ಒಳ್ಳೆಯ ಸಂವಿಧಾನ ಇದ್ದರೂ, ಅನುಷ್ಠಾನಕ ಕೆಟ್ಟವನಾಗಿದ್ದಾನೆ

| Published : Jan 19 2025, 02:18 AM IST

ಒಳ್ಳೆಯ ಸಂವಿಧಾನ ಇದ್ದರೂ, ಅನುಷ್ಠಾನಕ ಕೆಟ್ಟವನಾಗಿದ್ದಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ನ್ಯಾಯದ ಸ್ಥಾಪನೆಗೆ ಸಂವಿಧಾನವಿದೆ. ಸಂವಿಧಾನ ಆಶಯ ಅನುಷ್ಠಾನಗೊಂಡಿರುವ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರುದೇಶದಲ್ಲಿ ಎಷ್ಟೇ ಒಳ್ಳೆಯ ಸಂವಿಧಾನ ಇದ್ದರೂ ಅನುಷ್ಠಾನ ಮಾಡುವವನು ಕೆಟ್ಟವನಾದರೆ ಅದರಿಂದ ಸಮಾಜಕ್ಕೆ ಕೆಟ್ಟದ್ದಾಗಲಿದೆ. ಈಗ ದೇಶದಲ್ಲಿ ಅದೇ ಪರಿಸ್ಥಿತಿ ಇದೆ ಎಂದು ಹಿರಿಯ ಪತ್ರಕರ್ತ ದಿನೇಶ್ಅಮೀನ್ಮಟ್ಟು ಕಿಡಿ ಕಾರಿದರು.ನಗರದ ರಂಗಾಯಣ ಅವರಣದ ಬಿ.ವಿ. ಕಾರಂತ ರಂಗಚಾವಡಿ ಮಂದಿರದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಶನಿವಾರ ನಡೆದ ‘ಸಾಮಾಜಿಕ ನ್ಯಾಯ-ಚಳವಳಿಗಳು ಮತ್ತು ರಂಗಭೂಮಿ ರಾಷ್ಟ್ರೀಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಾಮಾಜಿಕ ನ್ಯಾಯದ ಸ್ಥಾಪನೆಗೆ ಸಂವಿಧಾನವಿದೆ. ಸಂವಿಧಾನ ಆಶಯ ಅನುಷ್ಠಾನಗೊಂಡಿರುವ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಬೇಕು. ಆದರೆ, ಇದನ್ನು ಸಂಸತ್ತು ಮಾಡಬೇಕು. ಆದರೆ, ಸಂಸತ್ತಿನಲ್ಲಿ 256 ಮಂದಿ ಕ್ರಿಮಿನಲ್ ಸಂಸದರಿದ್ದಾರೆ. ಇವರೆಲ್ಲರೂ ಜಾಮೀನಿನ ಮೇಲೆ ಸಂಸತ್ತಿನಲ್ಲಿದ್ದಾರೆ. ಇಂತಹ ಕ್ರಿಮಿನಲ್ ಗಳನ್ನು ಸಂಸತ್ತಿನೊಳಗೆ ಬಿಟ್ಟು ಸಾಮಾಜಿಕ ನ್ಯಾಯ ಅನುಷ್ಠಾನಗೊಳ್ಳಬೇಕು ಎಂದರೆ ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದರು.ಆರ್ಥಿಕ, ಸಾಮಾಜಿಕ ಸಮಾನತೆ ಸಾಧಿಸದೆ ರಾಜಕೀಯ ಸ್ವಾತಂತ್ರ್ಯ ಪಡೆದರೆ ಪ್ರಜಾಪ್ರಭುತ್ವ ವಿಫಲವಾಗಲಿದೆ. ಅತೃಪ್ತ ಜನರು ರೊಚ್ಚಿಗೆದ್ದು ಪ್ರಜಾಪ್ರಭುತ್ವದ ಸೌಧವನ್ನು ಕೆಡವಿ ಹಾಕುತ್ತಾರೆ. ಜನಸಂಖ್ಯೆಗೆ ಅನುಗುಣವಾದ ಮೀಸಲಾತಿ ಮತ್ತು ಭೂ ಸುಧಾರಣೆ ಜಾರಿಯಾಗದ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವುದು ಸೂಕ್ತ ಎನಿಸದು ಎಂದರು.ದೇಶದಲ್ಲಿ ಪ್ರತಿ 16 ನಿಮಿಷಕ್ಕೆ ಒಮ್ಮೆ ದಲಿತ ಮೇಲೆ ದೌರ್ಜನ್ಯ, ನಿತ್ಯ 4 ದಲಿತ ಮಹಿಳೆಯರ ಮೇಲೆ ಸವರ್ಣಿಯರ ಅತ್ಯಾಚಾರ, 12 ದಲಿತರ ಕೊಲೆ ಆಗುತ್ತಿದೆ. ಇದು ಗಮನಕ್ಕೆ ಬರುತ್ತಿರುವ ಘಟನೆಗಳಷ್ಟೇ. ರಾಜ್ಯದ ಶೇ. 70 ದಲಿತರ ಬಳಿ ಭೂಮಿ ಇಲ್ಲ. ದಲಿತರಿಗೆ ಶೇ. 24ರಷ್ಟು ಮೀಸಲಾತಿ ದೊರೆತಿಲ್ಲ. ಮೀಸಲಾತಿ ಮತ್ತು ಭೂ ಸುಧಾರಣೆಯ ಗಂಭೀರ ವಿಚಾರದ ಬಗ್ಗೆ ಪಿಎಚ್.ಡಿಗಳು ಆಗಬೇಕು ಎಂದು ಅವರು ಹೇಳಿದರು.ಆಮೆರಿಕಾ, ಚೀನಾ ಬಿಟ್ಟರೆ ಇಡೀ ಪ್ರಪಂಚದಲ್ಲಿ ಹೆಚ್ಚು ಶತ ಕೋಟ್ಯಾಧೀಶರು ಇರುವುದು ಭಾರತದಲ್ಲಿ. ಕಳೆದ ವರ್ಷ 102 ಮಂದಿ ಇದ್ದ ಬಿಲಿನೆಯರ್ಸ್ಇಂದು 145 ಮಂದಿಯಾಗಿದ್ದಾರೆ. ಇಂತಹ ಪರಿಸ್ಥಿತಿ ಯಾವ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಬೇಕು? ಎಂದು ಅವರು ಪ್ರಶ್ನಿಸಿದರು.ಅಪ್ರಾಪ್ತ ಹುಡುಗಿಯ ಮೇಲೆ 80 ವರ್ಷದ ಹಿರಿಯ ರಾಜಕಾರಣಿ ಲೈಂಗಿಕ ದೌರ್ಜನ್ಯ ನಡೆಸುತ್ತಾನೆ. ಆತನ ಮೇಲೆ ಜಾಮೀನು ರಹಿತ ಪೋಕ್ಸೋ ಪ್ರಕರಣವಿದೆ. ಜೈಲಿನಲ್ಲಿ ಇರಬೇಕಿತ್ತು. ಆದರೆ, ಜಾಮೀನಿನ ಮೇಲೆ ಹೊರಗಡೆ ಇದ್ದಾನೆ. ಇದು ನ್ಯಾಯಾಂಗ ನಡೆದುಕೊಳ್ಳುತ್ತಿರುವ ರೀತಿ ಎಂದು ಅವರು ಟೀಕಿಸಿದರು.ಮೀಸಲಾತಿಯ ಬಗ್ಗೆ ಇಂದು ಬಹಳಷ್ಟು ಚರ್ಚೆ ಆಗುತ್ತಿದೆ. ಆದರೆ ಶೇ. 2ರಷ್ಟು ಮಾತ್ರ ಸರ್ಕಾರದ ಉದ್ಯೋಗಗಳಿವೆ. ಶೇ. 98ರಷ್ಟು ಖಾಸಗಿ ಕ್ಷೇತ್ರದಲ್ಲಿ ಇದೆ. ಈ ಬಗ್ಗೆ ಯಾರು ಮಾತನಾಡುತ್ತಿಲ್ಲ. ಹೀಗಾಗಿ ಖಾಸಗಿ ವಲಯವನ್ನು ರಾಷ್ಟ್ರೀಕರಣಗೊಳಿಸಬೇಕು. ಕೃಷಿ ಪದಾರ್ಥಗಳನ್ನು ಸರ್ಕಾರವೇ ಖರೀದಿಸಿ ಮಾರಾಟ ಮಾಡಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಭೂಮಿ ಹಂಚಿಕೆ ಮಾಡಬೇಕು ಎಂದು ಅವರು ಮನವಿ ಮಾಡಿದರು.ಪ್ರಜಾಪ್ರಭುತ್ವದ ಆಶಯ ಅನುಷ್ಠಾನ ಮತ್ತು ಜನತೆಯ ಹೋರಾಟದ ವಿಷಯ ಕುರಿತು ಅಖಿಲ ಭಾರತ ಜನವಾದಿ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್. ವಿಮಲಾ ಮಾತನಾಡಿ, ಜನ ಪ್ರತಿನಿಧಿಗಳು ಒಂದು ಜಾತಿ, ಧರ್ಮ, ವರ್ಗದ ಪ್ರತಿನಿಧಿಗಳಾಗಿದ್ದಾರೆ. ಸಂವಿಧಾನದ ಆಶಯಗಳು ಅಸ್ಥಿರಗೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಉಳಿಸಿಕೊಂಡು ಮುಂದಿನ ತಲೆಮಾರಿಗೆ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಸಮಾಜವನ್ನು ಬಹುತ್ವದ ನೆಲೆಯಲ್ಲಿ ಕಟ್ಟಿಕೊಡುವ ರಂಗಭೂಮಿ ಮೇಲೆ ಇದೆ ಎಂದರು.ಶೈಕ್ಷಣಿಕ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದ ಚಾರಿತ್ರಿಕ ನಡೆ ವಿಷಯದ ಕುರಿತು ಶ್ರೀಪಾದಭಟ್ ಮಾತನಾಡಿ, ಶಿಕ್ಷಣ ಎಂಬುದು ಸಾಮಾಜಿಕ ನ್ಯಾಯ. ಆದರೆ ನೂತನ ಶಿಕ್ಷಣ ಪದ್ಧತಿ ಎನ್.ಇ.ಪಿಯಲ್ಲಿ ಸಾಮಾಜಿಕ ನ್ಯಾಯ ರೂಪಿಸಿಲ್ಲ. ಶಿಕ್ಷಣ ಸಾರ್ವತ್ರಿಕರಣ ಆಗಿಲ್ಲ. ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು. ಬ್ರಾಹ್ಮಣರು ಅಕ್ಷರವನ್ನು ಹಿಡಿದಿಟ್ಟುಕೊಂಡು ಪ್ರಕ್ಷುಬ್ಧ ಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.