ಹೊಸಪೇಟೆ, ಕಮಲಾಪುರದಲ್ಲಿ ಅಯ್ಯಪ್ಪಸ್ವಾಮಿ ಮಂಡಲ ಪೂಜಾ ಕಾರ್ಯಕ್ರಮ

| Published : Dec 28 2024, 01:03 AM IST

ಸಾರಾಂಶ

ಅಯ್ಯಪ್ಪ ಸ್ವಾಮಿ ಮೂರ್ತಿಗೆ ಕಳಶಾಭಿಷೇಕ, ಅಷ್ಟಾಭಿಷೇಕ, ವಿಶೇಷ ಅಲಂಕಾರ ಗೈದು ಪೂಜೆಯನ್ನು ನೆರವೇರಿಸಲಾಯಿತು.

ಹೊಸಪೇಟೆ: ನಗರದ ನೆಹರೂ ಕಾಲನಿಯ ಅಯಪ್ಪ ಸ್ವಾಮಿ ದೇವಾಲಯದಲ್ಲಿ ಗುರುವಾರ ಮಂಡಲ ಪೂಜಾ ವಿಶೇಷ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಮಂಡಲ ಪೂಜಾ ವಿಶೇಷ ಕಾರ್ಯಕ್ರಮದ ಪ್ರಯುಕ್ತ ದೇಗುಲದ ಅಯ್ಯಪ್ಪ ಸ್ವಾಮಿ ಮೂರ್ತಿಗೆ ಕಳಶಾಭಿಷೇಕ, ಅಷ್ಟಾಭಿಷೇಕ, ವಿಶೇಷ ಅಲಂಕಾರ ಗೈದು ಪೂಜೆಯನ್ನು ನೆರವೇರಿಸಲಾಯಿತು.

ಪ್ರಧಾನ ಆರ್ಚಕ ಶಂಕರನ್ ಎನ್.ನಂಬೂದರಿ ವಿಶೇಷ ಪೂಜೆ ನೆರವೇರಿಸಿದರು. ಅಯ್ಯಪ್ಪ ಮಾಲಾಧಾರಿಗಳು ಸೇರಿದಂತೆ ಸಹಸ್ರಾರು ಭಕ್ತರು, ಬೆಳಗ್ಗೆಯಿಂದ ಅಯ್ಯಪ್ಪ ದೇವಸ್ಥಾನಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು. ಹೂ-ಹಣ್ಣು, ಕಾಣಿಕೆ ಸಲ್ಲಿಸಿ ಭಕ್ತಿ ಮೆರೆದರು.

ಬಳಿಕ ನಡೆದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಪ್ರಸಾದ ಸ್ವೀಕಾರ ಮಾಡಿದರು.

ಮಂಡಲ ಪೂಜಾ ವಿಶೇಷ ಕಾರ್ಯಕ್ರಮದ ಪ್ರಯುಕ್ತ ಅಯ್ಯಪ್ಪಸ್ವಾಮಿಯ ಮೂರ್ತಿಯ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮಾಲಾಧಾರಿಗಳು, ಭಕ್ತರು ಭಜನೆ ಗೀತೆಗಳನ್ನು ಹಾಡಿ ಹೆಜ್ಜೆ ಹಾಕಿದರು.

ನಗರದ ಪಟೇಲ್ ನಗರದಲ್ಲಿರುವ ಶ್ರೀವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಪುನೀತ್ ರಾಜಕುಮಾರ್ ವೃತ್ತ, ಮದಕರಿನಾಯಕ ವೃತ್ತ, ವಾಲ್ಮೀಕಿ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳ ಮೂಲಕ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.

ರಾತ್ರಿ ಅಯ್ಯಪ್ಪ ಸ್ವಾಮಿಗೆ ಮಹಾಮಂಗಳಾರತಿ, ಭಸ್ಮಾಭಿಷೇಕಗೈದು ವಿಶೇಷ ಪೂಜೆ ಸಲ್ಲಿಸಿ, ಹರಿವಾರಸಾನಂ ಗೀತೆ ಹಾಡಿದರು. ದೇವಸ್ಥಾನ ಟ್ರಸ್ಟ್ ಸದಸ್ಯರಾದ ಭೂಪಾಲ್ ಪ್ರಲ್ಹಾದ್, ಡಿ.ವೆಂಕಟೇಶ್, ಮಾಲತೇಶ್, ಮುಖಂಡರಾದ ಸಂತೋಷ್, ರಾಮಸ್ವಾಮಿ, ಮಂಜುನಾಥ, ರಾಘವೇಂದ್ರ, ಜಗನ್, ಆನಂದ್ ಇತರರು ಇದ್ದರು.

ಕಮಲಾಪುರದಲ್ಲೂ ವಿಶೇಷ ಪೂಜೆ: ತಾಲೂಕಿನ ಕಮಲಾಪುರದ ಶ್ರೀಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೆ ನೆರವೇರಿಸಲಾಯಿತು.

ಬಳಿಕ ಅಯ್ಯಪ್ಪಸ್ವಾಮಿ ದೇಗುಲದಿಂದ ಭವ್ಯ ಮೆರವಣಿಗೆ ಆರಂಭಗೊಂಡಿತು. ಕಮಲಾಪುರ ಪಟ್ಟಣದ ಹಿರೇಕೇರಿ, ತಿಮ್ಮನಾಥಕೇರಿ, ಮನ್ಮಥಕೇರಿ, ಚೌಡಿಕೇರಿ, ಶ್ರೀಕೃಷ್ಣ ದೇವರಾಯ ವೃತ್ತ, ಊರಮ್ಮಗುಡಿ ಬಯಲು, ಗೋನಾಳ್ ಕೇರಿ, ವಾಲ್ಮೀಕಿ ವೃತ್ತ, ಎಚ್ ಪಿಸಿ ರಸ್ತೆಯ ಮಾರೆಮ್ಮ ದೇಗುಲ ಮಾರ್ಗವಾಗಿ ಪುನಃ ಅಯ್ಯಪ್ಪ ಸ್ವಾಮಿ ದೇಗುಲದ ವರೆಗೆ ಮೆರವಣಿಗೆ ನಡೆಯಿತು. ಮಂಡಲ ಪೂಜೆ ನಿಮಿತ್ತ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಗುರುಸ್ವಾಮಿಗಳಾದ ಶ್ರೀನಿವಾಸ್, ಆದಿಶೇಷ, ಗಣೇಶ್, ಭದ್ರಸ್ವಾಮಿ, ಬಳೆಗಾರ್ ಶ್ರೀನಿವಾಸ್ ಇತರರಿದ್ದರು.