ಕಾಂಗ್ರೆಸ್‌ ಸರ್ಕಾರದಿಂದ ರೈತರಿಗೆ ಅಪಮಾನ

| Published : Dec 31 2023, 01:30 AM IST

ಸಾರಾಂಶ

ಭೀಕರ ಬರದಲ್ಲೂ ಐಷಾರಾಮಿ ವಿಮಾನದಲ್ಲಿ ಸಂಚರಿಸಿ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಏನೇ ತಿಪ್ಪರಲಾಗ ಹಾಕಿದರೂ ಬಿಜೆಪಿ ಗೆಲುವಿನ ನಾಗಾಲೋಟ ತಡೆಯಲು ಸಾಧ್ಯವಿಲ್ಲ. ರಾಜ್ಯದಲ್ಲೂ ಜೆಡಿಎಸ್, ಬಿಜೆಪಿ ಮೈತ್ರಿಕೂಟ ಲೋಕಸಭೆಯ 28 ಸ್ಥಾನಗಳಲ್ಲೂ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸದೇ, ರೈತರನ್ನೇ ನಿಂದಿಸುತ್ತಿದೆ. ಭೀಕರ ಬರದಲ್ಲೂ ಐಷಾರಾಮಿ ವಿಮಾನದಲ್ಲಿ ಸಂಚರಿಸಿ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದೇ ನಮ್ಮ ಗುರಿ. ಹೀಗಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯದ ನಾಯಕರು ಸೇರಿ ನನಗೆ ರಾಜ್ಯದಲ್ಲಿ ಪಕ್ಷ ಕಟ್ಟುವ ಜವಾಬ್ದಾರಿ ನೀಡಿದ್ದು, ಸಮರ್ಥವಾಗಿ ನಿಭಾಯಿಸಲು ನೀವು ಕೈಜೋಡಿಸಬೇಕು. ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇನೆ. ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ವಿಧಾನಸಭೆ ಚುನಾವಣೆ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದರು.ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದರೂ ಜನರ ನೆರವಿಗೆ ಧಾವಿಸದೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಸುಳ್ಳು ಹೇಳುವಲ್ಲಿ ನಿರತವಾಗಿದೆ. ಸಚಿವ ಶಿವಾನಂದ ಪಾಟೀಲ ರೈತರು ₹5 ಲಕ್ಷ ಪರಿಹಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಉದ್ಧಟತನದ ಮಾತಿನ ಮೂಲಕ ರೈತ ವಿರೋಧ ನಿಲುವು ತಾಳುತ್ತಿದ್ದಾರೆ ಎಂದು ಟೀಕಿಸಿದರು.

ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಹುಲಿ ಹೊಟ್ಟೆಯಲ್ಲಿ ಹುಲಿ ಹುಟ್ಟಿದೆ. ಮರಿ ಹುಲಿ ಈಗ ದೊಡ್ಡದಾಗಿದೆ. ಹಿರಿಯರು ಪಕ್ಷದಲ್ಲಿ ಯಾರಿಗೆ ಏನು ಹೇಳಬೇಕು ಹೇಳಿ ಆಗಿದೆ. ಇನ್ನು ಅನುಷ್ಟಾನಕ್ಕೆ ತರುವುದು ಮಾತ್ರ ಬಾಕಿ ಇದೆ. ಅಕ್ಕ ಸತ್ತರೆ ಅಮವಾಸೆ ನಿಲ್ಲದು. ನಿಮಗೆ ತಿಳಿದರ ಬೇಕು ಎಂದು ಪರೋಕ್ಷವಾಗಿ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎನ್ನುವ ಮಾತು ಇತ್ತು. ಈಗ ವಿಜಯೇಂದ್ರ ಗುಡುಗಿದರೆ ವಿಜಯಪುರ ಜಿಲ್ಲೆ ಸೇರಿ 31 ಜಿಲ್ಲೆಗಳು ನಡುಗುತ್ತವೆ. ಮುರುಗೇಶ ನಿರಾಣಿ ಕೇವಲ ಬಾಗಲಕೋಟೆಯವನಲ್ಲ, ನಾನು ಅಖಂಡ ವಿಜಯಪುರ ಜಿಲ್ಲೆಯವನು, ನಿಮ್ಮ ಕೆಲಸಗಳು ಏನೇ ಇದ್ದರು ಬನ್ನಿ, ನನ್ನದೆ ಕ್ಷೇತ್ರ ಎನ್ನುವಂತೆ ಮಾಡಿಕೊಡುವೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್.ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಎಸ್.ಕೆ.ಬೆಳ್ಳುಬ್ಬಿ, ರಮೇಶ ಭೂಸನೂರು, ಸೋಮನಗೌಡ ಪಾಟೀಲ, ಅರುಣ ಶಹಪುರ, ರುದ್ರಗೌಡ ಪಾಟೀಲ, ಬಸವರಾಜ ಬಿರಾದಾರ, ಶಿವರುದ್ರ ಬಾಗಲಕೋಟ, ಮಲ್ಲಮ್ಮ ಜೋಗೂರು ಸೇರಿದಂತೆ ಹಲವರು ಇದ್ದರು.

ವಿಜಯೇಂದ್ರಗೆ ಅದ್ಧೂರಿ ಸ್ವಾಗತಕಾರ್ಯಕ್ರಮದ ಮುಂಚೆ ಮೊದಲ ಬಾರಿಗೆ ವಿಜಯಪುರಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಕಾರ್ಯಕರ್ತರು ಜಯಘೋಷಗಳನ್ನು ಕೂಗುತ್ತಾ ಅದ್ಧೂರಿಯಾಗಿ ಸ್ವಾಗತಿಸಿದರು. ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಬೈಕ್ ರ್‍ಯಾಲಿ ನಡೆಸಿ, ಅದ್ದೂರಿಯಿಂದ ಸ್ವಾಗತಿಸಿದರು.