ಕೊಪ್ಪಳ: ಸರ್ವರ ಸಮಾನತೆಗಾಗಿ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಎರಡು ಕಣ್ಣುಗಳಿದ್ದಂತೆ ಎಂದು ಕೊಪ್ಪಳ ವಿಪ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ರೂವಾರಿ ಡಾ.ಬಾಬು ಜಗಜೀವನ ರಾಮ್ ಅವರ119ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶೋಷಿತ ವರ್ಗದ ಕಣ್ಣೀರು ಒರೆಸುವ ಕೆಲಸ ಬಾಬು ಜಗಜೀವನ್ ರಾಮ್ ಮಾಡಿದ್ದಾರೆ. ದೇಶದಲ್ಲಿ ಆಹಾರದ ಕೊರತೆ ಉಂಟಾದಾಗ ಆಹಾರ ಉತ್ಪಾದನೆಗೆ ಒತ್ತು ಕೊಟ್ಟು ಅದಕ್ಕೆ ಪೂರಕವಾಗಿ ಕೈಗೊಂಡ ಕ್ರಮಗಳಿಂದ ಜಗಜೀವನ ರಾಮ್ ಹಸಿರು ಕ್ರಾಂತಿಯ ಹರಿಕಾರರೆಂದು ಕರೆಯಲಾಗುತ್ತದೆ. ದೇಶ,ಶ್ರಮಿಕ ಹಾಗೂ ಶೋಷಿತ ವರ್ಗಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಡಾ.ಬಾಬು ಜಗಜೀವನ ರಾಮ್ ಜೀವನ ಸಾಧನೆ ಸಮಾಜಕ್ಕೆ ದಾರಿದೀಪವಾಗಿದ್ದು, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮಹತ್ವ ಜನರಿಗೆ ತಿಳಿಸಿವೆ.ಅವರ ಆದರ್ಶ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಡಾ. ಸುರೇಶ್ ಬಿ.ಇಟ್ನಾಳ ಮಾತನಾಡಿ, ಭಾರತದ ಕೃಷಿ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಬಾಬುಜಿ ಕೊಡುಗೆ ಅನನ್ಯವಾಗಿದೆ.ಅವರು ಹಾಕಿಕೊಟ್ಟ ಸಾಮಾಜಿಕ ಸಮಾನತೆಯ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ.1968ರಲ್ಲಿ ಬಾಬು ಜಗಜೀವನ ರಾಮ್ ರಾಜಕೀಯ ಜೀವನದಲ್ಲಿ ಅತ್ಯಂತ ಮಹತ್ವದ ಘಟ್ಟವಾಗಿತ್ತು.ಆ ಸಮಯದಲ್ಲಿ ಅವರು ಕೇಂದ್ರ ಕೃಷಿ ಮತ್ತು ಆಹಾರ ಸಚಿವರಾಗಿ ಸೇವೆ ಸಲ್ಲಿಸಿದರು.1968ರ ಅವಧಿಯಲ್ಲಿ ದೇಶವು ಆಹಾರದ ಬಿಕ್ಕಟ್ಟಿನಲ್ಲಿದ್ದಾಗ ಡಾ. ಬಾಬು ಜಗಜೀವನ ರಾಮ್ ತೋರಿದ ದೃಢ ನಿರ್ಧಾರ ಇಂದಿಗೂ ಸ್ಮರಣೀಯ. ಕೃಷಿ ಸಚಿವರಾಗಿ ಜಾರಿಗೆ ತಂದ ಕ್ರಾಂತಿಕಾರಿ ಯೋಜನೆಗಳ ಫಲವಾಗಿ ಭಾರತವು ಆಹಾರದ ದಾಸ್ತಾನು ಮಾಡುವಲ್ಲಿ ಯಶಸ್ವಿಯಾಯಿತು.1968ರ ಹಸಿರು ಕ್ರಾಂತಿ ಯಶಸ್ಸು ಬಾಬುಜಿ ಆಡಳಿತಾತ್ಮಕ ಚಾಕಚಕ್ಯತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.ಕುಕನೂರು ತಾಲೂಕು ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಪ್ರಭುರಾಜ ಕೆ.ಎನ್. ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಪಂ ಉಪಕಾರ್ಯದರ್ಶಿ ಟಿ. ಕೃಷ್ಣ ಮೂರ್ತಿ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ,ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೋಗಲದ, ಗಾಳೆಪ್ಪ ಪೂಜಾರ್,ಗವಿಸಿದ್ದಪ ಕಂದಾರಿ, ಚನ್ನಬಸಪ್ಪ ಹೊಳೆಯಪ್ಪನವರ, ಡಾ.ಜ್ಞಾನಸುಂದರ,ಗವಿಸಿದ್ದಪ್ಪ ಗಿಣಿಗೇರಾ, ಜಿ.ಎಂ.ಬಲ್ಲದ್,ರಮೇಶ ಗಿಣಿಗೇರಿ, ಸಿದ್ರಾಮ ಹೊಸಮನಿ, ರಾಮಣ್ಣ ಚೌಡ್ಕಿ,ಮಲ್ಲಿಕಾರ್ಜುನ ಪೂಜಾರ್, ಚಂದ್ರುಸ್ವಾಮಿ ಬಹದ್ದೂರ್ ಬಂಡಿ, ಮಲ್ಲು,ಹನುಮೇಶ ಕಡೇಮನಿ, ದ್ಯಾಮಣ್ಣ ಚಾಮಲಾಪೂರ, ರಾಮಣ್ಣ ಕಂದಾರಿ ಹಾಗೂ ಹಲವು ಮುಖಂಡರು, ಇತರೆ ಜನಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಹನೀಯರ ಪುತ್ಥಳಿಗಳಿಗೆ ಮಾಲಾರ್ಪಣೆ:ಬಾಬು ಜಗಜೀವನ ರಾಮ್ ಅವರ 119 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಮತ್ತು ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಸಹಯೋಗದಲ್ಲಿ ನಗರದ ಹೊಸಪೇಟೆ ರಸ್ತೆಯ ಕಿಶೋರಿ ಪೆಟ್ರೋಲ್ ಬಂಕ್ ಹತ್ತಿರದ ಶಿವಶಾಂತವೀರ ನಗರದ ಅಂಬಿಗರ ಚೌಡಯ್ಯ ಉದ್ಯಾನವನದಲ್ಲಿರುವ ಮಹನೀಯರ (ಅಂಬೇಡ್ಕರ್, ಬಸವೇಶ್ವರ ಹಾಗೂ ಬಾಬು ಜಗಜೀವನ್‌ರಾಂ) ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಲಾಯಿತು.
ಅದ್ದೂರಿ ಮೆರವಣಿಗೆ: ಹಸಿರು ಕ್ರಾಂತಿಯ ರೂವಾರಿ ಡಾ.ಬಾಬು ಜಗಜೀವನ ರಾಮ್ ಅವರ 119ನೇ ಜನ್ಮ ದಿನಾಚರಣೆ ಅಂಗವಾಗಿ ಕೊಪ್ಪಳ ತಹಸೀಲ್ದಾರ ಕಚೇರಿ ಆವರಣದಿಂದ ನಡೆದ ಡಾ. ಬಾಬು ಜಗಜೀವನ ರಾಮ್ ಅವರ ಭಾವಚಿತ್ರಕ್ಕೆ ಕೊಪ್ಪಳ ಸಂಸದ ಕೆ.ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿ ಡಾ.ಸುರೇಶ್ ಬಿ. ಇಟ್ನಾಳ, ಎಸ್ಪಿ ಡಾ.ರಾಮ್ ಎಲ್.ಅರಸಿದ್ಧಿ ಪುಷ್ಪ ನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.