ಅಯೋಧ್ಯೆ ರಾಮೋತ್ಸವ: ಕೇಸರಿಮಯವಾದ ನಗರ

| Published : Jan 22 2024, 02:15 AM IST

ಸಾರಾಂಶ

ನಗರ, ಜಿಲ್ಲಾದ್ಯಂತ ಪ್ರಭು ಶ್ರೀರಾಮನ ಸ್ಮರಣೆ, ತಾರಕ ಮಂತ್ರ ಪಠನೆ, ಹೋಮ, ಹವನ, ಅಲಂಕಾರ, ಪೂಜೆ ನಡೆದಿದ್ದು, ಜ.22ರ ಇಡೀ ದಿನ ಪ್ರಸಾದ, ಪಾನಕ ವಿತರಣೆಗೆ ಲಕ್ಷಾಂತರ ಭಕ್ತರು ಸಿದ್ಧತೆ ಮಾಡಿಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆಯಿಂದಲೇ ಮಾವಿನ ತೋರಣ, ಕೇಸರಿ ತೋರಣ, ಫ್ಲೆಕ್ಸ್‌, ಬ್ಯಾನರ್‌ ಕಟ್ಟುತ್ತಿದ್ದರೆ, ಮಹಿಳೆಯರು ಪೂಜೆ, ಇತರೆ ಧಾರ್ಮಿಕ ಕಾರ್ಯದಲ್ಲಿ ಮಗ್ನರಾಗಿದ್ದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರೀರಾಮನ ಬರುವಿಕೆಗೆ ಶಬರಿ ಕಾದಂತೆ ಬರೋಬ್ಬರಿ 5 ಶತಮಾನಗಳಿಂದಲೂ ಶ್ರೀರಾಮಮಂದಿರ, ಶ್ರೀರಾಮಲಲ್ಲಾ ಪ್ರತಿಷ್ಠಾಪನೆಗಾಗಿ ಕಾಯುತ್ತಿದ್ದ ರಾಮ ಭಕ್ತರಿಗೆ ಅಮೃತ ಘಳಿಗೆ ಕೂಡಿ ಬಂದಿದೆ.

ನಗರ, ಜಿಲ್ಲಾದ್ಯಂತ ಪ್ರಭು ಶ್ರೀರಾಮನ ಸ್ಮರಣೆ, ತಾರಕ ಮಂತ್ರ ಪಠನೆ, ಹೋಮ, ಹವನ, ಅಲಂಕಾರ, ಪೂಜೆ ನಡೆದಿದ್ದು, ಜ.22ರ ಇಡೀ ದಿನ ಪ್ರಸಾದ, ಪಾನಕ ವಿತರಣೆಗೆ ಲಕ್ಷಾಂತರ ಭಕ್ತರು ಸಿದ್ಧತೆ ಮಾಡಿಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆಯಿಂದಲೇ ಮಾವಿನ ತೋರಣ, ಕೇಸರಿ ತೋರಣ, ಫ್ಲೆಕ್ಸ್‌, ಬ್ಯಾನರ್‌ ಕಟ್ಟುತ್ತಿದ್ದರೆ, ಮಹಿಳೆಯರು ಪೂಜೆ, ಇತರೆ ಧಾರ್ಮಿಕ ಕಾರ್ಯದಲ್ಲಿ ಮಗ್ನರಾಗಿದ್ದರು.

ಕೊಳಗೇರಿಯಿಂದ ಶ್ರೀಮಂತರ ಬಡಾವಣೆವರೆಗೆ, ಸಣ್ಣ ಕಲ್ಲುಗುಡಿಯಿಂದ ದೊಡ್ಡ ದೇವಸ್ಥಾನದವರೆಗೆ, ಪುರಾತನ ದೇಗುಲಗಳಿಂದ ಈಚಿನ ದೇವಸ್ಥಾನಗಳವರೆಗೆ ಸೋಮವಾರ ಬೆಳಿಗ್ಗೆಯಿಂದಲೇ ಶ್ರೀರಾಮ ಮಂದಿರ ಉದ್ಘಾಟನೆಗಾಗಿ ಅಲಂಕಾರ, ಪೂಜೆಗೆ ಸಿದ್ಧತೆ ನಡೆದಿದೆ. ವಿಶೇಷವಾಗಿ ಶ್ರೀರಾಮ ಮಂದಿರ, ಆಂಜನೇಯ ದೇವಸ್ಥಾನ, ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಈಶ್ವರ ಮಂದಿರ, ವೆಂಕಟೇಶ್ವರ ದೇವಸ್ಥಾನ, ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಹೀಗೆ ಸಾವಿರಾರು ದೇವಸ್ಥಾನಗಳು ಶ್ರೀರಾಮ ಪ್ರತಿಷ್ಠಾಪನೆಯ ಘಳಿಗೆಗೆ ಮಂತ್ರ ಪಠಣ, ವೇದಘೋಷಗಳ ಮೊಳಗಿಸಲಿವೆ.

ನಗರ, ಜಿಲ್ಲಾದ್ಯಂತ ಭಕ್ತಾದಿಗಳು ತಮ್ಮ ಶಕ್ತ್ಯಾನುಸಾರ ಪ್ರಸಾದ ದಾಸೋಹಕ್ಕೆ ಸಜ್ಜಾಗಿದ್ದಾರೆ. ಎಲ್ಲಾ ವಯೋಮಾನದವರೂ ರಾಮನಾಮ ಸ್ಮರಣೆಯಲಿ ತೊಡಗಿದ್ದಾರೆ. ವಿಶೇಷವಾಗಿ ಇಡೀ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳು ಕೇಸರಿಮಯವಾಗಿವೆ. ಪ್ರಮುಖ ವೃತ್ತ, ರಸ್ತೆಗಳಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ, ಬಿಲ್ಲುದಾರಿ ಶ್ರೀರಾಮ, ರಾಮ, ಸೀತಾ, ಲಕ್ಷ್ಮಣ, ಆಂಜನೇಯ ಸಮೇತ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.

..........

ಛದ್ಮವೇಷ ಧರಿಸಿ ಮಕ್ಕಳ ಸಂಭ್ರಮ

ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ, ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಮನೆಗಳಲ್ಲಿ ಹೆತ್ತವರು, ಅಜ್ಜ-ಅಜ್ಜಿ, ಕುಟುಂಬ ಸದಸ್ಯರು ತಮ್ಮ ಮನೆಯ ಪುಟ್ಟ ಮಕ್ಕಳಿಗೆ ಬಾಲರಾಮ, ಕೋದಂಡ ರಾಮ, ಶ್ರೀರಾಮಚಂದ್ರ, ಸೀತಾ ಮಾತೆ, ಲಕ್ಷ್ಮಣ, ಶ್ರೀ ಆಂಜನೇಯ ವೇಷ ತೊಡಿಸಿ, ಸಂಭ್ರಮಿಸುತ್ತಿದ್ದಾರೆ. ತಮ್ಮ ಮನೆಯ ಮಕ್ಕಳು, ತಮ್ಮ ಕುಟುಂಬ ಸ್ನೇಹಿತರ ಮಕ್ಕಳ ಶ್ರೀರಾಮ ವೇಷಧಾರಿ ಮಕ್ಕಳ ಫೋಟೋಗಳ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.