ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಪ್ರಜಾಪ್ರಭುತ್ವ ಗಟ್ಟಿಯಾಗಿದೆ

| Published : May 12 2025, 12:19 AM IST

ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಪ್ರಜಾಪ್ರಭುತ್ವ ಗಟ್ಟಿಯಾಗಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ಧರ್ಮ, ರೀತಿ ನೀತಿ, ಜಾತಿಗಳನ್ನು ಹೊಂದಿದ ಭಾರತವನ್ನು ಒಂದು ದೇಶವಾಗಿ ಒಗ್ಗೂಡಿಸುವುದು ಕಷ್ಟದಾಯಕ ಕಾರ್ಯ

ಕನ್ನಡಪ್ರಭ ವಾರ್ತೆ ನಂಜನಗೂಡು

ಭಾರತದೊಂದಿಗೆ ಸ್ವಾತಂತ್ರ್ಯ ಪಡೆದ 34 ದೇಶಗಳಲ್ಲಿ ಭಾರತ ಬಿಟ್ಟು ಮಿಕ್ಕೆಲ್ಲ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗಿದೆ. ಆದರೆ, ಅಂಬೇಡ್ಕರ್ ರಚಿಸಿದ ಬಲವಾದ ಸಂವಿಧಾನದಿಂದ ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪಟ್ಟಣದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಮಸಿತಿಯಿಂದ ಆಯೋಜಿಸಿದ್ದ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಹಲವು ಧರ್ಮ, ರೀತಿ ನೀತಿ, ಜಾತಿಗಳನ್ನು ಹೊಂದಿದ ಭಾರತವನ್ನು ಒಂದು ದೇಶವಾಗಿ ಒಗ್ಗೂಡಿಸುವುದು ಕಷ್ಟದಾಯಕ ಕಾರ್ಯ, ಭಾರತ ಪ್ರಜಾಪ್ರಭುತ್ವ ದೇಶವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಹಲವು ದೇಶಗಳು ಭವಿಷ್ಯ ನುಡಿದಿದ್ದವು, ಅಂಬೇಡ್ಕರ್ ನೀಡಿದ ಶೇಷ್ಠ ಸಂವಿಧಾನದ ಬಲದಿಂದ ದೇಶ ಸಧೃಡ ಭಾರತವಾಗಿ ಉಳಿದಿದೆ. ಅಲ್ಲದೆ ಸಂವಿಧಾನದಿಂದಾಗಿ ಶೋಷಿತರಿಗೆ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗಿದೆ ಎಂದರು.

ಇಂದಿನ ಯುವಕರು ಫೇಸ್ ಬುಕ್, ವಾಟ್ಸಾಪ್ ಯುನಿವರ್ಸಿಟಿಗಳಿಂದ ಹೊರಬಂದು ದೇಶದ ಇತಿಹಾಸ ತಿಳಿಯಬೇಕು. ಆಗ ಮಾತ್ರ ಸಂವಿಧಾನ ಏಕೆ ಪ್ರಾಮುಖ್ಯತೆ ಇದೆ ಎಂಬುದು ತಿಳಿಯಲಿದೆ. ಬಿಜೆಪಿ ಮತ್ತು ಆರ್.ಎಸ್.ಎಸ್ ನಾಯಕರು ತಮ್ಮ ಮಕ್ಕಳನ್ನು ವಿದೇಶದಲ್ಲಿ ವ್ಯಾಸಂಗಕ್ಕೆ ಕಳುಹಿಸಿ ಬಳಿಕ ಉದ್ಯಮಿಗಳನ್ನಾಗಿಸುತ್ತಿದ್ದಾರೆ, ಬಡವರ ಮಕ್ಕಳನ್ನು ಧರ್ಮ ಹಾಗೂ ಗೋ ರಕ್ಷಣೆ ಹೆಸರಿನಲ್ಲಿ ಬೀದಿಗೆ ತರುತ್ತಿದ್ದಾರೆ. ಬಡವರ ಮಕ್ಕಳಿಗಷ್ಟೇ ಕೇಸರಿ ಶಾಲು ಕೊಟ್ಟು ಹೋರಾಟಕ್ಕೆ ದೂಡುವ ಬಿಜೆಪಿಗರು, ತಮ್ಮ ಮಕ್ಕಳನ್ನು ಯಾವ ಹೋರಾಟಕ್ಕೆ ಕರೆ ತಂದಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಅಂಬೇಡ್ಕರ್ ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗುವುದನ್ನು ಆರ್.ಎಸ್.ಎಸ್. ಬೆಂಬಲಿಸಲಿಲ್ಲ, ಆರ್.ಎಸ್.ಎಸ್.ನ ಆರ್ಗನೈಜರ್ ಪತ್ರಿಕೆಯಲ್ಲಿ ನಾವು ಸಂವಿಧಾನವನ್ನು ಒಪ್ಪುವುದಿಲ್ಲ, ಮನು ಸ್ಮೃತಿ ಸಂವಿಧಾನವಾಗಬೇಕು ಎಂದು ಹೇಳಿತ್ತು. ಅಂಬೇಡ್ಕರ್ ಚುನಾವಣೆಯಲ್ಲಿ ತಾನು ಸೋಲಲು ಸಾವರ್ಕರ್ ಕಾರಣ ಎಂದು ಹೇಳಿದ್ದಾರೆ, ಇದು ನಾನು ಹೇಳಿದ್ದಲ್ಲ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಬೇಡ್ಕರ್ ಬರೆದ ಪತ್ರಗಳಲ್ಲಿ ಈ ವಿಚಾರವಿದೆ, ಪರಿಶೀಲಿಸಬಹುದು. ನಿಜ ಹೇಳಿದರೆ ಬಿಜೆಪಿಯವರು ನಮ್ಮ ಚಾರಿತ್ರ್ಯವಧೆಗೆ ಇಳಿಯುತ್ತಾರೆ ಎಂದು ಅವರು ಕಿಡಿಕಾರಿದರು.

ಇದೇ ವೇಳೆ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಭಾವಚಿತ್ರ ಮೆರವಣಿಗೆ

ಇದಕ್ಕೂ ಮುನ್ನ ಜೂನಿಯರ್ ಕಾಲೇಜು ಮೈದಾನದಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆಗೆ ಸಂಸದ ಸುನಿಲ್ ಬೋಸ್, ಶಾಸಕ ದರ್ಶನ್ ದ್ರುವನಾರಾಯಣ್ ಚಾಲನೆ ನೀಡಿದರು.

ಮೆರವಣಿಗೆಯು ವಿವಿಧ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನದ ಬಳಿ ಅಂತ್ಯಗೊಂಡಿತು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ದರ್ಶನ್ ಧ್ರುವನಾರಾಯಣ್, ಡಾ. ಯತೀಂದ್ರ ಸಿದ್ದರಾಮಯ್ಯ, ಎಚ್.ಎಂ. ಗಣೇಶ್ ಪ್ರಸಾದ್, ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಕೆ. ಮಾರುತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಕೆ.ಜಿ. ಮಹೇಶ್, ಸಿ.ಎಂ. ಶಂಕರ್, ಹಾಡ್ಯ ರಂಗಸ್ವಾಮಿ, ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ಉಪಾಧ್ಯಕ್ಷೆ ರಿಯಾನ ಬಾನು, ಸದಸ್ಯರಾದ ಎಸ್.ಪಿ. ಮಹೇಶ್, ಗಂಗಾಧರ್, ಮೀನಾಕ್ಷಿ, ವಿಜಯಲಕ್ಷ್ಮಿ, ಕೆ.ಎಂ. ಬಸವರಾಜು, ಜಿಪಂ ಮಾಜಿ ಸದಸ್ಯೆ ಲತಾ, ಎಸ್.ಸಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಣ್ಣ, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ಮುಖಂಡರಾದ ಕಳಲೆ ರಾಜೇಶ್, ಅಬ್ದುಲ್ ಖಾದರ್, ಕರಳಪುರ ನಾಗರಾಜು, ನಾಗರಾಜಯ್ಯ, ಮಲ್ಕುಂಡಿ ಪುಟ್ಟಸ್ವಾಮಿ, ಹಾಡ್ಯ ಜಯರಾಮ, ದೊರೆಸ್ವಾಮಿ, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗು ಮೊದಲಾದವರು ಇದ್ದರು.

----

ಬಾಕ್ಸ್...

ಅಂಬೇಡ್ಕರ್ ಬಗ್ಗೆ ಅರಿವು ಮೂಡಿದೆ

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಸ್ವಾತಂತ್ರ್ಯಾ ಬಂದ 75 ವರ್ಷಗಳ ಬಳಿಕವಾದರೂ ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅರಿವು ಮೂಡಿದೆ. ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎನ್ನುತ್ತಿದ್ದವರು ಸಂವಿಧಾನದ ಪುಸ್ತಕ ಹಿಡಿದು ತಿರುಗುವಂತಾಗಿರುವುದು ಡಾ. ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದ ಶಕ್ತಿಯಾಗಿದೆ ಎಂದರು.

ಪ್ರಸ್ತುತ ಸಂವಿಧಾನಕ್ಕೆ ತೀವ್ರವಾದ ಧಕ್ಕೆ ಎದುರಾಗಿದ್ದು, ಜನರು ಜಾಗೃತಗೊಳ್ಳುವ ಮೂಲಕ ಸಂವಿಧಾನದ ರಕ್ಷಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಎರಡು ತಿಂಗಳ ಕಾಲ ನಿರಂತರವಾಗಿ ನಡೆದ ಸಂವಿಧಾನ ಜಾಗೃತಿ ಜಾಥಾ ನೆರವಾಗಿದೆ ಎಂದು ಅವರು ಹೇಳಿದರು.

----

ಕೋಟ್...

ತಾಲೂಕಿನಲ್ಲಿ ರೈತರ ಜಮೀನುಗಳಿಗೆ ತೆರಳುವ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕಿದ್ದು, ಜೊತೆಗೆ ದೊಡ್ಡಕವಲಂದೆ ಕುಡಿಯುವ ನೀರಿನ ಕಾರ್ಯಾಗಾರ ದುರಸ್ಥಿ ಕಾಮಗಾರಿಗೆ ಚಾಲನೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರ ನೆರವು ಅವಶ್ಯಕ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಮಹದೇವಪ್ಪ ಆಸಕ್ತಿ ವಹಿಸಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನಕ್ಕೆ 1 ಕೋಟಿ ಅನುದಾನ ನೀಡಿದ್ದು, ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು.

- ದರ್ಶನ್ ಧ್ರುವನಾರಾಯಣ್, ಶಾಸಕ