ಕನ್ನಡಪ್ರಭ ವಾರ್ತೆ ಪಾಂಡವಪುರ
ಆಯುರ್ವೇದ ಚಿಕಿತ್ಸೆ ಮತ್ತು ಔಷಧಿಗಳು ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ಪ್ರತಿಯೊಬ್ಬರು ಉತ್ತಮ ಆರೋಗ್ಯಕ್ಕೆ ಆಯುರ್ವೇದ ಚಿಕಿತ್ಸೆ ಪಡೆಯುವುದು ಅನಿವಾರ್ಯ ಎಂದು ರಾಜ್ಯ ರೈತ ಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ ಹೇಳಿದರು.ತಾಲೂಕಿನ ಕ್ಯಾತನಹಳ್ಳಿ ಸ್ವಾಮಿ ವಿವೇಕ ಮಂದಿರದಲ್ಲಿ ಮಹಿಳಾ ವಿವಿದೋದ್ದೇಶ ಸಹಕಾರ ಸಂಘ, ಆಯುಷ್ ಇಲಾಖೆ, ಜಿಲ್ಲಾ ಪಂಚಾಯ್ತಿ, ಸರ್ಕಾರಿ ಯುನಾನಿ ಚಿಕಿತ್ಸಾಲಯ ಹಾಗೂ ಆಯುರ್ವೇದ ವಿಭಾಗ ಶ್ರೀರಂಗಪಟ್ಟಣ ಆಶ್ರಯದಲ್ಲಿ ವಯೋಮಿತ್ರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಫಾಟಿಸಿ ಮಾತನಾಡಿದರು.
ಪ್ರಸ್ತುತದಲ್ಲಿ ಉಲ್ಬಣಗೊಳ್ಳುತ್ತಿರುವ ರೋಗಗಳಿಗೆ ಆಯುರ್ವೇದ ಚಿಕಿತ್ಸೆಯೇ ಪರಿಣಾಮಕಾರಿಯಾಗಿದೆ. ಜನರು ಆಯುರ್ವೇದದ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದರು.ಕ್ಯಾತನಹಳ್ಳಿ ಸ್ವಾಮಿ ವಿವೇಕಾನಂದ ಮಂದಿರದ ವ್ಯವಸ್ಥಾಪಕ ಕೃಷ್ಣಕುಮಾರ್ ಮಾತನಾಡಿ, ಆಯುರ್ವೇದ ಔಚಿತ್ಯ ಪೂರ್ಣವಾಗಿದೆ. ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಸಬಲೀಕರಣಗೊಳ್ಳುತ್ತಿದ್ದಾಳೆ. ಮಹಿಳೆಯು ವ್ಯಕ್ತಿತ್ವದ ವಿಕಸನದ ಜತೆಗೆ ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ ಎಂದರು.
ಪ್ರಕೃತಿ ನಡುವೆ ಇರುವ ನಾವು ಆಯುರ್ವೇದ ಚಿಕಿತ್ಸೆ ಅಗತ್ಯವಾಗಿದೆ. ಇಂದು ಮಧುಮೇಹ, ರಕ್ತದ ಒತ್ತಡ, ಮಂಡಿ ನೋವು ಸೇರಿದಂತೆ ಹಲವು ರೋಗಗಳು ಹೆಚ್ಚುತ್ತಿವೆ. ಇಂತಹ ರೋಗಗಳಿಗೂ ಆಯುರ್ವೇದವು ದಿವ್ಯ ಔಷಧವಾಗಿದೆ. ಅಲ್ಲದೇ ಆಯುರ್ವೇದ ಚಿಕಿತ್ಸೆ, ಔಷಧದ ಜೊತೆಗೆ ಯೋಗಾಭ್ಯಾಸವು ಕೂಡ ಮುಖ್ಯ. ಆದಷ್ಟು ಪ್ರಕೃತಿ ಚಿಕಿತ್ಸೆ ಮತ್ತು ಆಯುರ್ವೇದ ಚಿಕಿತ್ಸೆಯಿಂದ ಎಲ್ಲರೂ ಆರೋಗ್ಯ ಕಾಪಾಡಿಕೊಂಡು ತಮ್ಮ ಆಯುಷ್ಯ ವೃದ್ದಿಸಿಕೊಳ್ಳಬೇಕಿದೆ ಎಂದರು.
ಶ್ರೀರಂಗಪಟ್ಣಣ ಸರ್ಕಾರಿ ಯುನಾನಿ ಚಿಕಿತ್ಸಾಲಯ ಹಾಗೂ ಆಯುರ್ವೇದ ವಿಭಾಗದ ಆಡಳಿತಾಧಿಕಾರಿ ಡಾ.ಎಂ.ಲೋಕೇಶ್ ಮಾತನಾಡಿ, ಸಾಮಾನ್ಯವಾಗಿ 40 ವರ್ಷ ದಾಟುತ್ತಿದ್ದಂತೆಯೇ ರೋಗಗಳು ಪ್ರಾರಂಭಗೊಳ್ಳುತ್ತವೆ. ಅದರಲ್ಲೂ ಇಂದಿನ ಆಹಾರ, ಜೀವನ ಶೈಲಿಯಿಂದಾಗಿ ರೋಗಗಳು ಉಲ್ಬಣಗೊಳ್ಳುವುದು ಸರ್ವೇ ಸಾಮಾನ್ಯ. ಹಾಗಾಗಿ ಆಯುರ್ವೇದ ಚಿಕಿತ್ಸೆಯ ಜೊತೆಗೆ ಪಂಚಕರ್ಮ ಚಿಕಿತ್ಸೆ ಪಡೆಯಬೇಕಿದೆ ಎಂದರು.
ಶಿಬಿರದಲ್ಲಿ ತಜ್ಞ ವೈದ್ಯರಿಂದ ಮೂಳೆ, ಮಾಂಸಖಂಡ ಹಾಗೂ ಸಂಧಿ ಸಂಬಂಧಿತ ಸಮಸ್ಯೆಗಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿ ಉಚಿತ ಔಷಧ ನೀಡಲಾಯಿತು. ಸುಮಾರು 130ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆಗೊಳಗಾದರು.ಕ್ಯಾತನಹಳ್ಳಿ ಮಹಿಳಾ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಪ್ರೇಮ ವಿಶ್ವನಾಥ್, ಕಾರ್ಯದರ್ಶಿ ಅಂಬುಜಾ, ನಿರ್ದೇಶಕರಾದ ಶಾರದ, ಸುಜಾತ, ರಾಧ, ಸುಧಾ, ಚನ್ನಾಜಮ್ಮ, ಸರೋಜ, ಮಣಿಯಮ್ಮ, ಸರ್ಕಾರಿ ಯುನಾನಿ ಚಿಕಿತ್ಸಾಲಯ ಹಾಗೂ ಆಯುರ್ವೇದ ವಿಭಾಗದ ಆಡಳಿತಾಧಿಕಾರಿ ಡಾ.ಎಂ.ಲೋಕೇಶ್, ಪಂಚಕರ್ಮ ತಜ್ಞ ವೈದ್ಯೆ ಡಾ.ರಜನಿ ಹೆಗ್ಗಡೆ, ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯ ಡಾ.ಎಸ್.ಎನ್.ಅಭಿಷೇಕ ಹಾಗೂ ಸಿಬ್ಬಂದಿ ವರ್ಗ, ಅರ್ಚಕ ಎನ್.ಸದಾನಂದ ಇತರರು ಇದ್ದರು.