡೆಟ್ಸ್, ಕೊಡಗು ಅಭಿವೃದ್ಧಿ ಸಮಿತಿ, ನಿವೃತ್ತ ಸೈನಿಕರ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಆರ್ಯವೈಶ್ಯ ಮಂಡಳಿ ಅಂಗಸಂಸ್ಥೆಗಳು ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮಕ್ಕೆ ಕೈಜೋಡಿಸಿ ನಡಿಗೆಯಲ್ಲಿ ಪಾಲ್ಗೊಂಡರು.

ಸರಕಾರಿ ಪಾಲಿಟೆಕ್ನಿಕ್ ಬಳಿಯಿಂದ ಕುಶಾಲನಗರ ತನಕ ನಡೆದ ವಾಕಥಾನ್, ಸೈಕ್ಲಥಾನ್ ಸಂದರ್ಭ ಮಾದಕ ವಸ್ತುಗಳ ದುಷ್ಪರಿಣಾಮ, ವ್ಯಸನ ಮುಕ್ತ ಸಮಾಜ ನಿರ್ಮಿಸುವ ಘೋಷಣೆಗಳ ಜಾಗೃತಿ ಫಲಕಗಳನ್ನು ಹಿಡಿದು ಜಾಗೃತಿ‌ ಮೂಡಿಸಲಾಯಿತು. ಕುಶಾಲನಗರ ಗಣಪತಿ ದೇವಾಲಯ ಬಳಿ ಸೇರಿ ಸ್ವಲ್ಪಕಾಲ ಮಾನವ ಸರಪಳಿ ರಚಿಸಿ ಮಾದಕ ವಸ್ತು ಬಳಕೆ ವಿರುದ್ಧ ಘೋಷಣೆ ಕೂಗಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.ನಂತರ ಕೊಡಗು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ, ಬೋಧಕ ಆಸ್ಪತ್ರೆ, ವಾಸವಿ ಯುವಜನ ಚಾರಿಟೇಬಲ್ ಟ್ರಸ್ಟ್ ಮತ್ತು ವಾಸವಿ ಯುವಜನ ಸಂಘದ ಸಹಯೋಗದೊಂದಿಗೆ ಕನ್ನಿಕಾ ಕನ್ವೆನ್ಷನ್ ಸೆಂಟರ್‌ನಲ್ಲಿ ಆರೋಗ್ಯ ತಪಾಸಣಾ ಉಚಿತ ಶಿಬಿರ ಮತ್ತು ರಕ್ತದಾನ ಶಿಬಿರ ನಡೆಯಿತು. ಮಾಜಿ ಶಾಸಕ ಅಪ್ಪಚ್ಚು ರಂಜನ್ ಶಿಬಿರ ಮತ್ತು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಶಿಬಿರದ ರಕ್ತದಾನ ಕೇಂದ್ರ ಉದ್ಘಾಟಿಸಿ ಮಾತನಾಡಿದರು.ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಮತ್ತು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಮತ್ತು‌ ಮಂಡಳಿ ಪ್ರಮುಖರಾದ ಕೆ. ಪ್ರವೀಣ್, ಪಿ.ಎಸ್. ಪ್ರಶಾಂತ್, ಬಿ.ಎಲ್. ಅಶೋಕ್ ಕುಮಾರ್, ಬಿ.ಆರ್. ನಟರಾಜ್, ಕೆ.ಜೆ. ಸತೀಶ್, ಎ.ಎಸ್. ಕುಮಾರ್, ಬಿ.ಎನ್. ಅಂಜನ್, ಅಮೃತ್ ರಾಜ್, ವೈಶಾಖ್ ಮಹಿಳಾ ಸಂಘಟನೆ ಪ್ರಮುಖರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಇದ್ದರು.