ಸಮಗ್ರ ಆರೋಗ್ಯ ಸೇವೆ, ಗರ್ಭಿಣಿಯರು ಮತ್ತು ಮಕ್ಕಳ ಆರೈಕೆ, ಲಸಿಕಾಕರಣ, ಮಲೇರಿಯಾ, ಟಿಬಿ ಅಂತಹ ಸಾಂಕ್ರಾಮಿಕ ರೋಗಗಳು ಹಾಗೂ ಬಿಪಿ, ಮಧುಮೇಹ, ಕ್ಯಾನ್ಸರ್ ನಂತಹ ಅಸಾಂಕ್ರಾಮಿಕ ರೋಗಗಳ ಆರಂಭಿಕ ಪತ್ತೆ ಮತ್ತು ಚಿಕಿತ್ಸೆ, ಕಣ್ಣು, ಕಿವಿ, ಹಲ್ಲಿನ ಸಮಸ್ಯೆಗಳಿಗೆ ಪ್ರಾಥಮಿಕ ಚಿಕಿತ್ಸೆ ಹಾಗೂ ಉಚಿತ ಔಷಧ ಒದಗಿಸಬೇಕು.

ಕನ್ನಡಪ್ರಭ ವಾರ್ತೆ ಪಾವಗಡ

ಆರೋಗ್ಯ ಇಲಾಖೆಯ ಅಯುಷ್ಮಾನ್‌ ಭಾರತ್‌ ಯೋಜನೆ ಅಡಿ ಸೇವೆ ಸಲ್ಲಿಸುವ ಸಮುದಾಯ ಆರೋಗ್ಯ ಅಧಿಕಾರಿಗಳು (ಸಿಎಚ್‌ಒ) ಕೇಂದ್ರಗಳಿಗೆ ಭೇಟಿ ನೀಡದ ಕಾರಣ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಗರ್ಭೀಣಿ ಮಹಿಳೆಯರು, ಮಕ್ಕಳು ಹಾಗೂ ತಾಯಂದಿರು ಲಸಿಕಾಕರಣದಿಂದ ವಂಚಿತರಾಗುತ್ತಿದ್ದಾರೆ.

ಆಯುಷ್ಮಾನ್ ಭಾರತ್ ಯೋಜನೆಯಡಿ ಕಾರ್ಯ ನಿರ್ವಹಿಸಲು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು, ಈಗ ಆಯುಷ್ಮಾನ್ ಆರೋಗ್ಯ ಮಂದಿರ ಎಂದು ಮರುನಾಮಕರಣಗೊಂಡಿವೆ. ಇವು ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ಮನೆಬಾಗಿಲಿನಲ್ಲೇ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. 2018ರಲ್ಲಿ ಕೇಂದ್ರ ಸರ್ಕಾರ 1.50 ಲಕ್ಷ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಘೋಷಿಸಿದ್ದ ಹಿನ್ನೆಲೆಯಲ್ಲಿ ಹಳೆಯ ಉಪ-ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಿ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಸಮಗ್ರ ಆರೋಗ್ಯ ಸೇವೆ, ಗರ್ಭಿಣಿಯರು ಮತ್ತು ಮಕ್ಕಳ ಆರೈಕೆ, ಲಸಿಕಾಕರಣ, ಮಲೇರಿಯಾ, ಟಿಬಿ ಅಂತಹ ಸಾಂಕ್ರಾಮಿಕ ರೋಗಗಳು ಹಾಗೂ ಬಿಪಿ, ಮಧುಮೇಹ, ಕ್ಯಾನ್ಸರ್ ನಂತಹ ಅಸಾಂಕ್ರಾಮಿಕ ರೋಗಗಳ ಆರಂಭಿಕ ಪತ್ತೆ ಮತ್ತು ಚಿಕಿತ್ಸೆ, ಕಣ್ಣು, ಕಿವಿ, ಹಲ್ಲಿನ ಸಮಸ್ಯೆಗಳಿಗೆ ಪ್ರಾಥಮಿಕ ಚಿಕಿತ್ಸೆ ಹಾಗೂ

ಉಚಿತ ಔಷಧ ಒದಗಿಸಬೇಕು. ರಕ್ತ, ಮೂತ್ರ ಸೇರಿದಂತೆ ಪ್ರಮುಖ ಲ್ಯಾಬ್ ಪರೀಕ್ಷೆ ಸೇರಿದಂತೆ ಟೆಲಿ-ಕನ್ಸಲ್ಟೇಶನ್, ಇ-ಸಂಜೀವಿನಿ ತಂತ್ರಜ್ಞಾನದ ಮೂಲಕ ದೂರದ ಹಳ್ಳಿಯ ಜನರಿಗೆ ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯರಿಂದ ವಿಡಿಯೋ ಕರೆ ಮೂಲಕ ಸಮಾಲೋಚನೆ, ಗಂಭೀರ ರೋಗಿಗಳನ್ನು ಮೇಲ್ಮಟ್ಟದ ಆಸ್ಪತ್ರೆಗಳಿಗೆ ಶಿಫಾರಸು ವ್ಯವಸ್ಥೆ ಹೊಂದಲಾಗಿದೆ.

ಈ ಸಂಬಂಧ ಪಾವಗಡ ತಾಲೂಕಿನಲ್ಲಿ 57 ಅಯುಷ್ಮಾನ್‌ ಸಮುದಾಯ ಆರೋಗ್ಯ ಕೇಂದ್ರಗಳಿದ್ದು, ಈ ಪೈಕಿ ಬಿಎಸ್‌ಸಿ ನರ್ಸಿಗ್‌ ಅರ್ಹತೆ ಹೊಂದಿದ 36 ಮಂದಿ ಸಮುದಾಯ ಆರೋಗ್ಯಧಿಕಾರಿಗಳು (ಸಿಎಚ್‌ಒ) ಹಾಗೂ 11ಮಂದಿ ಎಎನ್‌ಎಂಗಳಿದ್ದಾರೆ. ಡಿಎಚ್ಒ ಆದೇಶವಿದ್ದರೂ ಬಹುತೇಕ ಸಿಎಚ್‌ಒಗಳು ಭೇಟಿ ನೀಡಿ ಸರಿಯಾಗಿ ಕೆಲಸ ನಿರ್ವಹಿಸದ ಕಾರಣ ಅಯುಷ್ಮಾನ್‌ ಆರೋಗ್ಯ ಸೇವೆ ಗ್ರಾಮೀಣ ಬಡ ಜನತೆಗೆ ಮಾರೀಚಿಕೆ ಅಗಿದೆ.

----

ಸರ್ಕಾರ ನಿಯಮನುಸಾರ ಗ್ರಾಮೀಣ ಪ್ರದೇಶದ ಅಯುಷ್ಮಾನ್‌ ಉಪ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಚಿಕಿತ್ಸೆ ನೀಡಬೇಕು.ವಾರಕ್ಕೆ ಎರಡು ದಿನ ಗ್ರಾಮಗಳಿಗೆ ಭೇಟಿ ನೀಡಿ ಬಡರೋಗಿಗಳ ಬಿಪಿ, ಶುಗರ್‌ ಇತರೆ ಇತರೆ ಸಾಂಕ್ರಾಮಿಕ ರೋಗಳ ಪರೀಕ್ಷೆ ನಡೆಸಿ ಅರೈಕೆ ಹಾಗೂ ಚಿಕಿತ್ಸೆ ನೀಡಬೇಕು. ಆದರೆ, ತಿರುಮಣಿ ಹಾಗೂ ವಳ್ಳೂರು ಸೇರಿ ಗ್ರಾಪಂ ವ್ಯಾಪ್ತಿಯ ಉಪ ಕೇಂದ್ರಗಳು ಹಾಗೂ ಗ್ರಾಮಗಳಿಗೆ ಸಿಎಚ್ಒಗಳು ಭೇಟಿ ನೀಡುತ್ತಿಲ್ಲ.

- ವಳ್ಳೂರು ನಾಗೇಶ್‌, ದಲಿತ ಮುಖಂಡ

----ಆಯುಷ್ಮನ್‌ ಆರೋಗ್ಯ ಕೇಂದ್ರಗಳಿಗೆ ಸಿಎಚ್‌ಒಗಳು ಭೇಟಿ ನೀಡುವುದೇ ಅಪರೂಪ, ಕೇಂದ್ರ ಸ್ಥಾನದಲ್ಲಿ ಯಾರು ಇಲ್ಲ. ಸಮಯಕ್ಕೆ ಗರ್ಬೀಣಿ ಹಾಗೂ ಮಕ್ಕಳು ಮತ್ತು ತಾಯಂದಿರಿಗೆ ಲಸಿಕೆ ಸಿಗುತ್ತಿಲ್ಲ. ಕಾರ್ಡ್‌ ನೋಂದಣಿ ಸೇರಿದಂತೆ ಆಯುಷ್ಯನ್‌ ಆರೋಗ್ಯ ಸೇವೆಗಳು ಗ್ರಾಮೀಣ ಜನತೆಗೆ ತಲುಪುತ್ತಿಲ್ಲ. ಆರೋಗ್ಯ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು.

ಇಮ್ರಾನ್‌ ಉಲ್ಲಾ

ಮಾನವಹಕ್ಕುಗಳು ಹಾಗೂ ಭ್ರಷ್ಚಚಾರ ವಿರೋಧಿ ಸಂಸ್ಥೆ ತಾ,ಅಧ್ಯಕ್ಷ

----ಆಯುಷ್ಮಾನ್‌ ಆರೋಗ್ಯ ಸೇವೆ ಗ್ರಾಮೀಣ ಜನತೆಗೆ ತಲುಪಬೇಕು. ಆರೋಗ್ಯ ಸೇವೆ ಕುರಿತು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ನಿಯಮಾನುಸಾರ ತೆರಳಿ ಕ್ಯಾಂಪ್‌ ನಡೆಸುವ ಜಿಪಿಎಸ್‌ ಮಾಡಿ ವಾಟ್ಸಾಪ್‌ಗೆ ಕಳುಹಿಸಬೇಕು, ಈ ನಿಯಮ ಪಾಲಿಸಿದರೆ ಮಾತ್ರ ಹಾಜರಾತಿ ನೀಡಿ ವೇತನಕ್ಕೆ ಸಹಕರಿಸಲಾಗುವುದು.

ನಾಗೇಶ್‌ನಾಯ್ಕ್‌ , ತಾಲೂಕು ಆರೋಗ್ಯಧಿಕಾರಿ