ಆಯುಷ್ಮಾನ್ ಭಾರತ್ ಕಾರ್ಡ್‌ ನೋಂದಣಿ ಕಾರ್ಯಕ್ಕೆ ಚಾಲನೆ

| Published : Dec 07 2024, 12:31 AM IST

ಸಾರಾಂಶ

೭೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಐದು ಲಕ್ಷ ರುಪಾಯಿ ಆರೋಗ್ಯ ವಿಮೆ ಸೌಲಭ್ಯ ಯೋಜನೆ ರೂಪಿಸಲಾಗಿದ್ದು, ಎಪಿಎಲ್ ಅಥವಾ ಬಿಪಿಎಲ್ ಎಂಬ ತಾರತಮ್ಯವಿಲ್ಲದೇ, ಆದಾಯ ಲೆಕ್ಕಿಸದೇ ಪ್ರತಿಯೊಬ್ಬ ಹಿರಿಯ ನಾಗರಿಕರು ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ. ಜತೆಗೆ ನೋಂದಣಿ ಮುಖ್ಯವಾಗಿರುತ್ತದೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್‌ ಸಲಹೆ ನೀಡಿದರು. ಆಯುಷ್ಮಾನ್ ಭಾರತ್ ಕಾರ್ಡ್‌ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಹೊಳೆನರಸೀಪುರ: ೭೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಐದು ಲಕ್ಷ ರುಪಾಯಿ ಆರೋಗ್ಯ ವಿಮೆ ಸೌಲಭ್ಯ ಯೋಜನೆ ರೂಪಿಸಲಾಗಿದ್ದು, ಎಪಿಎಲ್ ಅಥವಾ ಬಿಪಿಎಲ್ ಎಂಬ ತಾರತಮ್ಯವಿಲ್ಲದೇ, ಆದಾಯ ಲೆಕ್ಕಿಸದೇ ಪ್ರತಿಯೊಬ್ಬ ಹಿರಿಯ ನಾಗರಿಕರು ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ. ಜತೆಗೆ ನೋಂದಣಿ ಮುಖ್ಯವಾಗಿರುತ್ತದೆ. ಆದ್ದರಿಂದ ಎಲ್ಲರೂ ಸರ್ಕಾರದ ಮಾರ್ಗಸೂಚಿ ಅನುಸಾರ ನೋಂದಣಿ ಮಾಡಿಸಿಕೊಳ್ಳಿ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್‌ ಸಲಹೆ ನೀಡಿದರು. ಪಟ್ಟಣದ ಶ್ರೀ ಕನ್ನಿಕಾ ಪರಮನೇಶ್ವರಿ ದೇವಸ್ಥಾನದ ಆವರಣದಲ್ಲಿ ಆರ್‍ಯವೈಶ್ಯ ಮಂಡಳಿ ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ೭೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಕಾರ್ಡ್‌ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಮೆಡಿಕೇರ್‌ಗೆ ಸಂಬಂಧಿಸಿದ ಹೆಚ್ಚಿನ ವೆಚ್ಚಗಳ ಬಗ್ಗೆ ಚಿಂತಿಸದೇ ಅಗತ್ಯ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಹಕಾರಿಯಾಗಿದೆ. ಆಸ್ಪತ್ರೆಯ ಪೂರ್ವ ಮತ್ತು ನಂತರದ ವೆಚ್ಚಗಳಿಗೆ ಕವರೇಜ್ ದೊರೆಯುತ್ತದೆ ಮತ್ತು ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತದೆ ಹಾಗೂ ಭಾರತದಾದ್ಯಂತ ಸುಮಾರು ೬ ಕೋಟಿ ಹಿರಿಯ ನಾಗರಿಕರಿಗೆ ಹಣಕಾಸಿನ ನೆರವು ನೀಡುತ್ತದೆ ಎಂದರು. ಕೆ.ವಿ.ಉದಯಭಾನು ಸ್ವಾಗತಿಸಿದರು ಹಾಗೂ ಮಂಜುನಾಥ್ ವಂದಿಸಿದರು. ಪುರಸಭಾಧ್ಯಕ್ಷ ಕೆ.ಶ್ರೀಧರ್, ಎ.ಆರ್.ರವಿಕುಮಾರ್‌, ಡಾ. ಎಚ್.ಕೆ.ರಮೇಶ್, ಡಾ. ವಿನಯ್ ಕುಮಾರ್‌, ಆರೋಗ್ಯ ಮಿತ್ರ ವೀರಭದ್ರಪ್ಪ, ಎಚ್.ಪಿ.ರಮೇಶ್, ಮುರಳಿಧರ ಗುಪ್ತ ಇದ್ದರು.