ಸಾರಾಂಶ
ಕುಷ್ಟಗಿ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಚಂದ್ರಕಲಾ ಅವರು ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಮಗುವಿನ ಕಾಲು ಮುರಿದಿದ್ದಾರೆಂದು ಆರೋಪಿರುವ ಮಗುವಿನ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.
ಕುಷ್ಟಗಿ:
ಇಲ್ಲಿನ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಚಂದ್ರಕಲಾ ಅವರು ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಮಗುವಿನ ಕಾಲು ಮುರಿದಿದ್ದಾರೆಂದು ಆರೋಪಿರುವ ಮಗುವಿನ ಸಂಬಂಧಿಕರು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.ನಾಲ್ಕು ದಿನದ ಹಿಂದೆ ತಾಲೂಕಿನ ಕೆ. ಬೋದುರು ತಾಂಡಾದ ನಿವಾಸಿ ಶಿಲ್ಪಾ ರಾಮಜಪ್ಪ ರಾಠೋಡ ಅವರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದೆ. ಡಾ. ಚಂದ್ರಕಲಾ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದಾರೆ. ಬಳಿಕ ಇಲಕಲ್ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ. ಎರಡು ದಿನದ ನಂತರ ಮಗುವಿನ ಕಾಲು ಮುರಿದಿರುವ ಸುದ್ದಿ ಪಾಲಕರಿಗೆ ತಿಳಿದಿದ್ದು, ಅವರು ತಮ್ಮ ಕುಟುಂಬಸ್ಥರೊಡನೆ ಕುಷ್ಟಗಿ ಆಸ್ಪತ್ರೆಗೆ ತೆರಳಿ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಎಸ್. ರೆಡ್ಡಿ, ಡಾ. ಚಂದ್ರಕಲಾ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.ಪ್ರತಿಭಟನಾಕಾರ ಪ್ರಕಾಶ ಮಾತನಾಡಿ, ಹೆಣ್ಣು ಮಗುವಿನ ಕಾಲು ಮುರಿದಿದ್ದರೂ ಸಹಿತ ಅದನ್ನು ಮುಚ್ಚಿಟ್ಟು ಹೆಚ್ಚಿನ ಚಿಕಿತ್ಸಗೆಗಾಗಿ ಇಲಕಲ್ ಖಾಸಗಿ ಆಸ್ಪತ್ರೆಗೆ ಬರೆದುಕೊಟ್ಟಿದ್ದಾರೆ. ಸರ್ಕಾರಿ ವೈದ್ಯರು ಸರ್ಕಾರಿ ಆಸ್ಪತ್ರೆಗೆ ಶಿಫಾರಸು ಮಾಡುವ ಬದಲಿಗೆ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ. ತಕ್ಷಣ ವೈದ್ಯರನ್ನು ಅಮಾನತು ಮಾಡಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.
ಈ ಕುರಿತು ಡಿಎಚ್ಒ, ಟಿಎಚ್‌ಒ ಕ್ರಮಕೈಗೊಳ್ಳದೆ ಹೋದರೆ ನಾವೇ ಕೇಸ್ ದಾಖಲಿಸುತ್ತೇವೆ ಎಂದು ಹೇಳಿದರು.