ಸಾರಾಂಶ
ಸಂಪನ್ಮೂಲ ವ್ಯಕ್ತಿಗಳಾದ ಕಾಲೇಜಿನ ಶೈಕ್ಷಣಿಕ ಸಲಹೆಗಾರ ಡಾ. ಪ್ರಸಾದ್ ರಾವ್ ಎಂ. ವಿಶೇಷ ಉಪನ್ಯಾಸ ನೀಡಿ, ಅಂಬೇಡ್ಕರ್ ಅವರ ಬದುಕು, ಚಿಂತನಾ ಕ್ರಮ, ಅವರ ಸಾಧನೆಗಳ ಕುರಿತು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸೋಮವಾರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜಯಂತಿ ಆಚರಿಸಲಾಯಿತು.ಸಂಪನ್ಮೂಲ ವ್ಯಕ್ತಿಗಳಾದ ಕಾಲೇಜಿನ ಶೈಕ್ಷಣಿಕ ಸಲಹೆಗಾರ ಡಾ. ಪ್ರಸಾದ್ ರಾವ್ ಎಂ. ವಿಶೇಷ ಉಪನ್ಯಾಸ ನೀಡಿ, ಅಂಬೇಡ್ಕರ್ ಅವರ ಬದುಕು, ಚಿಂತನಾ ಕ್ರಮ, ಅವರ ಸಾಧನೆಗಳ ಕುರಿತು ಮಾತನಾಡಿದರು.
ಅಂಬೇಡ್ಕರ್ ಅವರು ವಿವಿಧ ಕ್ಷೇತ್ರಗಳಲ್ಲಿ ಆಳವಾದ ಅಧ್ಯಯನ ನಡೆಸುವುದರೊಂದಿಗೆ ಅನೇಕ ಮಹ್ವತದ ಕೃತಿಗಳನ್ನು ನೀಡಿರುವರು. ಸಂವಿಧಾನ ರೂಪಿಸುವಲ್ಲಿ ಅವರು ತೋರಿದ ಶ್ರದ್ಧೆ, ಮಾನವ ಪ್ರೀತಿ ಅನನ್ಯವಾದುದು. ಜಗತ್ತಿನ ಇತರ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಆ ಮೂಲಕ ಭಾರತದ ಸಂವಿಧಾನವನ್ನು ಜಗತ್ತಿನ ಶ್ರೇಷ್ಠ ಸಂವಿಧಾನವನ್ನಾಗಿ ರೂಪಿಸಲು ಅಪಾರ ಪರಿಶ್ರಮಪಟ್ಟ ಬಗೆಯನ್ನು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್ ರೈ ಕೆ. ಪ್ತಾಸ್ತಾವಿಕ ನುಡಿಯೊಂದಿಗೆ ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ. ಮೇವಿ ಮಿರಾಂದ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ರಾಘವ ನಾಯ್ಕ ಹಾಗೂ ಕಾಲೇಜಿನ ಗ್ರಂಥಪಾಲಕ ಶ್ರೀಕೃಷ್ಣ ಸಾಸ್ತಾನ ಉಪಸ್ಥಿತರಿದ್ದರು. ಇತಿಹಾಸ ವಿಭಾಗದ ವಿದ್ಯಾರ್ಥಿನಿ ನಿಶಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.