Awareness should be raised to control human trafficking.
-ಡಿಸಿ ರಾಹುಲ್ ಪಾಂಡ್ವೆ ಸಲಹೆ । ಯಾದಗಿರಿಯಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಪ್ರಯುಕ್ತ ಕಾನೂನು ಅರಿವು- ನೆರವು ಕಾರ್ಯಕ್ರಮ
-----ಕನ್ನಡಪ್ರಭ ವಾರ್ತೆ ಯಾದಗಿರಿ
ಮಾನವ ಕಳ್ಳಸಾಗಣೆ ಎನ್ನುವುದು ವ್ಯಕ್ತಿಗಳನ್ನು ಬಲವಂತ, ವಂಚನೆ, ಅಥವಾ ಬೆದರಿಕೆಯ ಮೂಲಕ ಬಲೆಗೆ ಬೀಳಿಸಿ, ಸಾಗಣೆ ಮಾಡಿ, ಲಾಭಕ್ಕಾಗಿ ಶೋಷಣೆ ಮಾಡುವ ಒಂದು ಅಮಾನವೀಯ ಮತ್ತು ಕಾನೂನುಬಾಹಿರ ಕೃತ್ಯವಾಗಿದೆ ಎಂದು ಜಿಲ್ಲಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಹೇಳಿದರು.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸರ್ಕಾರಿ ಪದವಿ ಮಹಾವಿದ್ಯಾಲಯ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ “ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ”-2026 ಅಂಗವಾಗಿ ಕಾನೂನು ಅರಿವು- ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಪರಿಚಿತರು ನೀಡುವ ದೊಡ್ಡ ಉದ್ಯೋಗಗಳ ಆಮಿಷಗಳಿಗೆ ಸುಲಭವಾಗಿ ಮರುಳಾಗಬಾರದು. ಸಾರ್ವಜನಿಕರಲ್ಲಿ ಮತ್ತು ಗ್ರಾಮೀಣ ಭಾಗಗಳಲ್ಲಿ ಈ ಬಗ್ಗೆ ನಿರಂತರ ಜಾಗೃತಿ ಮೂಡಿಸಬೇಕು. ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಮಕ್ಕಳ ಸಹಾಯವಾಣಿ ಸಂಖ್ಯೆಗೆ ಮಾಹಿತಿ ನೀಡಬೇಕೆಂದರು.ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ಬಲವಂತವಾಗಿ ವೇಶ್ಯಾವಾಟಿಕೆ ಮತ್ತು ಲೈಂಗಿಕ ದಂಧೆಗೆ ತಳ್ಳುವುದು. ಕಡಿಮೆ ವೇತನ ಅಥವಾ ಯಾವುದೇ ವೇತನವಿಲ್ಲದೆ ಕೃಷಿ, ಇಟ್ಟಿಗೆ ಭಟ್ಟಿ, ಅಥವಾ ಗೃಹ ಕೆಲಸಗಳಲ್ಲಿ ಬಲವಂತವಾಗಿ ದುಡಿಸಿಕೊಳ್ಳುವುದು.
ಕಾನೂನುಬಾಹಿರವಾಗಿ ಮನುಷ್ಯರ ಕಿಡ್ನಿ ಸೇರಿದಂತೆ ಇತರೆ ಪ್ರಮುಖ ಅಂಗಾಂಗಗಳನ್ನು ತೆಗೆದು ಮಾರಾಟ ಮಾಡುವುದು. ಅಪ್ರಾಪ್ತ ಮಕ್ಕಳನ್ನು ಅಪಹರಿಸಿ ಅಥವಾ ಪೋಷಕರಿಗೆ ವಂಚಿಸಿ ಭಿಕ್ಷಾಟನೆ ಮತ್ತು ಅಪಾಯಕಾರಿ ಕೆಲಸಗಳಿಗೆ ಬಳಸುವುದು. ಆರ್ಥಿಕ ಸಂಕಷ್ಟದಲ್ಲಿರುವ ಜನರನ್ನು ಹಣದ ಆಮಿಷ ಒಡ್ಡಿ ಸುಲಭವಾಗಿ ವಂಚಿಸಲಾಗುತ್ತದೆ.ಒಳ್ಳೆಯ ಉದ್ಯೋಗದ ಆಸೆ ತೋರಿಸಿ ಯುವಕ-ಯುವತಿಯರನ್ನು ಬೇರೆ ನಗರ ಅಥವಾ ದೇಶಗಳಿಗೆ ಸಾಗಿಸಲಾಗುತ್ತದೆ. ಕಾನೂನು ಮತ್ತು ಸುರಕ್ಷತೆಯ ಬಗ್ಗೆ ಅರಿವಿಲ್ಲದಿರುವುದು ಕಳ್ಳಸಾಗಣೆದಾರರಿಗೆ ವರದಾನವಾಗುತ್ತದೆ
ಕೇಂದ್ರ ಸರ್ಕಾರವು ಮಾನವ ಕಳ್ಳಸಾಗಣೆಯನ್ನು ತಡೆಯಲು ಕಠಿಣ ಕಾನೂನುಗಳನ್ನು ರೂಪಿಸಿದೆ. ಸಂವಿಧಾನದ ವಿಧಿ 23(1) ವಿಧಿಯಡಿ ಮಾನವ ಕಳ್ಳಸಾಗಣೆ ಮತ್ತು ಬಲವಂತದ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಅನೈತಿಕ ಸಾಗಣೆ ತಡೆ ಕಾಯ್ದೆ ಲೈಂಗಿಕ ಶೋಷಣೆಗಾಗಿ ನಡೆಯುವ ಕಳ್ಳಸಾಗಣೆಯನ್ನು ತಡೆಯಲು ಈ ಕಾಯ್ದೆಯಡಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
ಭಾರತೀಯ ನ್ಯಾಯ ಸಂಹಿತೆ ವ್ಯಕ್ತಿಗಳ ಅಪಹರಣ ಮತ್ತು ಸಾಗಣೆಗೆ ಸಂಬಂಧಿಸಿದಂತೆ ಕಠಿಣ ಜೈಲು ಶಿಕ್ಷೆಯ ನಿಬಂಧನೆಗಳಿವೆ.ಮಾನವ ಕಳ್ಳಸಾಗಾಣಿಕೆ ವಿರೋಧಿ ಘಟಕವು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಯಲ್ಲಿ ಈ ವಿಶೇಷ ಘಟಕವು ಕಾರ್ಯನಿರ್ವಹಿಸುತ್ತಿದೆ.
ಪ್ರಾಂಶುಪಾಲ ಸುಭಾಷಚಂದ್ರ ಕೌಲಗಿ ಮಾತನಾಡಿ, ಮಾನವ ಕಳ್ಳಸಾಗಣೆ ತಡೆಗಟ್ಟುವಲ್ಲಿ ಸಮಾಜದ ಪಾತ್ರ ಬಹುದೊಡ್ಡದಿದೆ ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಭೀಮರಾಯ, ಪಿಎಸ್ ಐ ಹಣಮಂತ ಬಂಕಲಗಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.