ಕನ್ನಡಪ್ರಭ ವಾರ್ತೆ ನಾಪೋಕ್ಲು

ಕಾಡಾನೆಗಳು ದಾಂದಲೆ ಮಾಡಿ ಬತ್ತದ ಸಸಿ ಮಡಿ ಧ್ವಂಸ ಮಾಡಿದ ಘಟನೆ ಇಲ್ಲಿಗೆ ಸಮೀಪದ ಅಯ್ಯಂಗೇರಿಯದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ .

ಅಯ್ಯಂಗೇರಿ ಗ್ರಾಮದ ನಿವಾಸಿ ಕಾವೇರಿ ಮನೆ ಭರತ್ ಎಂಬವರು ತಮ್ಮ ಗದ್ದೆಯಲ್ಲಿ ನಾಟಿಗೆ ಸಿದ್ದಪಡಿಸಿದ ಬತ್ತದ ಸಸಿ ಮಡಿಗಳನ್ನು ಕಾಡಾನೆಗಳು ಮೆದ್ದು ತುಳಿದು ನಾಶ ಮಾಡಿಸಿದ್ದಲ್ಲದೆ ಇನ್ನಿತರ ತೋಟಗಳಿಗೂ ಲಗ್ಗೆ ಇಟ್ಟು ಅಪಾರ ನಷ್ಟವನ್ನು ಉಂಟು ಮಾಡಿದ ಪರಿಣಾಮ ರೈತರು ಕಂಗಾಲಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಅಯ್ಯಂಗೇರಿ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು ತೋಟ ಗದ್ದೆಗಳಲ್ಲಿ ಫಸಲು ನಷ್ಟವಾಗುತ್ತಿದೆ. ಗ್ರಾಮಸ್ಥರು ಸಮಸ್ಯೆಯಿಂದ ಬಳಲುತ್ತಿದ್ದಾರೆ .

ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಾಡಾನೆಗಳು ಗದ್ದೆಗಳಿಗೆ ಲಗ್ಗೆ ಇಟ್ಟು ಬತ್ತದ ಕೃಷಿಯನ್ನು ನಾಶ ಮಾಡುತ್ತಿವೆ. ನಾಟಿ ಮಾಡಿದ ಗದ್ದೆಗಳಲ್ಲಿ ತೀವ್ರ ಹಾನಿಯಾಗಿದೆ. ನಷ್ಟಕ್ಕೆ ಒಳಗಾಗಿರುವ ರೈತರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಯ್ಯಂಗೇರಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ನಿರಂತರವಾಗಿದೆ ಎಂದು ಆತಂಕ ವ್ಯಕ್ತಪಡಿಸಿರುವ ಗ್ರಾಮಸ್ಥರು ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗೆ ಅಟ್ಟಬೇಕು ಹಾಗೂ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ .