ತಾಲೂಕು ಮಟ್ಟದಲ್ಲೂ ಹಿರಿಯ ನಾಗರಿಕ ಸಮಿತಿ ರಚಿಸಿ ಸರ್ಕಾರ ಅನುದಾನ ನೀಡಲಿ: ಬಿ.ಕೆ.ಜಾನಕಿ ರಾಮ್ ಆಗ್ರಹ

| Published : Nov 10 2025, 12:45 AM IST

ಸಾರಾಂಶ

ನರಸಿಂಹರಾಜಪುರ ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರ ಹಿರಿಯ ನಾಗರಿಕರ ಸಮಿತಿ ಹುಟ್ಟು ಹಾಕಿ ಪ್ರತಿ ವರ್ಷ ಸಮಿತಿಗೆ ₹12 ಲಕ್ಷ ಅನುದಾನ ನೀಡುತ್ತಿರುವಂತೆಯೇ ತಾಲೂಕು ಕೇಂದ್ರಗಳಲ್ಲೂ ಹಿರಿಯ ನಾಗರಿಕ ಸಮಿತಿ ರಚನೆ ಮಾಡುವಂತೆ ತಾಲೂಕು ಹಿರಿಯ ನಾಗರಿಕ ಸಮಿತಿ ನಿಕಟಪೂರ್ವ ಅಧ್ಯಕ್ಷ ಬಿ.ಕೆ.ಜಾನಕಿ ರಾಮ್ ಸರ್ಕಾರವನ್ನು ಆಗ್ರಹಿಸಿದರು.

- ತಾಲೂಕು ನಾಗರಿಕ ಸಮಿತಿ 2024-25 ನೇ ಸಾಲಿನ ಸರ್ವಸದಸ್ಯರ ಸಭೆ । 75 ವರ್ಷ ತುಂಬಿದ 23 ಹಿರಿಯ ನಾಗರಿಕರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರ ಹಿರಿಯ ನಾಗರಿಕರ ಸಮಿತಿ ಹುಟ್ಟು ಹಾಕಿ ಪ್ರತಿ ವರ್ಷ ಸಮಿತಿಗೆ ₹12 ಲಕ್ಷ ಅನುದಾನ ನೀಡುತ್ತಿರುವಂತೆಯೇ ತಾಲೂಕು ಕೇಂದ್ರಗಳಲ್ಲೂ ಹಿರಿಯ ನಾಗರಿಕ ಸಮಿತಿ ರಚನೆ ಮಾಡುವಂತೆ ತಾಲೂಕು ಹಿರಿಯ ನಾಗರಿಕ ಸಮಿತಿ ನಿಕಟಪೂರ್ವ ಅಧ್ಯಕ್ಷ ಬಿ.ಕೆ.ಜಾನಕಿ ರಾಮ್ ಸರ್ಕಾರವನ್ನು ಆಗ್ರಹಿಸಿದರು.

ಶನಿವಾರ ಸಿಂಸೆ ಕನ್ಯಾಕುಮಾರಿ ಕಂಫರ್ಟ್ ಹಾಲ್ ನಲ್ಲಿ ತಾಲೂಕು ನಾಗರಿಕ ಸಮಿತಿ 2024-25 ನೇ ಸಾಲಿನ ಸರ್ವಸದಸ್ಯರ ಸಭೆ ಹಾಗೂ 75 ವರ್ಷ ತುಂಬಿದ 23 ಹಿರಿಯ ನಾಗರಿಕರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಈಗಾಗಲೇ ರಾಜ್ಯದ 14 ಜಿಲ್ಲೆಗಳ ಜಿಲ್ಲಾ ಕೇಂದ್ರದಲ್ಲಿ ರಾಜ್ಯ ಸರ್ಕಾರದ ಹಿರಿಯ ನಾಗರಿಕ ಸಮಿತಿ ಇದೆ. ಈ ಸಮಿತಿಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರು ಕಾರ್ಯದರ್ಶಿಗಳಾಗಿದ್ದಾರೆ. ಆ ಸಮಿತಿಗೆ ಪ್ರತಿ ವರ್ಷ ಸರ್ಕಾರ ₹12 ಲಕ್ಷ ಅನುದಾನ ನೀಡುತ್ತಿದೆ. ಆ ಹಿರಿಯ ನಾಗರಿಕ ಸಮಿತಿಯಲ್ಲಿ ಹಿರಿಯರ ಆರೋಗ್ಯ, ಆಟೋಟ, ಚಟು ವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಡಿ ಹಿರಿಯ ನಾಗರಿಕ ಸಮಿತಿ ಬರಲಿದೆ. ಇದೇ ರೀತಿ ಪ್ರತಿ ತಾಲೂಕಿನಲ್ಲೂ ಸರ್ಕಾರವೇ ಹಿರಿಯ ನಾಗರಿಕ ಸಮಿತಿ ರಚನೆ ಮಾಡಿ ಹಿರಿಯರ ಕಲ್ಯಾಣ ಕ್ಕಾಗಿ ಅನುದಾನ ನೀಡ ಬೇಕು. ಸಮಿತಿಗೆ ತಹಸೀಲ್ದಾರ್, ಪೊಲೀಸ್ ಇನ್ಸ್ ಪೆಕ್ಟರ್ ನೇಮಕ ಮಾಡಿಕೊಳ್ಳಬಹುದು.ಈ ಹಿಂದೆ ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿದ್ದಾಗ ತಾಲೂಕು ಹಿರಿಯ ನಾಗರಿಕ ಸಮಿತಿಯಿಂದ ಪತ್ರ ಬರೆಯಲಾಗಿತ್ತು ಎಂದರು.

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ನಮ್ಮ ತಾಲೂಕು ಸಮಿತಿ ಸದಸ್ಯರಾಗಿದ್ದಾರೆ. ಅ‍ವರ ಮೂಲಕ ಮತ್ತೆ ಸರ್ಕಾರಕ್ಕೆ ಮನವಿ ಸಲ್ಲಿಸಿ ತಾಲೂಕು ಹಿರಿಯ ನಾಗರಿಕ ಸಮಿತಿ ರಚಿಸುವಂತೆ ಒತ್ತಾಯಿಸ ಲಾಗುವುದು ಎಂದರು.

ತಾಲೂಕು ಹಿರಿಯ ನಾಗರಿಕ ಸಮಿತಿ ಉಪಾಧ್ಯಕ್ಷ ಪಿ.ಕೆ.ಬಸವರಾಜ್ ಮಾತನಾಡಿ, 2008ರಲ್ಲಿ ತಾಲೂಕು ಹಿರಿಯ ನಾಗರಿಕ ಸಮಿತಿ ರಚನೆಯಾಗಿದೆ. ಸುಬ್ಬಣ್ಣ ನಾಡಿಗ್ ಪ್ರಥಮ ಸಾಲಿನಲ್ಲಿ ಅಧ್ಯಕ್ಷರಾಗಿ, ಎಂ.ಪಿ.ಚಕ್ರಪಾಣಿ ಕಾರ್ಯದರ್ಶಿ ಯಾಗಿ ಕೆಲಸ ಮಾಡಿದ್ದರು. 75 ತುಂಬಿದ ಹಿರಿಯರು ಮನೆಯಲ್ಲೇ ಕುಳಿತರೆ ಆರೋಗ್ಯ ಮತ್ತಷ್ಟು ಹಾಳಾಗುತ್ತದೆ. ಹಿರಿಯರು ಸದಾ ಚಟುವಟಿಕೆಯಲ್ಲಿ ಇರಬೇಕು ಎಂದು ತಾಲೂಕು ಹಿರಿಯ ನಾಗರಿಕ ಸಮಿತಿ ರಚನೆ ಮಾಡಲಾಗಿದೆ. ಇಂದು 75 ತುಂಬಿದ 23 ಜನ ಹಿರಿಯರನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ತಾಲೂಕು ಹಿರಿಯ ನಾಗರಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ಪಿ.ಎಸ್.ವಿದ್ಯಾನಂದಕುಮಾರ್ ಮಾತನಾಡಿ, ಪ್ರಸ್ತುತ ನಮ್ಮ ತಾಲೂಕು ನಾಗರಿಕ ಸಮಿತಿಯಲ್ಲಿ 140 ಸದಸ್ಯರಿದ್ದಾರೆ. ಮುಂದೆ ಹೊಸದಾಗಿ ಸದಸ್ಯರನ್ನು ಸೇರಿಸಲಾಗುತ್ತಿದ್ದು ಕನಿಷ್ಟ 250 ಸದಸ್ಯರು ಇರಬೇಕು ಎಂಬ ಆಶಯ ಹೊಂದಿದ್ದೇವೆ. ನಮ್ಮ ಸಮಿತಿಗೆ ಸ್ವಂತ ಕಟ್ಟಡದ ಅಗತ್ಯವಿದೆ. ಗ್ರಾಮೀಣ ಭಾಗದಿಂದ ಬಂದ ಹಿರಿಯರಿಗೆ ಕುಳಿತುಕೊಳ್ಳಲು ಕಚೇರಿ ಅಗತ್ಯವಾಗಿದೆ. ನಮ್ಮ ಸಮಿತಿಯಿಂದ ಹಿರಿಯರಿಗೆ ಆರೋಗ್ಯ ತಪಾಸಣೆ, ಸಂತೋಷ ಕೂಟ ನಡೆಸುತ್ತೇವೆ ಎಂದರು.

ಸಭೆಯಲ್ಲಿ ಹಿರಿಯ ನಾಗರಿಕ ಸಮಿತಿ ನಿಕಟಪೂರ್ವ ಕಾರ್ಯದರ್ಶಿ ಎಂ.ಪಿ.ಚಕ್ರಪಾಣಿ, ಜಂಟಿ ಕಾರ್ಯದರ್ಶಿ ಕುಮಾರ್ ಜಿ ಶೆಟ್ಟಿ, ಖಜಾಂಚಿ ಕೆ.ಎಸ್.ರಾಜಕುಮಾರ್ ಇದ್ದರು. ಕುಮಾರ ಜಿ.ಶೆಟ್ಟಿ ವರದಿ ವಾಚಿಸಿದರು. ವಿ.ಎಸ್.ವಿದ್ಯಾನಂದಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ 75 ವರ್ಷ ತುಂಬಿದ 23 ಹಿರಿಯರನ್ನು ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಎಸ್‌.ಎಸ್.ಶಾಂತಕುಮಾರ್‌, ಡಿ.ಸಿ.ದಿವಾಕರ ಮಾತನಾಡಿದರು.

ಸನ್ಮಾನಿತರು: ಡಿ.ಸಿ.ದಿವಾಕರ, ಎನ್‌.ಎಂ.ಮರುಳಪ್ಪ, ಎಸ್.ಎಸ್.ಶಾಂತಕುಮಾರ್,ಎಂ.ಪಿ.ಚಕ್ರಪಾಣಿ, ಎನ್‌.ಎಸ್.ತಿಮ್ಮಪ್ಪಯ್ಯ, ಎಂ.ಕೆ.ದಯಾನಂದ, ಎಚ್‌.ಎಸ್.ಕೃಷ್ಣಮೂರ್ತಿ, ಟಿ.ವಿ.ಜೋನ್, ಎಚ್‌.ಎಸ್.ಹಿರಿಯಣ್ಣ, ಮಾಳೂರು ದಿಣ್ಣೆ ವಿನಾಯಕ, ಬಿ.ಕೆ.ಉದಯಕರ, ಡಾ.ಎಚ್.ಎಸ್.ಸತೀಶ್, ಜಿ.ಎಚ್.ರಮೇಶ್, ಸೂರ್ಯನಾರಾಯಣರಾವ್, ಎ.ಎನ್.ರವೀಂದ್ರ, ಕೆ.ಡಿ.ಕೃಷ್ಣಪ್ಪಗೌಡ, ಎಚ್.ಎಸ್.ಜಯರಾಂ, ಎಂ.ಕೆ.ಜಗದೀಶ್, ಅಬ್ದುಲ್ ಬಶೀರ್, ಎನ್.ಕೆ.ನಾಗಭೂಷಣ, ಧರ್ಮರಾಜ್, ಎ.ನಾರಾಯಣ ಪೂಜಾರಿ