ಅಯೋಧ್ಯೆ ರಾಮಲಲ್ಲಾನಿಗೆ ಪಲ್ಲಕ್ಕಿ ಉತ್ಸವ

| Published : Jan 27 2024, 01:21 AM IST

ಸಾರಾಂಶ

ಶ್ರೀ ರಾಮಲಲ್ಲಾನ ಉತ್ಸವ ವಿಗ್ರಹವನ್ನು ವಾದ್ಯಘೋಷ, ಶ್ರೀಗಳ ಶಾಸ್ತ್ರ ವಿದ್ಯಾರ್ಥಿಗಳ ವಿಷ್ಣುಸಹಸ್ರನಾಮ‌, ಭಜನೆಗಳೊಂದಿಗೆ ಪಲ್ಲಕ್ಕಿಯಲ್ಲಿಟ್ಟು ಮಂಗಳಾರತಿ ಬೆಳಗಿದ ಬಳಿಕ ಮಂದಿರದ ಹೊರ ಆವರಣದ ಸುತ್ತ ಒಂದು ಸುತ್ತು ಪ್ರದಕ್ಷಿಣೆ ಮಾಡಿದ ಬಳಿಕ ಯಾಗ ಶಾಲೆಯಲ್ಲಿಟ್ಟು ಅಷ್ಟಾವಧಾನ ಸೇವೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಅಯೊಧ್ಯೆಯ ರಾಮಮಂದಿರದಲ್ಲಿ ನಡೆಯುತ್ತಿರುವ 48 ದಿನಗಳ ಮಂಡಲೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿತು.

ಶ್ರೀ ರಾಮಲಲ್ಲಾನ ಉತ್ಸವ ವಿಗ್ರಹವನ್ನು ವಾದ್ಯಘೋಷ, ಶ್ರೀಗಳ ಶಾಸ್ತ್ರ ವಿದ್ಯಾರ್ಥಿಗಳ ವಿಷ್ಣುಸಹಸ್ರನಾಮ‌, ಭಜನೆಗಳೊಂದಿಗೆ ಪಲ್ಲಕ್ಕಿಯಲ್ಲಿಟ್ಟು ಮಂಗಳಾರತಿ ಬೆಳಗಿದ ಬಳಿಕ ಮಂದಿರದ ಹೊರ ಆವರಣದ ಸುತ್ತ ಒಂದು ಸುತ್ತು ಪ್ರದಕ್ಷಿಣೆ ಮಾಡಿದ ಬಳಿಕ ಯಾಗ ಶಾಲೆಯಲ್ಲಿಟ್ಟು ಅಷ್ಟಾವಧಾನ ಸೇವೆ ನಡೆಸಲಾಯಿತು.ಪೇಜಾವರ ಶ್ರೀಗಳಿಂದ ಮಹಾಂತರಿಗೆ ಅಭಿನಂದನೆ

ಅಯೋದ್ಯಾ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯಗೋಪಾಲ್ ದಾಸ್ ಜೀ ಅವರನ್ನು ಟ್ರಸ್ಟ್ ವಿಶ್ವಸ್ಥರಾದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅವರ ಆಶ್ರಮದಲ್ಲಿ ಶುಕ್ರವಾರ ಭೇಟಿ ಮಾಡಿದರು. ಈ ಸಂದರ್ಭ ಈರ್ವರೂ ಆತ್ಮೀಯ ಮಾತುಕತೆ ನಡೆಸಿ ಒಂದು ಮಹೋನ್ನತ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದ ಧನ್ಯತೆಯನ್ನು ವ್ಯಕ್ತಪಡಿಸಿದರು .ಶ್ರೀಗಳು ಮಹಾಂತ ಅವರನ್ನು ಶಾಲು ಹಾರ ಸ್ಮರಣಿಕೆ ಸಹಿತ ಸತ್ಕರಿಸಿ ಟ್ರಸ್ಟ್ ನ ನೇತೃತ್ವ ವಹಿಸಿ ಅಮೂಲ್ಯ ಮಾರ್ಗದರ್ಶನ ನೀಡಿದ್ದಕ್ಕಾಗಿ ಅಭಿನಂದಿಸಿದರು.ಇದೇ ವೇಳೆ ಪೇಜಾವರ ಶ್ರೀಗಳು ಮಹಂತಾ ಅವರ ಶಿಷ್ಯ ಶ್ರೀ ಕಮಲನಯನ ದಾಸ್ ಜೀಯವರನ್ನೂ ಭೇಟಿ ಮಾಡಿ ಉಭಯಕುಶಲೋಪರಿ ನಡೆಸಿ ಮಂಡಲೋತ್ಸವದ ಬಗ್ಗೆ ವಿವರಿಸಿ ಇವತ್ತಿನ ಮಂಡಲೋತ್ಸವದ ರಜತ ಕಲಶಪ್ರಸಾದ ನೀಡಿದರು. ಶ್ರೀಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದು ವೇದಘೋಷಗೈದರು.