ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಐದು ಶತಮಾನಗಳ ತಲೆ ತಲೆಮಾರುಗಳ ಕಾಯುವಿಕೆ, ಲಕ್ಷಾಂತರ ಜನರ ತ್ಯಾಗ, ಬಲಿದಾನ, ಕೋಟ್ಯಾಂತರ ಜನರ ನಿರೀಕ್ಷೆಯಂತೆ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ಹಾಗೂ ಮಂದಿರ ಉದ್ಘಾಟನೆಯ ನೇರ ಪ್ರಸಾರದಲ್ಲಿ ವೀಕ್ಷಿಸಿ ಲಕ್ಷಾಂತರ ಭಕ್ತರು ಭಾವುಕರಾದರು.ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಧಾರ್ಮಿಕ ವಿಧಿ ವಿಧಾನ, ಕಾರ್ಯಗಳ ಶಾಸ್ತ್ರೋಕ್ತವಾಗಿ ಪ್ರಧಾನಿ ಮೋದಿ ನೆರವೇರಿಸುತ್ತಿದ್ದಂತೆಯೇ ನಗರ, ಜಿಲ್ಲಾದ್ಯಂತ ಜೈ ಶ್ರೀರಾಮ್ ಘೋಷಣೆಗಳು ಮೊಳಗಿದವು. ಪ್ರಾಣ ಪ್ರತಿಷ್ಠಾಪನೆ, ಮಂದಿರ ಉದ್ಘಾಟನೆ ನೆರವೇರುತ್ತಿದ್ದಂತೆಯೇ ಅದೇ ಮುಹೂರ್ತದಲ್ಲಿ ನಗರ, ಜಿಲ್ಲೆಯ ರಾಮ ಮಂದಿರ, ಹನುಮ ಮಂದಿರಗಳು, ಶಿವಾಲಯ ಸೇರಿ ಸಮಸ್ತ ದೇವಸ್ಥಾನಗಳಲ್ಲಿ ಪೂಜೆ, ಧಾರ್ಮಿಕ ಕಾರ್ಯ ನೆರವೇರಿದವು.
ಇಡೀ ನಗರ, ಜಿಲ್ಲೆ ಕೇಸರಿ ಮಯವಾಗಿತ್ತು. ವಿಶೇಷವಾಗಿ ಜಿಲ್ಲಾ ಕೇಂದ್ರದಲ್ಲಂತೂ ಪ್ರಮುಖ ವೃತ್ತಗಳು, ರಸ್ತೆಗಳು, ಜನದಟ್ಟಣೆ ಪ್ರದೇಶಗಳು, ಜನವಸತಿ ಪ್ರದೇಶಗಳು, ಹಳೆ ಊರು, ಹೊಸ ಊರು, ಹೊಸ ಬಡಾವಣೆ, ದೇವಸ್ಥಾನಗಳು, ಬೀದಿಗಳು, ಕೇರಿಗಳಲ್ಲಿ ರಾಮನ ಫ್ಲೆಕ್ಸ್‌ಗೆ ಪೂಜೆ, ಪ್ರಸಾದ, ಪಾನಕ, ಮಜ್ಜಿಗೆ ವಿತರಣೆ ಕಾರ್ಯ ನಡೆಯಿತು. ರಾಮಭಕ್ತಿಗೆ ವಯೋಮಿತಿ ಇಲ್ಲವೆಂಬಂತೆ ಪುಟ್ಟ ಮಕ್ಕಳಿಂದ ಶತಮಾನದ ಹೊಸ್ತಿನಲ್ಲಿರುವ ವೃದ್ಧರು, ಲಿಂಗ ಬೇಧವಿಲ್ಲದೇ ಪುರುಷ-ಮಹಿಳೆಯರು ತಮ್ಮ ಭಕ್ತಿ ಸಮರ್ಪಿಸಿದರು.ಇಡೀ ದಿನ ಪ್ರಸಾದ ವ್ಯವಸ್ಥೆ ಮಾಡಿದ ವಿದ್ಯಾರ್ಥಿ, ಯುವ ಜನರು, ಮಕ್ಕಳು, ಮಹಿಳೆಯರು ಸಂಜೆ ಹೊತ್ತಿಗೆ ತಾವು ಪ್ರಸಾದ ವಿತರಿಸಿದ್ದ ಸ್ಥಳವನ್ನೆಲ್ಲಾ ಸ್ವಚ್ಛಗೊಳಿಸುವ ಮೂಲಕ ಗಮನ ಸೆಳೆದರು. ಕೆಲವೆಡೆಯಂತೂ 3-4 ಸಾವಿರಕ್ಕೂ ಅಧಿಕ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು.
ದಾವಣಗೆರೆಯ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಯಾವುದೇ ಕಾನೂನು ಸುವ್ಯವಸ್ಥೆ ಹದಗಡೆದಂತೆ, ಗಲಾಟೆ ನಡೆಯದಂತೆ ಮಿಲಿಟರಿ ಪಡೆಯೊಂದಿಗೆ ಪೊಲೀಸರು ವಿವಿಧ ಮುಖ್ಯರಸ್ತೆಗಳಲ್ಲಿ ಪಥ ಸಂಚಲನ ಮಾಡಿ ಎಚ್ಚರಿಕೆ ರವಾನಿಸಿದರು.ಕೇಸರಿಮಯ ದಾವಣಗೆರೆಯಲ್ಲಿ ಮೊಳಗಿದ ಜೈ ಶ್ರೀರಾಮ ಘೋಷಣೆ
ರಾಮ ಮಂದಿರ ಉದ್ಘಾಟನೆ, ಪ್ರಾಣ ಪ್ರತಿಷ್ಟಾಪನೆಗಾಗಿ ಕೇಸರಿಮಯವಾಗಿ ಕಾಯುತ್ತಿದ್ದ ಭಕ್ತರು ತಮ್ಮ ಶಕ್ತ್ಯಾನುಸಾರ ಶ್ರೀರಾಮನಿಗೆ ಭಕ್ತಿ ಸಲ್ಲಿಸಿ ಕೃತಾರ್ಥರಾದರು. ಪ್ರಾಣ ಪ್ರತಿಷ್ಟಾಪನೆ, ಮಂದಿರ ಉದ್ಘಾಟನೆಯಾಗುತ್ತಿದ್ದಂತೆಯೇ ಜೈ ಶ್ರೀರಾಮ್ ಜೈ ಶ್ರೀರಾಮ್ ಘೋಷಣೆಗಳು ಮುಗಿಲು ಮುಟ್ಟುವಂತಿತ್ತು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೀಗೆ ಪಕ್ಷಾತೀತವಾಗಿ, ನೂರಾರು ಸಂಘಟನೆಗಳು ಶ್ರೀರಾಮ ಭಾರತದ ಅಸ್ಮಿತೆಯೆಂಬ ಸಂದೇಶ ಈ ಮೂಲಕ ರವಾನಿಸಿದರು.ನಗರದ ಬೀದಿ ಬೀದಿಗಳಲ್ಲಿ, ಕೇರಿ ಕೇರಿಗಳಲ್ಲಿ ಕೋದಂಡಧಾರಿ ಪ್ರಭು ಶ್ರೀರಾಮನ ಚಿತ್ರ, ಶ್ರೀರಾಮ-ಹನುಮ, ಪ್ರಭು ಶ್ರೀರಾಮಚಂದ್ರ, ಸೀತಾಮಾತೆ, ಲಕ್ಷ್ಮಣೆ, ಆಂಜನೇಯರನ್ನು ಒಳಗೊಂಡ ಫ್ಲೆಕ್ಸ್, ಅಯೋಧ್ಯೆ ಶ್ರೀರಾಮ ಮಂದಿರದ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ರಾಮ ಭಕ್ತರು ಕೇಸರಿ ಶಾಲುಗಳ ಧರಿಸಿ, ಬೆಳಿಗ್ಗೆಯೇ ದೇವಸ್ಥಾನಗಳಿಗೆ ತೆರಳಿ, ದರ್ಶನ ಮಾಡಿ ಅಯೋಧ್ಯೆಯಲ್ಲಿ ಅಮೃತ ಘಳಿಗೆಯಲ್ಲಿ ದೇವಸ್ಥಾನ, ಪ್ರಾಣ ಪ್ರತಿಷ್ಠಾಪನೆ ನೆರವೇರುತ್ತಿದ್ದಂತೆ ಜೈ ಶ್ರೀರಾಮ ಜೈ ಶ್ರೀರಾಮ ಘೋಷಣೆಗಳು ಮೊಳಗಿದವು.
ಮಕ್ಕಳಿಗೆ ಶ್ರೀರಾಮ, ಸೀತೆ, ಲಕ್ಷ್ಮಣ, ಆಂಜನೇಯನ ವೇಷ ಹಾಕಿ, ಸಂಭ್ರಮಿಸಿದ ಪಾಲಕರ ಸಂಖ್ಯೆಯೇನೂ ಕಡಿಮೆ ಇರಲಿಲ್ಲ. ಶ್ರೀರಾಮ, ಆಂಜನೇಯ ದೇವಸ್ಥಾನ, ರಾಯರ ಮಠ, ವಿವಿಧ ದೇವಸ್ಥಾನಗಳಲ್ಲಿ ಹೋಮ, ಹವನ, ಯಜ್ಞ, ತಾರಕ ಮಂತ್ರ ನಡೆದವು. ಹಿಂದು ಪರ ಸಂಘಟನೆಗಳಿಂದ ಅಲ್ಲಲ್ಲಿ ಬೈಕ್ ರ್‍ಯಾಲಿ ನಡೆಯಿತು. ಮತ್ತೆ ಕೆಲವು ಕಡೆ ರಕ್ತದಾನ ಮಾಡುವ ಮೂಲಕ ಭಕ್ತಿ ಸಮರ್ಪಿಸಲಾಯಿತು.ಪಿಜೆ ಬಡಾವಣೆಯ ಶ್ರೀರಾಮ ಮಂದಿರ, ಕೋದಂಡರಾಮ ದೇವಸ್ಥಾನ, ವಿದ್ಯಾನಗರ ಶ್ರೀ ಆಂಜನೇಯ ದೇವಸ್ಥಾನ, ದತ್ತಾತ್ರೆಯ, ನಗರ ದೇವತೆ ಶ್ರೀ ದುಗ್ಗಮ್ಮದೇವಿ, ಶಂಕರಮಠ, ಶಾರದಾಂಬ ದೇವಸ್ಥಾನ, ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ, ಕೆಟಿಜೆ ನಗರ ಆಂಜನೇಯ ದೇವಸ್ಥಾನ, ಹರಳೆಣ್ಣೆ ಕೊಟ್ರಬಸಪ್ಪ ವೃತ್ತದ ಶ್ರೀ ಗಣೇಶ ದೇವಸ್ಥಾನ ಸೇರಿದಂತೆ ಎಲ್ಲಾ ದೇವಾಲಯಗಳಲ್ಲೂ ಸೋಮವಾರ ವಿಶೇಷ ಪೂಜೆ, ಅಭಿಷೇಕ, ಹೋಮ ಮಾಡಲಾಯಿತು. ಸಿಹಿ ಹಂಚಿ, ಪಾನಕ, ಕೋಸಂಬರಿ, ಅನ್ನ ಸಂತರ್ಪಣೆ ಸಂಜೆವರೆಗೂ ಮಾಡಲಾಯಿತು.
ಭಕ್ತರಿಗೆ ಬಗೆ ಬಗೆಯ ಭಕ್ಷ್ಯ ಭೋಜನಗಳುನಗರ, ಜಿಲ್ಲಾದ್ಯಂತ ಊರು, ಕೇರಿ, ಜನ ವಸತಿ ಪ್ರದೇಶ, ಮಾರುಕಟ್ಟೆ, ಶಾಲಾ-ಕಾಲೇಜು, ಹಾಸ್ಟೆಲ್‌ಗಳ ಸಮೀಪ ರಾಮೋಧ್ಘಾರದ ಜೊತೆಗೆ ಅನ್ನ ದಾಸೋಹ, ಗೋಧಿ ಹುಗ್ಗಿ, ಕೇಸರಿ ಬಾತ್, ಅನ್ನ ಸಾಂಬಾರ್, ಪುಳಿಯೊಗರೆ ಸೇರಿದಂತೆ ಭಕ್ಷ್ಯ ಭೋಜನಗಳ ಲಕ್ಷಾಂತರ ಭಕ್ತರಿಗೆ ಸಮರ್ಪಿಸಿ ಸಂಘಟಕರೂ ಕೃತಾರ್ಥರಾದರು.
ದೇವರಾಜ್ ಅರಸ್ ಬಡಾವಣೆ ಸಿ ಬ್ಲಾಕ್‌ನ ಮಹಿಳಾ ನಿವಾಸಿಗಳಿಂದ ಒಂದು ಸಾವಿರ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಚನ್ನಗಿರಿ ವಿರುಪಾಕ್ಷಪ್ಪ ಗಡಿಯಾರ ಕಂಬದ ಬಳಿ ವರ್ತಕರಿಂದ ಮತ್ತು ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನ ಟ್ರಸ್ಟ್ ನಿಂದ ನಗರದ ಕೆಲವಡೆ ಅನ್ನ ಸಂತರ್ಪಣೆ ಮಾಡಿ ಶ್ರೀರಾಮನಿಗೆ ಭಕ್ತಿ ಅರ್ಪಿಸಲಾಯಿತು.