ಆಯುಷ್ ಕ್ಷೇತ್ರವು ದೇಶದ ಒಟ್ಟು ಆರ್ಥಿಕತೆಯಲ್ಲಿ ಸುಮಾರು ಶೇ.1.3ರಷ್ಟು ಕೊಡುಗೆ ನೀಡುತ್ತಿದ್ದು, 2047ರ ವೇಳೆಗೆ ಈ ಪ್ರಮಾಣವನ್ನು ಶೇ. 5ಕ್ಕೆ ಹೆಚ್ಚಿಸುವ ಗುರಿಯನ್ನು ಆಯುಷ್ ಸಚಿವಾಲಯ ಹೊಂದಿದೆ. ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆಯ ವೇಗಕ್ಕಿಂತ ಆಯುಷ್ ಕ್ಷೇತ್ರದ ಬೆಳವಣಿಗೆ ಎರಡೂವರೆ ಪಟ್ಟು ಹೆಚ್ಚಾಗಿದೆ ಎಂಬುದು ಈ ಕ್ಷೇತ್ರದ ಭವಿಷ್ಯದ ಸಾಧ್ಯತೆಯನ್ನು ತೋರಿಸುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಆಯುರ್ವೇದ ಕ್ಷೇತ್ರದಲ್ಲಿ ಇಂದು ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಪುಲ ಅವಕಾಶಗಳು ತೆರೆದುಕೊಂಡಿದ್ದು, ಪದವೀಧರರು ಜ್ಞಾನ, ಕೌಶಲ ಮತ್ತು ವೃತ್ತಿಪರ ಬದ್ಧತೆಯೊಂದಿಗೆ ಮುನ್ನಡೆಯಬೇಕು ಎಂದು ರಾಷ್ಟ್ರೀಯ ಆಯುರ್ವೇದ ಮಂಡಳಿ ಅಧ್ಯಕ್ಷ ಡಾ.ಅಲ್ಲಮಪ್ರಭು ಗುಡ್ಡ ಕಿವಿಮಾತು ಹೇಳಿದರು.

ನಗರದ ಚಾಮುಂಡಿಬೆಟ್ಟ ತಪ್ಪಲಿನ ಜೆಎಸ್‌ಎಸ್‌ಆಯುರ್ವೇದ ಕಾಲೇಜಿನಲ್ಲಿ ಗುರುವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಆಯುಷ್ ಕ್ಷೇತ್ರವು ದೇಶದ ಒಟ್ಟು ಆರ್ಥಿಕತೆಯಲ್ಲಿ ಸುಮಾರು ಶೇ.1.3ರಷ್ಟು ಕೊಡುಗೆ ನೀಡುತ್ತಿದ್ದು, 2047ರ ವೇಳೆಗೆ ಈ ಪ್ರಮಾಣವನ್ನು ಶೇ. 5ಕ್ಕೆ ಹೆಚ್ಚಿಸುವ ಗುರಿಯನ್ನು ಆಯುಷ್ ಸಚಿವಾಲಯ ಹೊಂದಿದೆ. ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆಯ ವೇಗಕ್ಕಿಂತ ಆಯುಷ್ ಕ್ಷೇತ್ರದ ಬೆಳವಣಿಗೆ ಎರಡೂವರೆ ಪಟ್ಟು ಹೆಚ್ಚಾಗಿದೆ ಎಂಬುದು ಈ ಕ್ಷೇತ್ರದ ಭವಿಷ್ಯದ ಸಾಧ್ಯತೆಯನ್ನು ತೋರಿಸುತ್ತದೆ ಎಂದರು.

ದೇಶದಲ್ಲಿ ಸುಮಾರು 12,500 ಕ್ಷೇಮ ಕೇಂದ್ರಗಳು, 33 ಸಾವಿರಕ್ಕೂ ಹೆಚ್ಚು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಹಾಗೂ 600 ಆಯುರ್ವೇದ ಕಾಲೇಜು ಇವೆ. ಯೋಗ ಮತ್ತು ಆಯುರ್ವೇದದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚುತ್ತಿದೆ. ಪ್ರತಿವರ್ಷ ಕೋಟ್ಯಂತರ ಜನರು ಈ ಚಿಕಿತ್ಸಾ ಪದ್ಧತಿಗಳ ಸಂಪರ್ಕಕ್ಕೆ ಬರುತ್ತಿದ್ದಾರೆ. ಇದರಿಂದ ಆಯುರ್ವೇದ ಪದವೀಧರರಿಗೆ ಉದ್ಯೋಗ, ಸ್ವಂತ ವೈದ್ಯಕೀಯ ಸೇವೆ, ಸಂಶೋಧನೆ ಮತ್ತು ಉದ್ಯಮಶೀಲತೆಯಂತಹ ಹಲವು ಕ್ಷೇತ್ರಗಳಲ್ಲಿ ಅವಕಾಶಗಳಿವೆ ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಆಯುರ್ವೇದದ ವ್ಯಾಪ್ತಿ ವಿಸ್ತರಿಸುತ್ತಿದೆ. ಆಯುಷ್ ಸಚಿವಾಲಯವು 27 ದೇಶಗಳು ಮತ್ತು 54 ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ವಿದೇಶಗಳಲ್ಲಿ 16 ಆಯುಷ್ ಪೀಠಗಳು ಹಾಗೂ 39 ದೇಶಗಳಲ್ಲಿ 43 ಮಾಹಿತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಶಿಕ್ಷಣ, ಸಂಶೋಧನೆ ಮತ್ತು ಚಿಕಿತ್ಸಾ ಸೇವೆಗಳ ಮೂಲಕ ಭಾರತೀಯ ವೈದ್ಯಕೀಯ ಪದ್ಧತಿಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿವೆ ಎಂದರು.

ಆಯುಷ್ ಕ್ಷೇತ್ರದ 2014ರಲ್ಲಿ ಸುಮಾರು 700 ಕೋಟಿ ರು. ಬಜೆಟ್ ಹೊಂದಿದ್ದ ಆಯುಷ್ ಇಲಾಖೆ ಇಂದು ಪ್ರತ್ಯೇಕ ಸಚಿವಾಲಯವಾಗಿ ಬೆಳೆದಿದ್ದು, ಅದರ ಬಜೆಟ್ ಸುಮಾರು 4,500 ಕೋಟಿ ರು.ಗೆ ಏರಿಕೆಯಾಗಿದೆ. ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗೆ ಪ್ರತ್ಯೇಕ ಸಚಿವಾಲಯ ಹೊಂದಿರುವ ದೇಶಗಳಲ್ಲಿ ಭಾರತ ಮಹತ್ವದ ಸ್ಥಾನದಲ್ಲಿದೆ. ಆಯುಷ್ ಕ್ಷೇತ್ರದ ಉತ್ಪಾದನಾ ಮತ್ತು ಸೇವಾ ವಲಯಗಳು ವೇಗವಾಗಿ ವಿಸ್ತರಿಸುತ್ತಿವೆ ಎಂದರು.

ಆಯುರ್ವೇದ ಕ್ಷೇತ್ರದಲ್ಲಿ ಅವಕಾಶಗಳಿಗೆ ಕೊರತೆ ಇಲ್ಲ. ಆದರೆ, ಆ ಅವಕಾಶಗಳನ್ನು ಬಳಸಿಕೊಳ್ಳಲು ಪ್ರತಿಯೊಬ್ಬ ಪದವೀಧರರೂ ಸಮರ್ಥ ವೈದ್ಯರಾಗಬೇಕು. ರೋಗಿಯ ಸಮಸ್ಯೆಯನ್ನು ಸಮಗ್ರವಾಗಿ ಅರ್ಥಮಾಡಿಕೊಂಡು ಸೂಕ್ತ ಚಿಕಿತ್ಸೆ ನೀಡುವ ಜ್ಞಾನ ಮತ್ತು ಕೌಶಲ ಬೆಳೆಸಿಕೊಳ್ಳಬೇಕು. ಪದವಿ ಎಂಬುದು ಅಂತಿಮ ಗುರಿಯಲ್ಲ; ಸಮಾಜಕ್ಕೆ ಸೇವೆ ಸಲ್ಲಿಸುವ ಮಹತ್ತರ ಜವಾಬ್ದಾರಿಯ ಆರಂಭ ಎಂದರು.

ಆಯುರ್ವೇದ ಶಿಕ್ಷಣ ಮತ್ತು ಚಿಕಿತ್ಸಾ ಪದ್ಧತಿಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬೆಸೆಯುವ ನಿಟ್ಟಿನಲ್ಲಿ ಹಲವು ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಅನುಭವಿ ಶಿಕ್ಷಕರು ಮತ್ತು ವೈದ್ಯರ ಸಹಯೋಗದಲ್ಲಿ ವಿಶೇಷ ಬೋಧನಾ ವಿಡಿಯೋ ಸಿದ್ಧಪಡಿಸುತ್ತಿದ್ದು, ಅವುಗಳನ್ನು ವಿದ್ಯಾರ್ಥಿಗಳ ಕಲಿಕೆ ಮತ್ತು ಪ್ರಾಯೋಗಿಕ ತರಬೇತಿಗೆ ಲಭ್ಯವಾಗುವಂತೆ ಮಾಡಲಾಗುವುದು. ಇದರಿಂದ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಹಾಗೂ ವೈದ್ಯಕೀಯ ಅಭ್ಯಾಸದಲ್ಲಿ ಹೆಚ್ಚಿನ ಪರಿಣತಿ ಗಳಿಸಲು ನೆರವಾಗಲಿದೆ ಎಂದರು.

ಇಂದಿನ ವಿದ್ಯಾರ್ಥಿಗಳು ಹೊಸ ಯುಗದ ಹೊಸ ಅವಕಾಶಗಳ ನಡುವೆ ಇದ್ದಾರೆ. ಆದರೆ, ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಕೇವಲ ಶೈಕ್ಷಣಿಕ ಅರ್ಹತೆ ಸಾಲದು; ಪ್ರಬುದ್ಧತೆ, ಜವಾಬ್ದಾರಿ, ತಾಳ್ಮೆ ಮತ್ತು ವೃತ್ತಿಪರ ಬದ್ಧತೆಯೂ ಅಗತ್ಯ ಎಂದು ಅಭಿಪ್ರಾಯಪಟ್ಟರು.

12ನೇ ಶತಮಾನದ ವಚನಕಾರ ಅಲ್ಲಮಪ್ರಭು ಅವರು ಹೇಳಿದಂತೆ ಮಣ್ಣಿನ ಮಡಕೆಯನ್ನು ಸರಿಯಾಗಿ ಸುಡದಿದ್ದರೆ ಅದರಲ್ಲಿ ನೀರನ್ನು ಹಿಡಿದಿಡಲು ಸಾಧ್ಯವಿಲ್ಲ. ಅದೇ ರೀತಿ ವಿದ್ಯಾರ್ಥಿಗಳು ತಮ್ಮನ್ನು ತಾವು ಕಠಿಣ ಪರಿಶ್ರಮ, ಶಿಸ್ತು ಮತ್ತು ಅಧ್ಯಯನದ ಮೂಲಕ ಸಿದ್ಧಪಡಿಸಿಕೊಳ್ಳದಿದ್ದರೆ ಗಳಿಸಿದ ಜ್ಞಾನ ಜೀವನದಲ್ಲಿ ಗಟ್ಟಿಯಾಗಿ ನೆಲೆಗೊಳ್ಳುವುದಿಲ್ಲ. ಕಳೆದ ಹಲವು ವರ್ಷಗಳ ನಿರಂತರ ಅಧ್ಯಯನ ಮತ್ತು ಪರಿಶ್ರಮವೇ ಇಂದು ಪದವಿ ಹಾಗೂ ರ್‍ಯಾಂಕ್ ರೂಪದಲ್ಲಿ ಫಲ ನೀಡಿದೆ ಎಂದರು.

ಆಯುರ್ವೇದ ಪದವೀಧರರಾಗುವುದು ಒಂದು ರೀತಿಯಲ್ಲಿ 2ನೇ ಜನ್ಮ ಪಡೆದಂತೆ. ಆಯುರ್ವೇದ ಪರಿಕಲ್ಪನೆಯಲ್ಲಿ ಇದನ್ನು ‘ದ್ವಿಜ’ ಎಂದು ಕರೆಯಬಹುದು. ಪದವಿ ಪಡೆದ ದಿನವು ವಿದ್ಯಾರ್ಥಿಗಳ ಬದುಕಿನ ಹೊಸ ಆರಂಭ. ಇಂದಿನಿಂದ ಪೋಷಕರಿಂದ ಪಡೆಯುತ್ತಿದ್ದ ಪಾಕೆಟ್ ಮನಿಯೂ ಮುಗಿಯುತ್ತದೆ. ಇನ್ನು ಮುಂದೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪದವಿ ಪ್ರದಾನ:

ಒಟ್ಟು 108 ಮಂದಿ ವಿದ್ಯಾರ್ಥಿಗಳು ಪದವಿ, 36 ಮಂದಿ ಸ್ನಾತಕೋತ್ತರ ಪದವಿ ಸ್ವೀಕರಿಸಿದರು. ಈ ಪೈಕಿ ಪದವಿಯಲ್ಲಿ 11 ಮತ್ತು ಸ್ನಾತಕೋತ್ತರ ಪದವಿಯಲ್ಲಿ 12 ಮಂದಿ ರ್ಯಾಂಕ್‌ ಪಡೆದರು. ಡಾ.ಸಪ್ನ ಕಗಲೆ ಅವರು ಪದವಿ ಪೂರೈಸಿದ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದರು. ಡಾ. ಹರ್ಷಿತ್‌ವಿ. ಕುಮಾರ್‌ಮತ್ತು ಡಾ.ಪೂರ್ಣ ಅವರು ಉತ್ತಮ ಇಂಟರ್ನಿ ಬಹುಮಾನ ಪಡೆದರು.

ಡಾ.ಸಪ್ನ ಕಗಲೆ ಜೀವಿಕಾ ಪ್ರಶಸ್ತಿ ಮತ್ತು ಡಾ.ಎಂ.ಡಿ.ಸಹನಾ ಅವರು ಆಯುರ್ವಿಶಾರದಾ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಕಾರ್ಯಕ್ರಮದಲ್ಲಿ ಜೆಎಸ್‌ಎಸ್‌ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ್‌ಅಧ್ಯಕ್ಷತೆ ವಹಿಸಿದ್ದರು. ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್‌. ಮಹೇಶ್‌ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಸರ್ವೇಶ್ವರ ಕರ್, ಉಪ ಪ್ರಾಂಶುಪಾಲ ಡಾ.ಶಿವಪ್ರಸಾದ್‌ ಹುಡೆದಾ ಇದ್ದರು.