ಟೆಂಡರ್ ಕರೆದು 3 ತಿಂಗಳಾದದ್ರೂ ಆರಂಭವಾಗದ ಕಾಮಗಾರಿ : ಸ್ವಲ್ಪ ಎಚ್ಚರ ತಪ್ಪಿದರೂ ಕೈ ಕಾಲು ಮುರಿದುಕೊಳ್ಳುವ ಪರಿಸ್ಥಿತಿ

| Published : Dec 28 2024, 01:03 AM IST / Updated: Dec 28 2024, 07:43 AM IST

ಟೆಂಡರ್ ಕರೆದು 3 ತಿಂಗಳಾದದ್ರೂ ಆರಂಭವಾಗದ ಕಾಮಗಾರಿ : ಸ್ವಲ್ಪ ಎಚ್ಚರ ತಪ್ಪಿದರೂ ಕೈ ಕಾಲು ಮುರಿದುಕೊಳ್ಳುವ ಪರಿಸ್ಥಿತಿ
Share this Article
  • FB
  • TW
  • Linkdin
  • Email

ಸಾರಾಂಶ

ಬೈಕ್ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಕೈ ಕಾಲು ಮುರಿದುಕೊಳ್ಳುವ ಪರಿಸ್ಥಿತಿ ಇದೆ. ಇಂತಹ ಪ್ರಕರಣಗಳು ಇಲ್ಲಿ ಮಾಮೂಲಾಗಿವೆ. ಗ

ಕೂಡ್ಲಿಗಿ: ಕೂಡ್ಲಿಗಿ- ಕೊಟ್ಟೂರು ಅವಳಿ ಪಟ್ಟಣಗಳಿಗೆ ಹೋಗುವ ರಾಜ್ಯ ಹೆದ್ದಾರಿ ಕಳೆದ ಮಳೆಗಾಲಕ್ಕೆ ಕೊಚ್ಚಿ ಹೋಗಿದ್ದರೂ ಮಳೆಗಾಲ ಮುಗಿದು 2 ತಿಂಗಳು ಕಳೆದರೂ ರಸ್ತೆಯ ದುರಸ್ತಿ ನಡೆದಿಲ್ಲ. ದಟ್ಟಣೆಯ ಸಂಚಾರವಿರುವ ಈ ರಸ್ತೆಯಲ್ಲಿ ಸಂಚರಿಸುವ ಸವಾರರು ಧೂಳಿನ ಸ್ನಾನ ಮಾಡಬೇಕಾಗಿದೆ.

ಬೈಕ್ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಕೈ ಕಾಲು ಮುರಿದುಕೊಳ್ಳುವ ಪರಿಸ್ಥಿತಿ ಇದೆ. ಇಂತಹ ಪ್ರಕರಣಗಳು ಇಲ್ಲಿ ಮಾಮೂಲಾಗಿವೆ. ಗಜಾಪುರದಿಂದ ಕೊಟ್ಟೂರುವರೆಗೆ 10 ಕಿ.ಮೀ. ರಸ್ತೆ ಕಾಮಗಾರಿಗೆ ಟೆಂಡರ್ ಕರೆದು 3 ತಿಂಗಳಾದರೂ ಕಾಮಗಾರಿ ಪ್ರಾರಂಭ ಮಾಡಿಲ್ಲ. ಕೇಳಿದರೆ ಅಧಿಕಾರಿಗಳು ತಾಂತ್ರಿಕ ತೊಂದರೆಗಳನ್ನು ಮುಂದಿಟ್ಟುಕೊಂಡು ತಿಂಗಳಾಗುತ್ತದೆ ಎನ್ನುವ ಸಬೂಬು ಹೇಳುತ್ತಾರೆ.

ದಾವಣಗೆರೆ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಆಂಧ್ರಪ್ರದೇಶಕ್ಕೆ ಹೋಗುವ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಬಳ್ಳಾರಿ- ಆಂಧ್ರ ಗಡಿಯಲ್ಲಿ ಯಥೇಚ್ಛವಾಗಿ ಬೆಳೆಯುವ ಮೆಣಸಿನಕಾಯಿಯನ್ನು ಬ್ಯಾಡಗಿ ಮಾರುಕಟ್ಟೆಗೆ ಸಾಗಿಸಲು ಪ್ರತಿ ವಾರ 2ರಿಂದ 3 ದಿನ ಸಾವಿರಾರು ಲಾರಿಗಳು ಸಂಚರಿಸುತ್ತವೆ. ರಸ್ತೆ ಹದಗೆಟ್ಟಿದ್ದರೂ ಇನ್ನು ಕಾಮಗಾರಿ ಆರಂಭವಾಗದಿರುವುದರಿಂದ ಸ್ಥಳೀಯರಲ್ಲಿ ಆಕ್ರೋಶವಿದೆ.

ಗಜಾಪುರದಿಂದ ಕೊಟ್ಟೂರಿಗೆ ಹೋಗುವ 10 ಕಿ.ಮೀ. ರಸ್ತೆ ತೀರಾ ಅಧ್ವಾನವಾಗಿದೆ. ಈ ರಸ್ತೆಯ ಕಾಮಗಾರಿಗೆ ಸೆ.10ರಂದೇ ಟೆಂಡರ್ ಕರೆಯಲಾಗಿದೆ. 3 ತಿಂಗಳು ಕಳೆದರೂ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ. ಚಿತ್ರದುರ್ಗ ವಿಭಾಗದ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ರಸ್ತೆ ಡಾಂಬರೀಕರಣಕ್ಕೆ ₹4.35 ಕೋಟಿ ನಿಗದಿಮಾಡಿದೆ. ಆದರೆ ಟೆಂಟರ್ ಪ್ರಕ್ರಿಯೆ ತಾಂತ್ರಿಕ ಕಾರಣಗಳಿಂದ ಪ್ರಾರಂಭವಾಗಿಲ್ಲ. ಇನ್ನು 15 ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗುತ್ತದೆ ಎನ್ನುತ್ತಾರೆ. ಇದಕ್ಕೆ ಸ್ಥಳೀಯ ಶಾಸಕರ ಇಚ್ಛಾಶಕ್ತಿಯೂ ತೀರಾ ಅಗತ್ಯವಿದೆ.

ಕೂಡ್ಲಿಗಿ, ಕೊಟ್ಟೂರು ರಸ್ತೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಕಾಣುವುದಿಲ್ಲವೇ? ಮಳೆಗಾಲದಲ್ಲಿ ಸಂಪೂರ್ಣ ಹದಗೆಟ್ಟ ರಸ್ತೆ ಕೆಸರುಗದ್ದೆಯಂತಾಗಿತ್ತು. ಈಗ ಮಳೆಗಾಲ ಮುಗಿದು ಎರಡು ತಿಂಗಳಾದರೂ ಕಾಮಗಾರಿ ಏಕೆ ಪ್ರಾರಂಭಿಸಿಲ್ಲ? ಎಂದು ಪ್ರಶ್ನಿಸುತ್ತಾರೆ ಗಜಾಪುರ ನಿವಾಸಿ ಮಂಜುನಾಥ.

ಕೂಡ್ಲಿಗಿ-ಕೊಟ್ಟೂರು ರಸ್ತೆಯಲ್ಲಿ ಗಜಾಪುರದಿಂದ ಕೂಡ್ಲಿಗಿವರೆಗೆ 9 ಕಿ.ಮೀ. ರಸ್ತೆಗೆ ಎಲ್ಲೆಲ್ಲಿ ರಸ್ತೆ ಹದಗೆಟ್ಟಿತ್ತೋ ಅಲ್ಲಲ್ಲಿ ನಮ್ಮ ಇಲಾಖೆಯಿಂದ ದುರಸ್ತಿ ಕಾರ್ಯ ಮಾಡಿದ್ದೇವೆ. ಗಜಾಪುರದಿಂದ ಕೊಟ್ಟೂರುವರೆಗೆ 10 ಕಿ.ಮೀ. ರಸ್ತೆ ಈ ಬಾರಿ ಹೆದ್ದಾರಿಯ ಚಿತ್ರದುರ್ಗ ವಿಭಾಗದ ಅಧಿಕಾರಿಗಳು ದುರಸ್ತಿಗೆ ತೆಗೆದುಕೊಂಡಿದ್ದಾರೆ ಎನ್ನುತ್ತಾರೆ ಕೂಡ್ಲಿಗಿ ಲೋಕೋಪಯೋಗಿ ಇಲಾಖೆಯ ಎಇಇ ನಾಗನಗೌಡ.