ಬಸವಣ್ಣನವರ ಕಾಲದ ಸಮಾನತೆಯ ಕ್ರಾಂತಿ ಮತ್ತು ಲಿಂಗೈಕ್ಯ ಜಯದೇವ ಜಗದ್ಗುರುಗಳ ಕಾಲದ ಸಾಮಾಜಿಕ ಮತ್ತು ಧಾರ್ಮಿಕ ಪರಿವರ್ತನೆಯು ಬದಲಾವಣೆಯ ಮಹತ್ವದ ಕ್ಷಣಗಳಾಗಿವೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.

- ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರುಗಳ 70ನೇ ಸ್ಮರಣೋತ್ಸವ ಉದ್ಘಾಟಿಸಿ ಡಾ.ಶಿವಮೂರ್ತಿ ಮುರುಘಾ ಶರಣರ ನುಡಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಸವಣ್ಣನವರ ಕಾಲದ ಸಮಾನತೆಯ ಕ್ರಾಂತಿ ಮತ್ತು ಲಿಂಗೈಕ್ಯ ಜಯದೇವ ಜಗದ್ಗುರುಗಳ ಕಾಲದ ಸಾಮಾಜಿಕ ಮತ್ತು ಧಾರ್ಮಿಕ ಪರಿವರ್ತನೆಯು ಬದಲಾವಣೆಯ ಮಹತ್ವದ ಕ್ಷಣಗಳಾಗಿವೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಗುರುವಾರ ಶ್ರೀ ಶಿವಯೋಗಾಶ್ರಮ ಟ್ರಸ್ಟ್‌ ಹಮ್ಮಿಕೊಂಡಿದ್ದ ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರುಗಳ 70ನೇ ಸ್ಮರಣೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಯದೇವ ಶ್ರೀಗಳು ಆಂತರ್ಯದಲ್ಲಿ ಪರೋಪಕಾರಿ, ಪರಿವರ್ತನಾಕಾರಿಯಾಗಿದೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು ಎಂದರು.

ಜಗತ್ತಿನಲ್ಲಿ ಆಗೊಮ್ಮೆ, ಈಗೊಮ್ಮೆ ಸಾಧಕರು ಹುಟ್ಟುತ್ತಾರೆ. ಅಧ್ಯಾತ್ಮ ಅಥವಾ ಸಮಾಜ ಸುಧಾರಕರು ಬರುತ್ತಾರೆ. ಬಸವಣ್ಣ ಸಹ ಅಂತಹ ಅದ್ಭುತ ಸಾಧಕರು. ಅಲ್ಲಮಪ್ರಭು ಸೇರಿದಂತೆ ಎಲ್ಲ ಶರಣ-ಶರಣೆಯರೂ ಇದೇ ಸಾಲಿಗೆ ಸೇರಿದವರು. ಜಯದೇವ ಜಗದ್ಗುರುಗಳು ಅಗಲಿ 7 ದಶಕಗಳೇ ಕಳೆದಿವೆ. ಜಯದೇವ ಶ್ರೀಗಳು ಎಂದಿಗೂ ವಿಶ್ರಾಂತಿ ಪಡೆಯುತ್ತಿರಲಿಲ್ಲ. ಶರಣ ಸಂಸ್ಕೃತಿಯು ಶ್ರಮ ಸಂಸ್ಕೃತಿಯನ್ನು ಕಲಿಸಿದೆ ಎಂದು ತಿಳಿಸಿದರು.

ಜಯದೇವ ಸ್ವಾಮಿಗಳು ಯುಗ ಪ್ರವರ್ತಕರು. ಸಮಾಜ ಸುಧಾರಕ, ಧಾರ್ಮಿಕ ಸುಧಾರಕರಾಗಿದ್ದರು. ಗಾಂಧೀಜಿ ಅವರನ್ನು ಭೇಟಿಯಾದ ಬಳಿಕ ರೇಷ್ಮೇ ಪೋಷಾಕನ್ನೇ ಬಿಟ್ಟು, ಖಾದಿ ಧರಿಸುವುದನ್ನು ಶುರು ಮಾಡಿದರು. ವರ್ಷದ 11 ತಿಂಗಳು ಸಂಚಾರ ಮಾಡುತ್ತಾ ಧರ್ಮ ಪ್ರಚಾರ, ಸಮಾಜ ಸೇವೆಯಲ್ಲಿ ಜಯದೇವ ಶ್ರೀ ತೊಡಗುತ್ತಿದ್ದರು. ರಾಜ್ಯದ ಮೂಲೆ ಮೂಲೆಗೂ ಪ್ರವಾಸ ಮಾಡುತ್ತಿದ್ದರು. ಪ್ರಾಂತ್ಯದಲ್ಲಿ ಪರ ಮತೀಯರನ್ನೂ ಲಿಂಗಾಯತರನ್ನಾಗಿ ಪರಿವರ್ತಿಸುವ ಮಹತ್ತರ ಕಾರ್ಯವು ಗುರುಗಳ ಅವಧಿಯಲ್ಲಿ ಆಗಿತ್ತು. ದೇವಸ್ಥಾನ, ಮಠ, ಸಿರಿ ಸಂಪತ್ತನ್ನು ಸಮಾಜಕ್ಕೆ ಸಮರ್ಪಣೆ ಮಾಡುವ ಮೂಲಕ ಬಸವಣ್ಣನವರ ತತ್ವಗಳನ್ನು ಮುಂದುವರಿಸಿದ್ದರು ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಜಯದೇವ ಶ್ರೀಗಳ ಉತ್ಸವ:

ಆಸ್ಪತ್ರೆಗಳು, ವೈದ್ಯರ ಕೊರತೆ ಇದ್ದ ಕಾಲದಲ್ಲಿ ಬಸವ ಭಸ್ಮ, ಪಾದೋದಕ, ಗುರು ಉಪದೇಶದ ಮೂಲಕ ಜನರಿಗೆ ರೋಗ ರುಜಿನಗಳಿಂದ ಮುಕ್ತಿ ನೀಡುವ ಧನ್ವಂತರಿಯಾಗಿದ್ದರು. ಕೊಲ್ಲಾಪುರದ ಸಾಹು ಮಹಾರಾಜರು ಜಯದೇವ ಶ್ರೀಗಳ ಕಾರ್ಯ ಗೌರವಿಸಿ, ಕೊಲ್ಲಾಪುರದಲ್ಲಿ ಶ್ರೀಮಠ ನಿರ್ಮಿಸಿಕೊಟ್ಟಿದ್ದರು. ಇತರ ಸಂಘ-ಸಂಸ್ಥೆಗಳಿಗೆ ಪಲ್ಲಕ್ಕಿಯಲ್ಲಿ ಕೂಡಲು ಅವಕಾಶ ಇಲ್ಲದಿದ್ದರೂ ಮಹಾರಾಷ್ಟ್ರದಲ್ಲಿ ಜಯದೇವ ಶ್ರೀಗಳ ಉತ್ಸವವವನ್ನು ಸಾಹು ಮಹಾರಾಜರು ವಿಜೃಂಭಣೆಯಿಂದ ನಡೆಸುತ್ತಿದ್ದರು ಎಂದು ಡಾ.ಶಿವಮೂರ್ತಿ ಶರಣರು ಸ್ಮರಿಸಿದರು.

ಶ್ರೀಗಳು ನವಕೋಟಿ ನಾರಾಯಣ:

ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ದಾವಣಗೆರೆ ಭಕ್ತರು ನೂತನ ರಥ ನಿರ್ಮಿಸಿದರೆ, 10.5 ಕೆಜಿ ತೂಕದ ₹25 ಲಕ್ಷ ಮೌಲ್ಯದ ಬೆಳ್ಳಿಯ ಶ್ರೀ ಜಯದೇವ ಗುರುಗಳ ಮೂರ್ತಿಯನ್ನು ಚಿತ್ರದುರ್ಗ ಭಕ್ತರು ನೀಡಿದ್ದಾರೆ. ಜಯದೇವ ಶ್ರೀಗಳು ಸಮಾಜಕ್ಕೆ ₹9 ಕೋಟಿ ದಾನ ಮಾಡಿ, ಸಮಾಜಮುಖಿಯಾಗಿ ಸ್ಪಂದಿಸಿದ್ದರು. ಭಕ್ತರು ಜಯದೇವ ಶ್ರೀಗಳು ನವಕೋಟಿ ನಾರಾಯಣನೆಂದೇ ಕರೆಯುತ್ತಿದ್ದರು. ರಾಜ್ಯದ ವಿವಿಧೆಡೆ ಉಚಿತ ಪ್ರಸಾದ ನಿಲಯ ಸ್ಥಾಪಿಸಿ, ಶಿಕ್ಷಣ ದಾಸೋಹ ಮಾಡಿದರು. ಸರ್ವಕಾಲಕ್ಕೂ ಜಯದೇವ ಶ್ರೀಗಳು ಸ್ಮರಣೀಯರು ಎಂದರು.

ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ, ಶಿರಾಳಕೊಪ್ಪದ ವಿರಕ್ತ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕುಂಚಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ, ಗಚ್ಚಿನ ಮಠದ ಶ್ರೀ ಶಿವಬಸವ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ರಮಾನಂದ ಸ್ವಾಮೀಜಿ ಇತರೆ ಸ್ವಾಮೀಜಿಗಳು, ವಿವಿಧ ಸಮಾಜದ ಮುಖಂಡರು ಇದ್ದರು. ನಂಜಪ್ಪ ಆಸ್ಪತ್ರೆ ಹಾಗೂ ವಾಸನ್ ಐಕೇರ್‌ನಿಂದ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರ ನಡೆಯಿತು.

- - -

(ಬಾಕ್ಸ್‌)

* ಜಯದೇವ ಶ್ರೀಗಳದ್ದೇ ಒಂದು ಯುಗ: ಇಳಕಲ್ ಶ್ರೀ

- ಲಿಂಗಾಯತರನ್ನೂ ಶೂದ್ರರೆಂದೇ ಪರಿಗಣಿಸಿ, ಶಿಕ್ಷಣದಿಂದ ವಂಚಿತರಾಗಿಸಿದ್ದ ಕಾಲ ಅದಾಗಿತ್ತು

ದಾವಣಗೆರೆ: ಲಿಂಗೈಕ್ಯ ಜಯದೇವ ಶ್ರೀಗಳದ್ದೇ ಒಂದು ಯುಗವಾಗಿತ್ತು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರದ ಯಾವುದೇ ಮೂಲೆಗೆ ಹೋದರೂ ಲಿಂಗೈಕ್ಯ ಗುರುಗಳ ಮಹಿಮೆಯನ್ನು ಜನ ಕೊಂಡಾಡುತ್ತಿದ್ದರು ಎಂದು ಇಳಕಲ್‌ ಶ್ರೀ ಗುರು ಮಹಾಂತ ಸ್ವಾಮೀಜಿ ತಿಳಿಸಿದರು.

ಶ್ರೀ ಜಯದೇವ ಜಗದ್ಗುರುಗಳ 70ನೇ ಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಆಗ ಬೇರೂರಿದ್ದ ಅನಕ್ಷರತೆ, ಅಜ್ಞಾನ ಹೊಡೆದೊಡಿಸಲು ಜಯದೇವ ಶ್ರೀಗಳು ಶ್ರಮಿಸಿದರು ಎಂದರು.

ಗುರುಗಳಿಗೂ ಶಿಕ್ಷಣ ಸಿಗದ ಕಾಲ:

ಆಗಿನ ಕಾಲದಲ್ಲಿ ಸಮಾಜದಲ್ಲಿ ಶಿಕ್ಷಣವಿರಲಿಲ್ಲ. ಮೇಲ್ವರ್ಗದವರಿಗೆ ಮಾತ್ರವೇ ಶಿಕ್ಷಣ ಮೀಸಲಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಜಯದೇವ ಸ್ವಾಮೀಜಿ ಮಾಡಿದ ಕಾರ್ಯ, ಶಿಕ್ಷಣಕ್ಕೆ ಮಹತ್ವ ನೀಡಿದ್ದು ದೊಡ್ಡ ಮೇಲ್ಪಂಕ್ತಿಯನ್ನೇ ಹಾಕಿಕೊಟ್ಟಿತು. ಗುರುಗಳಿಗೂ ಶಿಕ್ಷಣ ಸಿಗದ ಕಾಲ ಅದಾಗಿತ್ತು. ಲಿಂಗಾಯತರನ್ನೂ ಶೂದ್ರರೆಂದೇ ಪರಿಗಣಿಸಲಾಗುತ್ತಿತ್ತು. ಶಿಕ್ಷಣದ ಬೆಳಕು ಕೊಡಲು ಜಯದೇವ ಶ್ರೀಗಳು ಮುಂದಾದರು.‌ ಹಳ್ಳಿಯ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸಲು ಮೈಸೂರಿನಿಂದ ಮಹಾರಾಷ್ಟ್ರದ ಕೊಲ್ಲಾಪುರದವರೆಗೆ ನೂರಾರು ವಿದ್ಯಾರ್ಥಿ ನಿಲಯ ಸ್ಥಾಪಿಸಿದರು. ಮೂರೂ ರಾಜ್ಯಗಳ ಪ್ರವಾಸ ಮಾಡಿ, ಸಮಾಜದ ವಿಶ್ವಾಸವನ್ನು ಪಡೆದು ಊಟ, ವಸತಿ ಕಲ್ಪಿಸಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುವ ಮಹಾತ್ಕಾರ್ಯ ಮಾಡಿದರು ಎಂದು ವಿವರಿಸಿದರು.

ಜಯದೇವ ವಿದ್ಯಾರ್ಥಿ ನಿಲಯದಲ್ಲಿ ಕಲಿತವರು ಸಚಿವರು, ಶಾಸಕರು, ವೈದ್ಯ, ಎಂಜಿನಿಯರ್, ದೊಡ್ಡ ಸಾಹಿತಿಗಳೂ ಆಗಿದ್ದಾರೆ. ವಿದ್ಯಾರ್ಥಿನಿಲಯ ಸ್ಥಾಪಿಸುವವರೆಗೂ ಸಮುದಾಯದಲ್ಲಿ ಅಕ್ಷರಸ್ಥರ ಸಂಖ್ಯೆ ಕಡಿಮೆ ಇತ್ತು. ಅಂಬೇಡ್ಕರ್‌ರ ಶಿಕ್ಷಣ ಬೆಳಕು ಎಂಬುದನ್ನು ಜಯದೇವ ಶ್ರೀಗಳು ಪಾಲಿಸಿದರು. ಕೋಮು ಸೌಹಾರ್ದತೆಯನ್ನು ತಂದರು. ಜಾತಿ ಸಾಮರಸ್ಯ ಮೂಡಿಸಿದರು. ಎಲ್ಲ ಜಾತಿಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶ ನೀಡಿ, ಭವಿಷ್ಯ ಕಟ್ಟಿಕೊಟ್ಟರು. ಹಾವೇರಿಯಲ್ಲಿ ಮಸೀದಿ ಕಟ್ಟಿಸಿಕೊಳ್ಳಲು ನೆರವು ನೀಡಿದ್ದರು ಎಂದು ತಿಳಿಸಿದರು.

- - -

-8ಕೆಡಿವಿಜಿ3, 4:

ದಾವಣಗೆರೆ ಶ್ರೀ ಶಿವಯೋಗಿ ಮಂದಿರದಲ್ಲಿ ಗುರುವಾರ ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರುಗಳ 70ನೇ ಸ್ಮರಣೋತ್ಸವಕ್ಕೆ ಡಾ.ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡಿದರು.