ಮಳೆಯ ನಡುವೆ ಡೆಂಘೀ ಕುರಿತು ಜನಜಾಗೃತಿ

| Published : Jul 29 2024, 12:48 AM IST

ಸಾರಾಂಶ

ಹುನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯದ ಮೂಲಕ ಡೆಂಘೀ ಕುರಿತು ಜಾಗೃತಿ ಮೂಡಿಸಲಾಯಿತು. ಮಳೆಯಿಂದಾಗಿ ರಸ್ತೆ ಹಾಗೂ ಮನೆಯ ಅಕ್ಕ-ಪಕ್ಕ ಗುಂಡಿಗಳಲ್ಲಿ ನೀರು ನಿಂತು ಡೆಂಘೀ ಹಾಗೂ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವ ಕಾರಣ ಜಾಗರೂಕರಾಗಿರುವಂತೆ ತಿಳಿಸಲಾಯಿತು. ಡೆಂಘೀಯಂತಹ ರೋಗವನ್ನು ತಡೆಗಟ್ಟಲು ಪ್ರಥಮವಾಗಿ ನಮ್ಮ ಮನೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿನ ಗುಂಡಿಗಳಲ್ಲಿ ಮತ್ತಿತರೆಡೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ತಿಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಹಾಗೂ ಮನೆಯ ಅಕ್ಕ-ಪಕ್ಕ ಗುಂಡಿಗಳಲ್ಲಿ ನೀರು ನಿಂತು ಡೆಂಘೀ ಹಾಗೂ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹುನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತಿದ್ದೇವೆ ಎಂದು ಹುನುಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಆರ್‌. ಹರೀಶ್ ಹೇಳಿದರು.

ತಾಲೂಕಿನ ಹುನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೇನಹಳ್ಳಿ, ಕುಪ್ಪಗೊಡು ಗ್ರಾಮಗಳಲ್ಲಿ ಆಯೋಜಿಸಿದ್ದ ಸ್ವಚ್ಛತಾ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಡೆಂಘೀ ಹಾಗೂ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಆಸ್ಪತ್ರೆಗೆ ಹೋಗುತ್ತಿರುವುದನ್ನು ಗಮನಿಸಿದ್ದೇವೆ. ಆದ್ದರಿಂದ ಡೆಂಘೀಯಂತಹ ರೋಗವನ್ನು ತಡೆಗಟ್ಟಲು ಪ್ರಥಮವಾಗಿ ನಮ್ಮ ಮನೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿನ ಗುಂಡಿಗಳಲ್ಲಿ ಮತ್ತಿತರೆಡೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.

ಮನೆಯ ಮುಂಭಾಗದ ಚರಂಡಿ, ತೆಂಗಿನ ಚಿಪ್ಪು, ಗರಟೆ ಸೇರಿದಂತೆ ಯಾವುದರಲ್ಲೂ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಜತೆಗೆ ನಾವು ನಮ್ಮ ಸುತ್ತಲಿನ ಪರಿಸರವನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳುತ್ತೇವೆಯೋ ಹಾಗೆ ನಮ್ಮ ಆರೋಗ್ಯವು ಸುಧಾರಿಸುತ್ತದೆ. ಈ ನಿಟ್ಟಿನಲ್ಲಿ ನಮ್ಮ ಗ್ರಾಮಗಳ ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಿ ನಿಮ್ಮೊಂದಿಗೆ ಇತರರ ಆರೋಗ್ಯವನ್ನು ಕಾಪಾಡಲು ಮುಂದಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಪಂಚಾಯಿತಿಯಿಂದ ಸ್ವಚ್ಛತಾ ಕಾರ್ಯ ಕೈಗೊಂಡಿದ್ದೇವೆ ಎಂದರು.

ಹುನುಗನಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ರೇವತಿ ಬಾರ್ಕೂರ್‌, ಕಾರ್ಯದರ್ಶಿ ಮಧು, ಬಿಲ್ ಕಲೆಕ್ಟರ್ ವೀರಭದ್ರಯ್ಯ, ವಾಟರ್‌ಮನ್‌ಗಳಾದ ನಾಗೇಶ್, ವಸಂತ್, ವಿಜಿತ್ ಇದ್ದರು.