ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಹಿಂದೆ : ಪರಂ ಬೇಸರ

| Published : Jul 29 2024, 12:51 AM IST

ಸಾರಾಂಶ

ಜಿಲ್ಲೆಯು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಹಿಂದುದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಬೇಸರ

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಯು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಹಿಂದುದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಬೇಸರಗೊಂಡರು. ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಶಾಲಾ ಮುಖ್ಯೋಪಾಧ್ಯಾಯರಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಶೈಕ್ಷಣಿಕ ಬಲವರ್ಧನಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ಮಕ್ಕಳನ್ನು ತಯಾರು ಮಾಡಬೇಕು. ಜಿಲ್ಲೆಯಲ್ಲಿ 2.5 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿದ್ದು, ಅವರ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದರೂ ಫಲಿತಾಂಶದಲ್ಲಿ ಮಾತ್ರ ಹಿಂದುಳಿದಿದ್ದೇವೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಆತ್ಮಾವಲೋಕನ ಮಾಡಿಕೊಂಡು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಹೊಸ ಶಿಕ್ಷಣ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ನಂಬರ್ ಒನ್ ಸ್ಥಾನಕ್ಕೆ ತರುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ದೇಶದ ಸಂಪತ್ತನ್ನಾಗಿ ರೂಪಿಸಬೇಕು ಎಂದ ಅವರು, ವಿಶ್ವದಲ್ಲಿಯೇ ಅತೀ ಹೆಚ್ಚು ಮಾನವ ಸಂಪನ್ಮೂಲ ಉತ್ಪಾದಿಸುವ ರಾಷ್ಟ್ರ ನಮ್ಮದಾಗಿದ್ದು, ಗುರುಕುಲ ಪದ್ಧತಿಯಿಂದ ಪ್ರಾರಂಭಗೊಂಡು ಈಗಿನ ಆಧುನಿಕ ಭಾರತದ ವಿಶ್ವ ವಿದ್ಯಾನಿಲಯಗಳವರೆಗೂ ಇಡೀ ಪ್ರಪಂಚಕ್ಕೆ ಜ್ಞಾನಾರ್ಜನೆ ನೀಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.ಸ್ವತಂತ್ರಗೊಂಡ ಸಂದರ್ಭದಲ್ಲಿ ಶೇಕಡಾ ೧೨ರಷ್ಟಿದ್ದ ದೇಶದ ಸಾಕ್ಷರತೆ ಪ್ರಮಾಣ ಪ್ರಸ್ತುತ ಶೇಕಡಾ ೭೮ರಷ್ಟು ಹೆಚ್ಚಿರುವುದು ಸರ್ಕಾರ ಕೈಗೊಂಡಿರುವ ಯೋಜನೆಗಳ ಪ್ರತಿಫಲವಾಗಿದೆ. ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಸರ್ಕಾರ ಅನೇಕ ಯೋಜನೆ ಮತ್ತು ನೀತಿಗಳನ್ನು ಜಾರಿಗೆ ತಂದಿದ್ದು, 1986 ರಲ್ಲಿ ಮೊದಲ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಯಿತು ಎಂದರು.ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಶಿಕ್ಷಣದ ಬೇರು ಕಹಿಯಾಗಿದ್ದರೂ ಫಲ ಮಾತ್ರ ಸಿಹಿಯಾಗಿರುತ್ತದೆ ಎಂಬ ತತ್ವಜ್ಞಾನಿ ಅರಿಸ್ಟಾಟಲ್ ಅವರ ಸಂದೇಶವನ್ನು ಮಕ್ಕಳಿಗೆ ಶಿಕ್ಷಕರು ಮನನ ಮಾಡಬೇಕು. ಈ ಸಿಹಿಯಾದ ಫಲ ಮಕ್ಕಳಿಗೆ ದೊರೆಯುವಂತೆ ಮಾಡುವ ಸಂಪೂರ್ಣ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಕ್ಕಳು ದಿನದ ಮುಕ್ಕಾಲು ಭಾಗ ಶಾಲೆಯಲ್ಲಿಯೇ ಕಳೆಯುವುದರಿಂದ ಮಕ್ಕಳಿಗೆ ಜ್ಞಾನದ ಬೀಜವ ಬಿತ್ತುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಇತರೆ ವೃತ್ತಿಗಳಿಗೆ ನಿವೃತ್ತಿ ದೊರೆಯಬಹುದೇನೋ. ಶಿಕ್ಷಕ ವೃತ್ತಿಗೆ ಮಾತ್ರ ನಿವೃತ್ತಿ ಎಂಬುದಿಲ್ಲವೆಂದು ಮಾರ್ಮಿಕವಾಗಿ ನುಡಿದ ಅವರು ವಿದ್ಯಾರ್ಥಿಗಳಿಗೆ ಸಾಧಕರ, ಮಹನೀಯರ ಸಂದೇಶ, ಆದರ್ಶಗಳನ್ನು ಅಳವಡಿಸಿಕೊಳ್ಳುವಂತಹ ಮೌಲ್ಯಯುತ ಶಿಕ್ಷಣ ನೀಡಬೇಕು ಎಂದು ತಿಳಿಸಿದರಲ್ಲದೆ ಶಿಕ್ಷಕರೊಬ್ಬರ ಬುದ್ದಿಮಾತಿನಿಂದ ತಮ್ಮ ಶೈಕ್ಷಣಿಕ ಬದುಕಿನ ದಿಕ್ಕು ಬದಲಾದ ಬಗ್ಗೆ ಸ್ಮರಿಸಿದರು. ಶಿಕ್ಷಕರು ಮಕ್ಕಳಿಗೆ ಪಠ್ಯ ಚಟುವಟಿಕೆಗಳೊಂದಿಗೆ ದೇಶಭಕ್ತಿ,ತಂದೆ-ತಾಯಿ, ಹಿರಿಯರು, ಶಿಕ್ಷಕರ ಬಗ್ಗೆ ಗೌರವ, ಆರೋಗ್ಯದ ಬಗ್ಗೆ ಕಾಳಜಿ, ಶಿಸ್ತುಬದ್ಧ ಜೀವನ, ಪರಿಸರ ಕಾಳಜಿ ಹೊಂದುವ ಬಗ್ಗೆ ನೈತಿಕ ಶಿಕ್ಷಣ ಬೋಧಿಸಬೇಕೆಂದರಲ್ಲದೆ ಶೈಕ್ಷಣಿಕ ನಾಡೆಂದು ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯನ್ನು ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಮೊದಲ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಶಿಕ್ಷಕರು ಈಗಿನಿಂದಲೇ ಶ್ರಮಿಸಬೇಕು ಎಂದು ಕರೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಮಕ್ಕಳ ಕಲಿಕಾ ಮಕ್ಕಳನ್ನು ಸುಧಾರಿಸುವ ನಿಟ್ಟಿನಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಜ್ಞಾನಸಂವರ್ಧನಾ ಕಲಿಕಾ ವ್ಯವಸ್ಥೆ ತರಲು ಹಾಗೂ ಶಿಕ್ಷಕರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ವಿನೂತನ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಇದರಿಂದ ಬೋಧನಾ ಕಲಿಕಾ ವಿಧಾನಗಳಲ್ಲಿ ಗಮನಾರ್ಹ ಬದಲಾವಣೆ ತರಬಹುದಾಗಿದೆ ಎಂದು ತಿಳಿಸಿದರು.ಮಾನವ ಸಂಪನ್ಮೂಲ ಶಕ್ತಿಯುತವಾಗಿದ್ದಾಗ ಮಾತ್ರ ದೇಶ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸಧೃಡ ಕೌಶಲ್ಯಯುತ ನಾಗರಿಕರನ್ನು ಸೃಷ್ಠಿಸುವುದೇ ಶೈಕ್ಷಣಿಕ ಬಲವರ್ಧನೆ ಕಾರ್ಯಗಾರದ ಮುಖ್ಯ ಉದ್ದೇಶ. ಶಿಕ್ಷಕರು ಜಿಲ್ಲೆಯನ್ನು ಮಾದರಿ ಶೈಕ್ಷಣಿಕ ಜಿಲ್ಲೆಯನ್ನಾಗಿಸುವ ಧ್ಯೇಯವನ್ನಿಟ್ಟುಕೊಂಡು ಕೆಲಸ ಮಾಡಬೇಕಿದೆ. ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಸಲುವಾಗಿ ಜಿಲ್ಲಾ ಪಂಚಾಯತಿ ವತಿಯಿಂದ 2024-25ನೇ ಸಾಲಿಗಾಗಿ ನರೇಗಾ ಯೋಜನೆಯಡಿ ಶಾಲಾ ಕಾಂಪೌಂಡ್, ಶೌಚಾಲಯ, ಆಟದ ಮೈದಾನ, ಪೌಷ್ಠಿಕ ತೋಟ, ಅಡುಗೆ ಕೋಣೆ ಸೇರಿ 3016 ಶಾಲಾಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ೫ ಮತ್ತು ೮ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಿರುವ ಶೈಕ್ಷಣಿಕ ಕೈ ಪಿಡಿಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಡಿಡಿಪಿಐಗಳಾದ ಕೆ.ಮಂಜುನಾಥ್ ಹಾಗೂ ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಫೋಟೋ: ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಶಾಲಾ ಮುಖ್ಯೋಪಾಧ್ಯಾಯರಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಶೈಕ್ಷಣಿಕ ಬಲವರ್ಧನಾ ಕಾರ್ಯಾಗಾರವನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ ಉದ್ಘಾಟಿಸಿದರು.