ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಶೋಷಿತ ಸಮುದಾಯಗಳ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು, ನ್ಯಾಯ ಸಮ್ಮತವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಬೇಕಿದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.ಪಟ್ಟಣದ ಆಡಳಿತಸೌಧದ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಡಾ. ಬಾಬು ಜಗಜೀವನ ರಾಮ್ ಅವರ ೧೧೯ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲ ಸಮುದಾಯಗಳಲ್ಲೂ ಶಿಕ್ಷಿತ ಯುವ ಜನರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ. ಪ್ರತಿಯೊಂದು ತಳ ಸಮುದಾಯದಲ್ಲೂ ವಿದ್ಯಾವಂತ ನಿರುದ್ಯೋಗಿಗಳ ಅಥವಾ ಅರೆಬರೆ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅವಕಾಶಗಳೇ ವಿರಳವಾಗುತ್ತಿರುವ ಸಂದರ್ಭದಲ್ಲಿ ಒಳ ಮೀಸ ಲಾತಿಯ ವಿಚಾರದಿಂದ ಅವಕಾಶಗಳಿಂದ ವಂಚಿತ ರಾಗುತ್ತಿದ್ದೇವೆ ಎಂಬ ಆತಂಕಕ್ಕೆ ಶೋಷಿತ ಸಮು ದಾಯಗಳು ಒಳಗಾಗುತ್ತಿವೆ. ಈ ಪರಿಸ್ಥಿತಿ ಸಮುದಾಯ ದವರನ್ನು ಮತ್ತಷ್ಟು ದುರ್ಬಲಗೊಳಿಸುತ್ತಿದೆ. ಶೋಷಿತ ಸಮುದಾಯಗಳ ನಡುವಿನ ಒಡಕನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಎಲ್ಲ ಶೋಷಿತ ಸಮುದಾಯಗಳ ಆತಂಕಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮಾರ್ಪಾಡುಗಳ ಜತೆ ಕೂಡಲೇ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.ಬಾಬು ಜಗಜೀವನರಾಮ್ ಅವರ ನಿಸ್ವಾರ್ಥ ಸೇವೆ, ಸ್ವಾತಂತ್ರ್ಯ ಚಳವಳಿ ಮತ್ತು ಸಮರ್ಪಣಾ ಮನೋಭಾವದ ಹೋರಾಟದಿಂದಾಗಿ ಸಮಾಜಕ್ಕೆ ಆದರ್ಶಪ್ರಾಯ ವ್ಯಕ್ತಿಯಾಗಿದ್ದಾರೆ. ಅಧಿಕಾರ ಮತ್ತು ಅಸ್ತಿಯಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ ಹಾಗೂ ತ್ಯಾಗದಿಂದ ಗಳಿಸಬಹುದು ಅವರ ಬದುಕು ತಿಳಿಸಿಕೊಡುತ್ತದೆ. ಬಾಬು ಜಗಜೀವನ ರಾಮ್ ಸತತ ೩ ದಶಕಗಳ ಕಾಲ ಕೇಂದ್ರ ಮಂತ್ರಿ ಮಂಡಲದ ಸದಸ್ಯರಾಗಿ ಸಾರಿಗೆ, ಆಹಾರ, ರೈಲ್ವೆ, ಕೃಷಿ ಮತ್ತು ಸಮುದಾಯ ಅಭಿವೃದ್ಧಿ, ಕಾರ್ಮಿಕ ಮತ್ತು ಉದ್ಯೋಗ ಪುನರ್ವಸತಿ ಕೆಲಸವನ್ನು ಮಾಡಿದ ಹಿರಿಮೆ ಅವರದ್ದು. ಕೂಲಿ ಮಾಡಿ ಜೀವನ ಸಾಗಿಸಲು ಕ?ವಾಗಿದ್ದ ಕಾಲಘಟ್ಟದಲ್ಲಿ ಬಾಬು ಜಗಜೀವನರಾಮ್ ಸೃಷ್ಟಿಸಿದ ಹಸಿರು ಕ್ರಾಂತಿಯಿಂದ ಬಡವರಿಗೆ ಆಹಾರದ ಕೊರತೆ ದೂರವಾಯಿತು. ಹಸಿರು ಕ್ರಾಂತಿಯ ಹರಿಕಾರ ಬಾಬೂಜಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನಕ್ಕೂ ಆದ್ಯತೆ ಕೊಟ್ಟಿದ್ದರಿಂದ ಇಂದು ಸಮಾಜ ದಲ್ಲಿ ಆಹಾರ ಪದಾರ್ಥಗಳ ಕೊರತೆಯಿಲ್ಲ ಎಂದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ಜಿ.ಎಸ್. ಶಂಕರಪ್ಪ, ಪೊಲೀಸ್ ಉಪ ಅಧೀಕ್ಷಕ ಎನ್‌ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ. ಆರ್‌. ಹರೀಶ್, ಪುರಸಭಾ ಮುಖ್ಯಾಧಿಕಾರಿ ಆರ್‌ ಯತೀಶ್ ಕುಮಾರ್‌, ರತ್ನಾಕರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಡಿ. ಆರ್‌. ತ್ಯಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎನ್. ದೀಪ ಇತರರು ಉಪಸ್ಥಿತರಿದ್ದರು.