ಸಾರಾಂಶ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶಹಾಪುರ ನಗರಕ್ಕೆ ಮೊದಲ ಬಾರಿಗೆ ಆಗಮಿಸುತ್ತಿರುವ ಹಿನ್ನೆಲೆ ಅವರನ್ನು ಸ್ವಾಗತಿಸಲು ಹಾಗೂ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ನಿಮಿತ್ತ ಭರ್ಜರಿ ಸಿದ್ಧತೆ ನಡೆದಿರುವುದು. ಶಹಾಪುರ ನಗರದಲ್ಲಿ ಬಿಜೆಪಿ ಭಾನುವಾರ ಪಕ್ಷದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಸ್ತೆಯುದ್ಧಕ್ಕೂ ಕೇಸರಿ ಧ್ವಜಗಳು, ಬ್ಯಾನರ್ ಗಳು ರಾರಾಜಿಸುತ್ತಿರುವದು.
ಕನ್ನಡಪ್ರಭ ವಾರ್ತೆ ಶಹಾಪುರ
ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಬಿ.ವೈ.ವಿಜಯೇಂದ್ರ ಅವರು ಮೊದಲ ಬಾರಿಗೆ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಅವರ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ನಗರದ ಪ್ರಮುಖ ಬೀದಿಯಲ್ಲಿ ದೊಡ್ಡ ದೊಡ್ಡ ಕಟೌಟ್ ಗಳು, ಧ್ವಜಗಳು, ಸ್ವಾಗತ ಕಮಾನುಗಳು ಹಾಗೂ ಕೇಸರಿ ಪರಾರಿಗಳು ನಗರದಲ್ಲಿ ರಾರಾಜಿಸುತ್ತಿವೆ.ನಗರದ ಪ್ರಮುಖ ಬೀದಿ ಕೇಸರಿಮಯವಾಗಿ ನೋಡುಗರನ್ನು ಆಕರ್ಷಿಸುತ್ತಿದೆ. ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಅಮೀನ್ ರೆಡ್ಡಿ ಯಾಳಗಿ ಅವರು ಸಹ ಯುವಕರಾಗಿದ್ದು, ಕೇಸರಿ ಪಡೆ ಯುವಕರಲ್ಲಿ ಉತ್ಸಾಹ ತುಂಬಿ ತುಳುಕುತ್ತಿದೆ.
ಮುಂಬರುವ ಲೋಕಸಭಾ ಚುನಾವಣೆ ದೃಷ್ಠಿಯಿಂದ ಪಕ್ಷ ಸಂಘಟನೆ ಮಾಡುವ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸುವ ಸಲುವಾಗಿ ಪ್ರವಾಸಕೈಗೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.ಕಾರ್ಯಕ್ರಮದ ವಿವರ:
ಬಿ.ವೈ.ವಿಜಯೇಂದ್ರರವರು ನಗರಕ್ಕೆ ಆಗಮಿಸಿ, ನೂತನ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಅಮೀನ್ ರೆಡ್ಡಿ ಯಾಳಗಿ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನಗರಕ್ಕೆ 3:30ಕ್ಕೆ ಆಗಮಿಸಲಿರುವ ಬಿಜೆಪಿ ರಾಜ್ಯಾಧ್ಯಕ್ಷರು ಪ್ರಥಮದಲ್ಲಿ ಬಿಜೆಪಿ ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡಿ 3:50ಗಂಟೆಗೆ ನಗರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ, 4:20 ಗಂಟೆಗೆ ಜಿಲ್ಲಾಧ್ಯಕ್ಷರ ಮನೆಯಲ್ಲಿ ಚಹಾಕೂಟ, 4:45ಗಂಟೆಗೆ ನಗರ ಮಾಹಾತ್ಮ ಬಸವೇಶ್ವರ ಪ್ರತಿಮೆಗೆ ಪುಷ್ಪಾರ್ಚನೆ. ನಂತರದಲ್ಲಿ 5 ಗಂಟೆಗೆ ಇಲ್ಲಿನ ಸಿಪಿಎಸ್, ಶಾಲಾ ಮೈಧಾನದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ವಿವಿಧ ಗಣ್ಯರು ಆಗಮನ:
ಕಾರ್ಯಕ್ರಮದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ರಾಜ್ಯ ಉಪಾಧ್ಯಕ್ಷರಾದ ರಾಜೀವ, ಮಾಜಿ ಸಚಿವ ರಾಜೂಗೌಡ, ಮಾಜಿ ಶಾಸಕ ವೆಂಕಟರೆಡ್ಡಿ ಮದ್ನಾಳ ಸೇರಿ ರಾಜ್ಯ ರಾಜಕೀಯ ಧುರೀಣರು, ಸಂಸದರು, ಬಿಜೆಪಿ ಮುಖಂಡರು ಆಗಮಿಸಲಿದ್ದಾರೆ.10 ಸಾವಿರ ಆಸನಗಳ ವ್ಯವಸ್ಥೆ:
ಸುಮಾರು 10 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇದಕ್ಕಿಂತಲೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ಮೂಲಗಳ ತಿಳಿಸಿವೆ.300ಕ್ಕೂ ಹೆಚ್ಚು ಸ್ಥಾನಗಳು ಗೆಲ್ಲುವ ಭರವಸೆ: ಯಾಳಗಿ
ಯುವಕರ ಕಣ್ಮಣಿ, ಧಣಿವರಿಯದ ಜನನಾಯಕ, ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಯವರ ಮುಂದಾಳತ್ವ ಮತ್ತು ಕಾರ್ಯತಂತ್ರದಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ 300ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ. ಕಾರ್ಯಕರ್ತರು ಹೆಚ್ಚು ಹುಮ್ಮಸ್ಸಿನಿಂದ ಪ್ರತಿ ಮನೆಗೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಿಕೊಡಬೇಕು. ಸಕ್ರಿಯವಾಗಿ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ ಯುವಶಕ್ತಿ ಪ್ರದರ್ಶನ ಮಾಡಲಿದ್ದಾರೆ ಎಂದು ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ ತಿಳಿಸಿದ್ದಾರೆ.ಈ ದೇಶದ ರಕ್ಷಣೆ, ಬಡತನ ನಿರ್ಮೂಲನೆ, ಉದ್ಯೋಗ ಯೋಜನೆಗಳಿಗಾಗಿ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಸ್ಪಷ್ಟ ಬಹುಮತದೊಂದಿಗೆ ಗೆಲ್ಲಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ.
ಅಮೀನ್ ರೆಡ್ಡಿ ಯಾಳಗಿ, ಬಿಜೆಪಿ ನೂತನ ಯಾದಗಿರಿ ಜಿಲ್ಲಾಧ್ಯಕ್ಷರು.