ಸಾರಾಂಶ
ತಪಾಸಣಾ ಶಿಬಿರ । ಉಚಿತ ಆಯುರ್ವೇದ ಪರೀಕ್ಷೆ । ಗೋ ಪೂಜೆ । ಗೋಮಯವೇ ಆಯುರ್ವೇದ: ಡಾ.ರಮೇಶ್
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಆಯಸ್ಸನ್ನು ವೃದ್ಧಿಗೊಳಿಸಿಕೊಳ್ಳಲು ಸಹಕರಿಸುವುದೇ ಅಯುರ್ವೇದವಾಗಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ಹೇಳಿದರು.
ತಾಲೂಕಿನ ಚಿಲಕವಾಡಿ ಶ್ರೀ ಶಂಭುಲಿಂಗೇಶ್ವರ ಬೆಟ್ಟದ ನಿಜಗುಣ ಮಠದಲ್ಲಿ ನಿಜಗುಣ ಫೌಂಡೇಶನ್, ಗೋ ಸೇವಾ ಕರ್ನಾಟಕದ ದಕ್ಷಿಣ ಪ್ರಾಂತ್ಯ, ಯೂಥ್ ಫಾರ್ ಸೇವಾ ಹಾಗೂ ಆಯುಷ್ ಇಲಾಖೆ ಸಹಯೋಗದೊಂದಿಗೆ ಉಚಿತ ಆಯುರ್ವೇದ ತಪಾಸಣಾ ಶಿಬಿರದಲ್ಲಿ ಗೋ ಪೂಜೆ ನೆರವೇರಿಸಿ ಮಾತನಾಡಿದರು.ನಮ್ಮ ಪರಿಸರದಲ್ಲಿ ಇರುವಂತಹ ಗಿಡಮೂಲಿಕೆಗಳಿಂದಲೇ ಅನೇಕ ರೋಗಗಳಿಗೆ ಔಷಧಿ ಇದೆ. ಅದನ್ನ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಮುಂದಾಗಬೇಕಿದೆ. ಆಯುರ್ವೇದ ಎಂದರೆ ಆಯಸ್ಸನ್ನು ವೃದ್ಧಿಗೊಳಿಸಿಕೊಳ್ಳುವುದು. ಆಯುರ್ ವೇದ ಎಂದರೆ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿದ್ಯೆ. ನಮ್ಮ ಪರಿಸರದಲ್ಲಿ ಗಿಡಮೂಲಿಕೆಗಳಿಂದಲೇ ಅನೇಕ ರೋಗಗಳಿಗೆ ಔಷಧಿ ಇದ್ದು ಅದರ ಬಳಕೆ ನಮಗೆ ಗೊತ್ತಿರುವುದಿಲ್ಲ. ಹಾಗಾಗಿ ನಮ್ಮ ಇಂದಿನವರು ಹಿತ್ತಲು ಗಿಡ ಮದ್ದಲ್ಲ ಎಂದಿದ್ದಾರೆ. ಆದರೆ ಇಂದು ಹಿತ್ತಲ ಗಿಡ ಮದ್ದು ಎಂದು ತೋರಿಸುವ ಕೆಲಸವನ್ನು ಕೈಗೆತ್ತಿಕೊಂಡಿರುವ ಮಠದ ಶ್ರೀಗಳಿಗೆ ಹೃತ್ಪೂರ್ವಕ ಅಭಿನಂದನೆನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ನಿಜಗುಣ ಮಠದ ಬಾಲಷಡಕ್ಷರ ಸ್ವಾಮೀಜಿ ಮಾತನಾಡಿ, ಶ್ರೀಮಠದಿಂದ ಈ ಭಾಗದ ಜನರಿಗೆ ಅಗತ್ಯವಿರುವ ಮಂಡಿ ನೋವು, ಬಿಪಿ ಶುಗರ್, ಅಸ್ತಮಾ, ಕಿಡ್ನಿ ಸ್ಟೋನ್, ಮುಖ್ಯವಾಗಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳಿಗೆ ನಾಟಿ ಗೋ ಆಧಾರಿತ ಆಯುರ್ವೇದ, ಔಷಧೀಯ ಚಿಕಿತ್ಸೆ ಮೂಲಕ ಸೂಕ್ತ ಪರಿಹಾರ ನೀಡುವುದಕ್ಕಾಗಿ ಪ್ರತಿ ತಿಂಗಳು 5 ನೇ ತಾರೀಕು ಮಠದ ವತಿಯಿಂದ ಹಾಗೂ ಇತರೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿರುವ ಸಂಸ್ಥೆಗಳ ಸಹಕಾರದೊಂದಿಗೆ ಇಂತಹ ಶಿಬಿರ ನಡೆಸಲಾಗುತ್ತಿದೆ ಎಂದರು.ಈ ವೇಳೆ ಕ್ಯಾನ್ಸರ್ ತಜ್ಞ ಡಾ.ಡಿ.ಪಿ ರಮೇಶ್, ಆಯುರ್ವೇದ ನಿಂತಿರುವುದೇ ನಾಟಿ ಗೋವಿನ ಹಾಲು, ಮೊಸರು, ಬೆಣ್ಣೆ, ತುಪ್ಪ, ಗೋಮೂತ್ರ, ಗೋಮಯದಿಂದ. ಇವುಗಳ ಆಧಾರಿತವಾಗಿಯೇ ಆಯುರ್ವೇದ ಚಿಕಿತ್ಸೆ ಇದೆ. ಯಾವುದೇ ಕಾಯಿಲೆಯ ತ್ರಿದೋಷಗಳನ್ನು ಸಾಮಾನ್ಯ ಸ್ಥಿತಿಗೆ ತಂದು ಚಿಕಿತ್ಸೆ ನೀಡಿದರೆ ಅದಕ್ಕೆ ಪರಿಹಾರ ಸಾಧ್ಯ, ಕ್ಯಾನ್ಸರ್ ಕಾಯಿಲೆಗೆ ಲಕ್ಷಾಂತರ ರುಪಾಯಿಗಳನ್ನು ಕೊಟ್ಟು ಕಿಮಿಯೋಥೆರಪಿ ರೇಡಿಯೋ ಥೆರಪಿ ಚಿಕಿತ್ಸೆ ಮಾಡಿಸಿದರೂ ಸುಧಾರಣೆ ಸಾಧ್ಯವಿಲ್ಲ. ಅಲ್ಲದೆ ಯಾವುದೇ ಕಾಯಿಲೆಗೆ ಇಂಗ್ಲಿಷ್ ಮೆಡಿಸನ್ಸ್ ತೆಗೆದುಕೊಂಡರೆ ಮತ್ತೊಂದು ಕಾಯಿಲೆ ಉಚಿತವಾಗಿ ದೊರೆಯುತ್ತದೆ. ನಮ್ಮ ಆಯುರ್ವೇದ ಪಂಚಗವ್ಯ ಚಿಕಿತ್ಸಾ ಪದ್ಧತಿ ಮೂಲಕ ಸಂಪೂರ್ಣ ಸುಧಾರಣೆ ಸಾಧ್ಯವಿದೆ ಎಂದು ತಿಳಿಸಿದರು.
ನಂಜನಗೂಡಿನ ಪಾರಂಪರಿಕ ವೈದ್ಯ ಈಶ್ವರ್, ಆಯುಷ್ ಇಲಾಖೆಯ ಡಾ.ಸುಧಾ, ಡಾ. ಕುಸುಮ, ಆರ್‌ಎಸ್‌ಎಸ್‌ನ ಸ್ವಯಂಸೇವಕರಾದ ಬೆಂಡರಹಳ್ಳಿ ಶಿವಕುಮಾರ್, ಸುರೇಶ್, ಅರುಣ್ ಕುಮಾರ್, ವಕೀಲರಾದ ಮಧುಸೂದನ್, ಮುಡಿಗುಂಡ ಉದಯ ಕುಮಾರ್, ತೇರಂಬಳ್ಳಿ ನಾಗಭೂಷಣ್, ಕುಂತೂರು ಗ್ರಾಮ ಪಂಚಾಯಿತಿ ಸದಸ್ಯರಾದ ರವಿಕುಮಾರ್, ಗೋ ಸೇವಾ ಘಟಕದ ಮಹಲಿಂಗ, ನೈಸರ್ಗಿಕ ಕೃಷಿಕ ರೇಚಣ್ಣ, ಸತ್ತೆಗಾಲ ರವಿಶಂಕರ್ ಇದ್ದರು.