ಅಯ್ಯಪ್ಪಸ್ವಾಮಿ ದೇಗುಲ ಜಾಗ ತೆರವುಗೊಳಿಸಲು ಬಿಡಲ್ಲ

| Published : Feb 21 2024, 02:02 AM IST

ಸಾರಾಂಶ

ತಿಪಟೂರು ನಗರದ ಶ್ರೀ ಕಲ್ಲೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ಇರುವ ಸ್ಥಳ ಹಾಗೂ ದೇವಸ್ಥಾನವನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಲು ಬಿಡುವುದಿಲ್ಲ.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಶ್ರೀ ಕಲ್ಲೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ಇರುವ ಸ್ಥಳ ಹಾಗೂ ದೇವಸ್ಥಾನವನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಲು ಬಿಡುವುದಿಲ್ಲ ಎಂದು ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಟ್ರಸ್ಟ್‌ನ ಪದಾಧಿಕಾರಿಗಳು, ನೂರಾರು ಸಂಖ್ಯೆಯಲ್ಲಿ ಭಕ್ತರು ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯನ್ನು ಮಾಡಬೇಡಿ ಎಂದು ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್‌ ಪ್ರತಿಭಟನಾ ಮೆರವಣಿಗೆ ಹೊರಟಿದ್ದ ಸ್ಥಳಕ್ಕೆ ಖುದ್ದು ಬಂದು ಮನವಿ ಮಾಡಿದ ಘಟನೆ ಮಂಗಳವಾರ ನಗರದಲ್ಲಿ ನಡೆಯಿತು.

ಈ ವೇಳೆ ಮಾತನಾಡಿದ ದೇವಸ್ಥಾನ ಟ್ರಸ್ಟ್‌ನ ಮಹಾಪೋಷಕ ಲೋಕೇಶ್ವರ ಮಾತನಾಡಿ, ಕಳೆದ ೬೦ವರ್ಷಗಳಿಂದಲೂ ಇಲ್ಲಿ ಅಯ್ಯಪ್ಪಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಮತ್ತು ಮಂಡಲ ವ್ರತಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಈ ಜಾಗ ಮುಜುರಾಯಿ ಇಲಾಖೆಗೆ ಸೇರಿದ್ದು, ಇಲ್ಲಿರುವ ನಾಲ್ಕು ಗುಂಟೆ ಜಮೀನಿನಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನವನ್ನು ಶೆಡ್‌ನಲ್ಲಿ ನಿರ್ಮಿಸಲಾಗಿದೆ. ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಅಯ್ಯಪ್ಪ ಭಕ್ತರು ಮಾಲೆ ಧರಿಸಿ ಪೂಜೆಯಲ್ಲಿ ಭಾಗವಹಿಸುತ್ತಾರೆ. ಅಯ್ಯಪ್ಪಸ್ವಾಮಿ ದೇವಸ್ಥಾನದ ಜಾಗದಲ್ಲಿ ಶಾಸಕರಾದ ಕೆ. ಷಡಕ್ಷರಿ ಹಾಗೂ ಸರ್ಕಾರದ ಕೆಲವು ಅಧಿಕಾರಿಗಳು ಸಮುದಾಯ ಭವನ ನಿರ್ಮಿಸುತ್ತೇವೆ ಎಂದು ಖಾಲಿ ಮಾಡಿಸುವ ಪ್ರಯತ್ನಕ್ಕೆ ಮಾಡುತ್ತಿದ್ದು, ಕೆಲವು ಎಂಜಿನಿಯರ್‌ಗಳು ಹಾಗೂ ಸರ್ವೆಯರ್‌ಗಳು ಈ ವಿಚಾರವನ್ನು ತಿಳಿಸಿರುತ್ತಾರೆ ಎಂದರು.

ಇದರಿಂದ ದಿಗಿಲುಗೊಂಡ ಭಕ್ತರು ಶಾಸಕರನ್ನು ಭೇಟಿ ಮಾಡಿ ವಿಚಾರಿಸಿದಾಗ ಭಕ್ತರ ಭಾವನೆಗೆ ಸ್ಪಂದಿಸದ ಶಾಸಕರು ಬೇರೆ ಜಾಗ ನೋಡಿಕೊಳ್ಳಿ ಎಂಬ ಉಡಾಫೆ ಮಾತು ಅವರ ಆತಂಕಕ್ಕೆ ಕಾರಣವಾಗಿದೆ. ಶಾಸಕರ ಹಾಗೂ ಸರ್ಕಾರದ ವಿವೇಚನೆ ಇಲ್ಲದ ಈ ತೀರ್ಮಾನವನ್ನು ನಾವು ಖಂಡಿಸುತ್ತೇವೆ. ಯಾವ ಕಾರಣಕ್ಕೂ ಸಮುದಾಯ ಭವನ ಕಟ್ಟಲು ಬಿಡುವುದಿಲ್ಲ. ಭಕ್ತರು ಯಾವ ಹೋರಟಕ್ಕೂ ಸಿದ್ದರಾಗಿದ್ದು, ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಜವಾಬ್ದಾರಿ. ಆದ್ದರಿಂದ ಅಯ್ಯಪ್ಪಸ್ವಾಮಿ ಜಾಗವನ್ನು ತೆರವುಗೊಳಿಸದಂತೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮೆರವಣಿಗೆ ನಡೆಸಲು ಸಿದ್ದರಾಗುತ್ತಿದ್ದಂತೆ ಸ್ಥಳಕ್ಕೆ ಉಪವಿಭಾಗಾಧಿಕಾರಿ ಸಪ್ತಾಶ್ರೀ ಹಾಗೂ ತಹಸೀಲ್ದಾರ್‌ ಪವನ್‌ಕುಮಾರ್‌ ಭೇಟಿ ನೀಡಿ ಮೆರವಣಿಗೆ ನಡೆಯದಂತೆ ಮನವಿ ಮಾಡಿಕೊಂಡರು. ಭಕ್ತರು ಪಟ್ಟುಹಿಡಿದು ಮೆರವಣಿಗೆ ನಡೆಸಲು ಪ್ರಯತ್ನಿಸಿದರು. ಆಗ ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರ್ ಮಾತನಾಡಿ ನಮಗೆ ನಿಜವಾದ ವಿಚಾರ ತಿಳಿದಿರಲಿಲ್ಲ. ಭಕ್ತರ ಆಶಯ ಏನೆಂಬುದು ತಿಳಿದಿದ್ದು ಈ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇವೆಂದು ಭರವಸೆ ನೀಡಿ ಯಾವುದೇ ರೀತಿ ಹೋರಾಟ ಮಾಡದಂತೆ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಎಪಿಎಂಸಿ ಮಾಜಿ ನಿರ್ದೇಶಕ ಬಸವರಾಜು, ಅಯ್ಯಪ್ಪಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ನಾರಾಯಣಮೂರ್ತಿ, ವೆಂಕಟಾಲಪತಿ, ಡಾಬಾ ಶಿವಶಂಕರ್‌, ನಗರಸಭೆ ಸದಸ್ಯರಾದ ಸೊಪ್ಪುಗಣೇಶ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಅಯ್ಯಪ್ಪಸ್ವಾಮಿ ಭಕ್ತರು, ಸೇವಾಕರ್ತರು, ಟ್ರಸ್ಟ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು.ಫೋಟೋ

ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ದೇವಸ್ಥಾನ ಟ್ರಸ್ಟ್‌ನ ಮಹಾಪೋಷಕ ಲೋಕೇಶ್ವರ ಹಾಗೂ ಭಕ್ತರು.