ಎಚ್.ಐ.ವಿ ಸೋಂಕು ಕುರಿತು ಜಾಗೃತಿ ಅಗತ್ಯ: ನ್ಯಾಯಾಧೀಶೆ ದಿವ್ಯಶ್ರಿ ಸಿ.ಎಂ.

| Published : Dec 03 2024, 12:34 AM IST

ಸಾರಾಂಶ

ಸಮಾಜದಲ್ಲಿ ಅನೇಕ ಜನರು ತಮ್ಮ ತಪ್ಪು ಇಲ್ಲದೇ ಅಥವಾ ಅರಿವಿಲ್ಲದೆ ಇಂತಹ ಏಡ್ಸ್ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರಿ ಸಿ.ಎಂ. ಹೇಳಿದರು.

ಕಾರವಾರ: ಸಮಾಜದಲ್ಲಿ ಎಚ್.ಐ.ವಿ. ಸೋಂಕು ಪೀಡಿತರೊಂದಿಗೆ ಬೇರೆ ರೋಗಗಳ ಪೀಡಿತರಿಗಿಂತಲೂ ಭಿನ್ನವಾಗಿ ವರ್ತಿಸುವುದಲ್ಲದೇ ಅವರನ್ನು ತಾರತಮ್ಯ ಮಾಡುತ್ತಾರೆ. ಇದು ಮಾನವಕುಲಕ್ಕೆ ಅಂಟಿಕೊಂಡ ದೊಡ್ಡ ಕಳಂಕವಾಗಿದ್ದು, ಇದರ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರಿ ಸಿ.ಎಂ. ಹೇಳಿದರು.

ಇಲ್ಲಿನ ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಅನೇಕ ಜನರು ತಮ್ಮ ತಪ್ಪು ಇಲ್ಲದೇ ಅಥವಾ ಅರಿವಿಲ್ಲದೆ ಇಂತಹ ಏಡ್ಸ್ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಎಚ್.ಐ.ವಿ. ಸೋಂಕು ಪೀಡಿತರು ಹಾಗೂ ಅವರ ಕುಟುಂಬದವರು ಶಿಕ್ಷಣ, ಉದ್ಯೋಗ ಇತರೆ ಕ್ಷೇತ್ರದಿಂದ ವಂಚಿತರಾಗಿದ್ದಾರೆ. ಹಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸೋಂಕು ಪೀಡಿತರನ್ನು ಕಳಂಕ ಎಂದು ಭಾವಿಸದೆ ಆರೈಕೆ ಮಾಡಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಹಾಗೂ ಸೋಂಕು ಪೀಡಿತರನ್ನು ಎಲ್ಲರೂ ಸಮಾನತೆಯಿಂದ ಕಾಣಬೇಕು ಎಂದರು.

ಪ್ರತಿಯೊಬ್ಬರಿಗೆ ಜೀವಿಸುವ ಹಕ್ಕು ಇರುವ ರೀತಿಯಲ್ಲಿ ಆರೋಗ್ಯದ ಹಕ್ಕೂ ಇದೆ. ಜೀವನ ಶೈಲಿಯಲ್ಲಿ ಆಹಾರ, ವಿಚಾರ, ಅಲೋಚನೆ ನಡವಳಿಕೆಯಲ್ಲಿ ಸಂಯಮ ಮತ್ತು ಶಿಸ್ತುನ್ನು ಅಳವಡಿಸಿಕೊಂಡಾಗ ರೋಗಗಳು ಬರುವುದನ್ನು ತಡೆಯಲು ಸಾಧ್ಯವಿದೆ ಎಂದು ಅಭಿಪ್ರಾಯಿಸಿದರು.

ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್. ಬಿ.ವಿ. ಮಾತನಾಡಿ, ವಲಸೆ ಕಾರ್ಮಿಕರು, ಡೈವರ್‌ಗಳಿಗೆ ಹಾಗೂ ಲೈಂಗಿಕ ಕಾರ್ಯಕರ್ತೆಯರಿಗೆ ಹಾಗೂ ಗರ್ಭಿಣಿಯರಲ್ಲಿ ಎಚ್.ಐ.ವಿ. ಸೋಂಕು ಕಂಡು ಬಂದಲ್ಲಿ ಅವರಿಗೆ ಚಿಕಿತ್ಸೆ ನೀಡಲು ಜಿಲ್ಲಾ, ತಾಲೂಕು ಮಟ್ಟದಲ್ಲಿ ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅವರಲ್ಲಿ ಸೋಂಕು ದೃಡಪಟ್ಟಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಹಾಗೇ ಜನಿಸುವ ಮಗುವನ್ನೂ 18 ತಿಂಗಳ ಕಾಲ ಪರೀಕ್ಷೆಗೆ ಒಳಪಡಿಸಿ ಸೋಂಕು ಇಲ್ಲದಿರುವ ಬಗ್ಗೆ ಖಚಿತ ಪಡಿಸಲಾಗುತ್ತದೆ . ಈ ರೋಗ 90ರಷ್ಟು ಲೈಂಗಿಕ ಸಂಪರ್ಕ ಹಾಗೂ ಮಾದಕ ವಸ್ತುಗಳನ್ನು ಸೇವನೆ ಮಾಡುವುದರಿಂದ ಹರಡಲಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕ್ಷಯ ರೋಗ ಅಧಿಕಾರಿ ಡಾ. ಹರ್ಷ ಅವರು ದೇಶ, ರಾಜ್ಯ, ಜಿಲ್ಲೆಯಲ್ಲಿ ಎಚ್.ಐ.ವಿಗೆ ಒಳಪಟ್ಟಿರುವ ಅಂಕಿ ಅಂಶದ ಬಗ್ಗೆ ಮಾಹಿತಿ ನೀಡಿದರು. ಸಭಾ ಕಾರ್ಯಕ್ರಮದ ಪೂರ್ವ ನಗರದ ಜಿಲ್ಲಾಧಿಕಾರಿ ಕಚೇರಿ ಆವಾರದಿಂದ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಚಾಲನೆ ನೀಡದರು. ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಹೇಮಗಿರಿ ಕೆ. ಏಡ್ಸ್ ಕುರಿತು ವಿಶೇಷ ಉಪನ್ಯಾಸ ನೀಡಿದರು. ಎಂಬಿಬಿಎಸ್ ವಿದ್ಯಾರ್ಥಿಗಳಿಂದ ಹಾಗೂ ಬಂಟದೇವ ಜನಪದ ಕಲಾತಂಡದಿಂದ ಎಚ್.ಐ.ವಿ ಸೋಕು ಹರಡುವಿಕೆ ಕುರಿತು ನಾಟಕ ಪ್ರದರ್ಶನ ನಡೆಯಿತು.

ಜಿಲ್ಲೆಯಲ್ಲಿ ಎಚ್.ಐ.ವಿ, ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಉತ್ತಮ ಕಾರ್ಯ ಮಾಡುತ್ತಿರುವ ಹಳಿಯಾಳದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಲಕ್ಷ್ಮಣ ಕಾಳೆ ಹಾಗೂ ರಾಜ್ಯಮಟ್ಟದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕುಮಟಾ ಸಿ.ವಿ.ಎಸ್.ಕೆ. ಪ್ರೌಢ ಶಾಲಾ ವಿದ್ಯಾರ್ಥಿಗಳಾದ ಸ್ನೇಹಾ ಉದಯ ನಾಯ್ಕ ಹಾಗೂ ಸಿಂಚನಾ ಜಿ. ಭಟ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಅನ್ನಪೂರ್ಣ ವಸ್ತ್ರದ, ಆರ್‌ಸಿಎಚ್‌ಒ ಡಾ. ನಟರಾಜ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ವಿ.ಎಂ. ಹೆಗಡೆ ಮೊದಲಾದವರು ಇದ್ದರು.