ಸಾರಾಂಶ
ಡಾ. ಬಾಬು ಜಗಜೀವನ ರಾಮ್ ಅವರ 118ನೇ ಜನ್ಮ ದಿನಾಚರಣೆ
ಕನ್ನಡಪ್ರಭ ವಾರ್ತೆ ಉಡುಪಿಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅಸಮಾನತೆ, ಅಸ್ಪೃಶ್ಯತೆ, ಜಾತಿಪದ್ಧತಿ ವಿರುದ್ಧ ಹೋರಾಡಿ, ದೀನದಲಿತರಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಅವಿರತವಾಗಿ ಶ್ರಮಿಸಿದ ಸಾಮಾಜಿಕ ನ್ಯಾಯದ ಹರಿಕಾರ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ. ಬಾಬು ಜಗಜೀವನ ರಾಮ್ ಅವರ ಜೀವನಮೌಲ್ಯಗಳು ಸರ್ವಕಾಲಕ್ಕೂ ಆದರ್ಶಪ್ರಾಯವಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶನಿವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪ.ಜಾತಿ, ಪ.ಪಂಗಡಗಳ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ 118ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹಸಿರುಕ್ರಾಂತಿಯ ಹರಿಕಾರ, ಭಾರತದ ಉಪಪ್ರಧಾನಿಯಾದ ಡಾ. ಬಾಬು ಜಗಜೀವನ ರಾಮ್ ಜನ್ಮ ದಿಚಾರಣೆಯು ಒಂದು ವಿಶಿಷ್ಟವಾದ ಕಾರ್ಯಕ್ರಮವಾಗಿದೆ. ಬದುಕಿನ ಬಹು ಭಾಗವನ್ನು ಅಧಿಕಾರದಲ್ಲಿ ಕಳೆದರೂ ಸಹ ಸಮಾಜದ ಉನ್ನತಿಗಾಗಿ ತನ್ನ ಜೀವನವನ್ನು ಸಮರ್ಪಣೆ ಮಾಡಿದ್ದಾರೆ. ದೇಶದಲ್ಲಿ ಬರಗಾಲ ಬಂದ ಸಂದರ್ಭದಲ್ಲಿ ಕೃಷಿ ಮಂತ್ರಿ ಆಗಿದ್ದ ಅವರು ಯಾರೂ ಊಹಿಸದಂತಹ ರೀತಿಯಲ್ಲಿ ಆಹಾರದ ಉತ್ಪಾದನೆ ಹಾಗೂ ಆಹಾರದ ವಿತರಣೆ ಮಾಡಿದ್ದಾರೆ. ಕಾರ್ಮಿಕ ಮಂತ್ರಿಯಾಗಿದ್ದಾಗ ಸಮಾಜದ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದರೊಂದಿಗೆ ಜನರ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ ಎಂದರು.ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಧ್ಯಕ್ಷತೆ ವಹಿಸಿ, ಡಾ. ಬಿ.ಆರ್ ಅಂಬೇಡ್ಕರ್ ಅವರ ಸಮಕಾಲೀನರಾದ ಡಾ. ಬಾಬು ಜಗಜೀವನ ರಾಮ್ ಅವರು ಕೇಂದ್ರದ ಕಾರ್ಮಿಕ ಹಾಗೂ ರಕ್ಷಣಾ ಸಚಿವರಾಗಿದ್ದಾಗ ದೂರದೃಷ್ಠಿಯಿಂದ ತೆಗೆದುಕೊಂಡ ನಿಲುವುಗಳು ಹಾಗೂ ರೂಪಿಸಿದ ಕಾನೂನುಗಳು ಆಡಳಿತ ವ್ಯವಸ್ಥೆಗೆ ಮಾದರಿಯಾಗುವಂತದ್ದು. ಅವರ ಕುರಿತು ಲೇಖನಗಳು, ಪುಸ್ತಕಗಳು, ಅವರ ಆದರ್ಶ, ಚಿಂತನೆಗಳು, ಜೀವನ ಶೈಲಿಯನ್ನು ಪ್ರತಿಯೊಬ್ಬ ಯುವ ಪೀಳಿಗೆಯು ಅವಲೋಕನ ಮಾಡುವುದರೊಂದಿಗೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅಜ್ಜರಕಾಡು ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ. ನಿಕೇತನ ಉಪನ್ಯಾಸ ನೀಡಿ, ಸುಮಾರು ಮೂವತ್ತು ವರ್ಷ ವಿವಿಧ ಸಚಿವರಾಗಿ, ಉಪಪ್ರಧಾನಿಯಾಗಿ ಆಡಳಿತ ನಿರ್ವಹಿಸಿದ ಜಗಜೀವನರಾಮ್, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಸಮಾಜವಾದಿ ಸಿದ್ಧಾಂತದ ನಿಲುವಿನೊಂದಿಗೆ ಜೀವನವನ್ನು ಮುನ್ನಡೆಸಿಕೊಂಡು ಬಂದ ಧೀಮಂತ ಪ್ರತಿಭೆ ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ., ಪೌರಾಯುಕ್ತ ಡಾ.ಉದಯ್ ಶೆಟ್ಟಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಂಘಟನೆಗಳ ಮುಖಂಡರು ಹಾಗೂ ಮತ್ತಿತರು ಉಪಸ್ಥಿತರಿದ್ದರು.ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ ಎಂ, ಸ್ವಾಗತಿಸಿ, ವಂದಿಸಿದರು. ವಾರ್ಡನ್ ಶ್ರೀದೇವಿ ನಿರೂಪಿಸಿದರು.