ಆರೋಗ್ಯಯುತ ಜೀವನ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಆಯುರ್ವೇದ ಸಹಕಾರಿಯಾಗಿದೆ. ಈ ಚಿಕಿತ್ಸಾ ಪದ್ಧತಿಗೆ ಸಂಬಂಧಿಸಿದಂತೆ ವೈಜ್ಞಾನಿಕ ಸಂಶೋಧನೆಗಳು ಹೆಚ್ಚಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಟಿಎಂಎಇ ಸೊಸೈಟಿ ಅಧ್ಯಕ್ಷ, ಹರಪನಹಳ್ಳಿ ತೆಗ್ಗಿನಮಠದ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆರೋಗ್ಯಯುತ ಜೀವನ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಆಯುರ್ವೇದ ಸಹಕಾರಿಯಾಗಿದೆ. ಈ ಚಿಕಿತ್ಸಾ ಪದ್ಧತಿಗೆ ಸಂಬಂಧಿಸಿದಂತೆ ವೈಜ್ಞಾನಿಕ ಸಂಶೋಧನೆಗಳು ಹೆಚ್ಚಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಟಿಎಂಎಇ ಸೊಸೈಟಿ ಅಧ್ಯಕ್ಷ, ಹರಪನಹಳ್ಳಿ ತೆಗ್ಗಿನಮಠದ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಹೊರವಲಯಲ್ಲಿರುವ ನಿದಿಗೆಯಲ್ಲಿರುವ ಕಾಲೇಜಿನ ಆವರಣದಲ್ಲಿ ಟಿಎಂಎಇಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಶನಿವಾರ ಆಯೋಜಿಸಿದ್ದ ಶಿಷ್ಯ ಸಂಸ್ಕಾರ (ಶಿಷ್ಯೋಪನಯನ), ಲೈಬ್ರರಿ, ವಿವಿಧ ವಿಭಾಗ ಮತ್ತು ಸೆಮಿನಾರ್ ಹಾಲ್‌ನ ನೂತನ ಕಟ್ಟಡದ ಉದ್ಘಾಟನೆ ಹಾಗೂ ಘಟಿಕೋತ್ಸವದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.

ಆಯುರ್ವೇದ ಕ್ಷೇತ್ರದಲ್ಲಿ ಸಂಶೋಧನೆ ಹೆಚ್ಚಿದರೆ ಔಷಧ ವಿತರಣೆ ಹಾಗೂ ಚಿಕಿತ್ಸೆಗೆ ಸಹಕಾರಿಯಾಗಲಿದೆ. ಈ ಕ್ಷೇತ್ರದಲ್ಲಿ ಚಿಕಿತ್ಸೆ ಒದಗಿಸುತ್ತಿರುವವರು ಹಾಗೂ ಆಯುರ್ವೇದ ಅಧ್ಯಯನ ಮಾಡುತ್ತಿರುವವರು ಹಿಂಜರಿಯಬೇಕಿಲ್ಲ. ಈ ಚಿಕಿತ್ಸಾ ಪದ್ಧತಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆಯುತ್ತಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿ, ವೈಜ್ಞಾನಿಕ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಆಧುನಿಕ ಆಪರೇಷನ್ ಕೊಠಡಿ(ಓಟಿ), ವಿವಿಧ ವಿಭಾಗಗಳ ಕಟ್ಟಡ ಮತ್ತು ಲೈಬ್ರರಿಯನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಆಯುರ್ವೇದವು ವಿಜ್ಞಾನದ ಆಧಾರದ ಮೇಲೆ ನಿಂತಿದೆ. ಈ ಪದ್ಧತಿಯ ಮಹತ್ವ ಎಲ್ಲರಿಗೂ ತಿಳಿಯಬೇಕು. ಬದಲಾದ ಜೀವನಶೈಲಿಯಿಂದ ಕ್ಯಾನ್ಸರ್, ಹೃದ್ರೋಗದಂತಹ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚುತ್ತಿವೆ. ರೋಗ ಬಂದಾಗ ಔಷಧಗಳ ಮೊರೆ ಹೋಗುವ ಬದಲು ರೋಗ ಬರದಂತೆ ಆರೋಗ್ಯ ಕಾಪಾಡಿಕೊಳ್ಳಬೇಕು. ಯೋಗ ಮತ್ತು ಆಯುರ್ವೇದ ಹಲವಾರು ಅನಾರೋಗ್ಯ ಸಮಸ್ಯೆಗಳ ತಡೆಗೆ ಸಹಕಾರಿ. ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಕೇಂದ್ರ ಸರ್ಕಾರ ಅಗತ್ಯ ಪ್ರೋತ್ಸಾಹ ನೀಡುತ್ತಿದೆ ಎಂದು ತಿಳಿಸಿದರು.

ಮುದಗಲ್‌ನ ಕಲ್ಯಾಣ ಆಶ್ರಮದ ಪ್ರವಚನ ಯೋಗಿ ಶ್ರೀ ಮಹಾಂತ ಮಹಾ ಸ್ವಾಮೀಜಿ ಮಾತನಾಡಿದರು. ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ರಿಜಿಸ್ಟಾರ್ ಪ್ರೊ.ಆರ್. ತಿಮ್ಮರಾಯಪ್ಪ, ಆರ್‌ಜಿಯುಹೆಚ್‌ಎಸ್‌ನ ಸೆನೆಟ್ ಸದಸ್ಯ ಡಾ. ವೀರೇಶ್ ಕರಬಸಪ್ಪ ಹಂಚಿನಾಳ, ಲ್ಯಾಂಡ್ ಡೆವಲಪರ್ಸ್ ಮತ್ತು ಬಿಲ್ಡರ್ ಡಾ.ಟಿ.ಎಂ. ವಿಶ್ವನಾಥ್, ನಿವೃತ್ತ ಪ್ರಾಧ್ಯಾಪಕ, ಜಾನಪದ ತಜ್ಞ ಬಸವರಾಜ್ ನೆಲ್ಲಿಸರ, ಟಿಎಂಎಇಎಸ್ ಎಎಂಸಿ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಜಿ.ಎ. ಹಿರೇಮಠ, ಪ್ರಾಂಶುಪಾಲರಾದ ರುದ್ರಾಂಬಿಕ ಬಿರಾದರ್, ಉಪ ಪ್ರಾಂಶುಪಾಲ ಡಾ. ಸದಾನಂದ ಜೋಷಿ ವೇದಿಕೆಯಲ್ಲಿ ಇದ್ದರು.

ಇದೇ ಸಂದರ್ಭದಲ್ಲಿ ಸಂಸದ ರಾಘವೇಂದ್ರ ಅವರನ್ನು ಅಭಿನಂದಿಸಲಾಯಿತು. ಡಾ. ಪ್ರಕೃತಿ ಮಂಚಾಲೆ ಮತ್ತು ಡಾ. ನಾಗರಾಜ್ ಅಂಗಡಿ ಶಿಷ್ಯೋಪನಯನ ನಡೆಸಿಕೊಟ್ಟರು. ನಂದಿನಿ, ವೈಷ್ಣವಿ ಧನ್ವಂತರಿ ಗೀತೆ ಹಾಡಿದರು. ಸುಮಿತ್ ಮತ್ತು ಅನೂಪ್ ಪ್ರಾರ್ಥಿಸಿ, ಡಾ.ಸದಾನಂದ ಜೋಶಿ ಸ್ವಾಗತಿಸಿ, ಡಾ. ಕಂಚನ್ ಕುಲಕರ್ಣಿ, ಡಾ.ಎಸ್.ಬಿ.ಪ್ರಶಾಂತ್ ನಿರೂಪಿಸಿದರು.