ಸಾರಾಂಶ
ಶ್ರೀ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಅ.26ರಿಂದ 29ರವರೆಗೆ ಸಿಲ್ವರ್ ಜೂಬ್ಲಿ ಆರ್ಚಡ್ ಪಾರ್ಕ್‌ನಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನವನ್ನು ಸಂಸದ ಶ್ರೇಯಸ್ ಎಂ. ಪಟೇಲ್ ಉದ್ಘಾಟಿಸಿದರು. ಹಾಸನ ಜಿಲ್ಲೆಯು ಹಲವು ವಿಶ್ವವಿಖ್ಯಾತ ಪ್ರೇಕ್ಷಣೀಯ ತಾಣಗಳನ್ನೊಳಗೊಂಡಿದ್ದು, ಶಿಲ್ಪಕಲೆಗಳ ತವರೂರಾಗಿದೆ. ಈ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳನ್ನು ವಿವಿಧ ಫಲಪುಷ್ಪಗಳಿಂದ ಅಲಂಕರಿಸಿ ಪ್ರದರ್ಶಿಸುವ ಮೂಲಕ ಹಾಸನದ ಇತಿಹಾಸದ ವೈಭವವನ್ನು ಮರುಕಳಿಸುವುದು ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷತೆಯಾಗಿದೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಹೇಮಾವತಿ ತೋಟಗಾರಿಕೆ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಅ.26ರಿಂದ 29ರವರೆಗೆ ಸಿಲ್ವರ್ ಜೂಬ್ಲಿ ಆರ್ಚಡ್ ಪಾರ್ಕ್‌ನಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನವನ್ನು ಸಂಸದ ಶ್ರೇಯಸ್ ಎಂ. ಪಟೇಲ್ ಉದ್ಘಾಟಿಸಿದರು.ಇದೇ ಸಂದರ್ಭದಲ್ಲಿ ಪುಷ್ಪ ಕಲಾಕೃತಿಗಳ ಹಾಗೂ ಮತ್ತಿತರ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಂಬಾ ಚೆನ್ನಾಗಿ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಣೆ ಮಾಡುವಂತೆ ತಿಳಿಸಿದರು.
ಹಾಸನ ಜಿಲ್ಲೆಯು ಹಲವು ವಿಶ್ವವಿಖ್ಯಾತ ಪ್ರೇಕ್ಷಣೀಯ ತಾಣಗಳನ್ನೊಳಗೊಂಡಿದ್ದು, ಶಿಲ್ಪಕಲೆಗಳ ತವರೂರಾಗಿದೆ. ಈ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳನ್ನು ವಿವಿಧ ಫಲಪುಷ್ಪಗಳಿಂದ ಅಲಂಕರಿಸಿ ಪ್ರದರ್ಶಿಸುವ ಮೂಲಕ ಹಾಸನದ ಇತಿಹಾಸದ ವೈಭವವನ್ನು ಮರುಕಳಿಸುವುದು ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷತೆಯಾಗಿದೆ ಎಂದು ತಿಳಿಸಿದರು.ಫಲಪುಷ್ಪ ಪ್ರದರ್ಶನದ ವಿಶೇಷತೆ: ಹನ್ನೆರಡನೇ ಶತಮಾನದಲ್ಲಿ ಹೊಯ್ಸಳ ರಾಜರು ಕಟ್ಟಿಸಿರುವ ನಕ್ಷತ್ರಾಕಾರದ ವೇದಿಕೆಯ ಮೇಲೆ ನಿಂತಿರುವ ಚೆನ್ನಕೇಶವ ದೇವಾಲಯವು ತನ್ನ ಸುಂದರ ಶಿಲ್ಪಕಲೆ, ಅದ್ಭುತ ವರ್ಣಚಿತ್ರಗಳು ಹಾಗೂ ಶಿಲಾಸೃಷ್ಟಿಗೆ ಜಗದ್ವಿಖ್ಯಾತವಾಗಿದ್ದು, ಈ ದೇವಾಲಯವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಪ್ರದರ್ಶಿಸಿರುವುದು ನೋಡುಗರನ್ನು ಆಕರ್ಷಿಸುತ್ತದೆ. ಹೊಯ್ಸಳ ಸಾಮ್ರಾಜ್ಯದ ಸಾಮರ್ಥ್ಯ, ಸಾಹಸ ಮತ್ತು ವಿಜಯದ ಸಂಕೇತವಾಗಿರುವ ಹೊಯ್ಸಳ ಲಾಂಛನ ಮತ್ತು ಕರ್ನಾಟಕದ ಶ್ರೀ ಶೈಲವೆಂದೇ ಹೆಸರುವಾಸಿಯಾಗಿರುವ ಶಿವನಿಗೆ ಸಮರ್ಪಿತವಾದ ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ಮರಳು ಬಳಸಿ ಕಲಾತ್ಮಕ ರೂಪದಲ್ಲಿ ರಚಿಸಿ ಪ್ರದರ್ಶಿಸಲಾಗಿದೆ.ಶಾಂತಿ, ಅಹಿಂಸೆ, ತ್ಯಾಗ ಮತ್ತು ಸರಳ ಜೀವನದ ಸಂದೇಶವನ್ನು ಸಾರುವ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಮೇಲೆ ನಿಂತಿರುವ ವಿಶ್ವದ ಅತಿ ಎತ್ತರದ ಏಕಶಿಲಾ ಪ್ರತಿಮೆಯೆಂದೇ ಪ್ರಸಿದ್ಧವಾಗಿರುವ ಗೊಮ್ಮಟೇಶ್ವರ ಪ್ರತಿಮೆಯನ್ನು ಪ್ರದರ್ಶಿಸಲಾಗಿದೆ. ಮಾನವ ಕುಲದ ಕಲ್ಯಾಣಕ್ಕಾಗಿ ಜನಿಸಿ, ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ಪಸರಿಸಿ, ಆಸೆಯೇ ದು:ಖಕ್ಕೆ ಮೂಲವೆಂದು ತಿಳಿಸಿದ ಗೌತಮ ಬುದ್ದನ ಪ್ರತಿಮೆಯನ್ನು ಪ್ರದರ್ಶಿಸಿರುವುದು ಆಕರ್ಷಕವಾಗಿದೆ.ಹಾಸನದ ಬಾಹ್ಯಾಕಾಶ ಮುಖ್ಯ ನಿಯಂತ್ರಣಾ ಸೌಲಭ್ಯರವರ ವತಿಯಿಂದ ಉಪಗ್ರಹಗಳ ಮಾದರಿಗಳನ್ನು ಪ್ರದರ್ಶಿಸಲಾಗುತ್ತದೆ. ಜಿಲ್ಲೆಯ ಜನರ ಜೀವನಾಡಿಯಾದ ಹೇಮಾವತಿ ಜಲಾಶಯದ ಪ್ರತಿಕೃತಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಿ ಪ್ರದರ್ಶಿಸಲಾಗಿದೆ. ವಿವಿಧ ಹಣ್ಣು ಮತ್ತು ತರಕಾರಿಗಳನ್ನು ಬಳಸಿ ಬಗೆ ಬಗೆಯ ಪ್ರಾಣಿ ಪಕ್ಷಿಗಳನ್ನು ಕೆತ್ತನೆ ಮಾಡಿರುವುದು ನೋಡುಗರ ಕಣ್ಮನ ಸೆಳೆಯುವಂತಿದೆ. ವಿವಿಧ ಬಗೆಯ ಲಕ್ಷಾಂತರ ಹೂಗಳಿಂದ ಅಲಂಕೃತಗೊಂಡಿರುವ ಮಂಜರಾಬಾದ್ ಕೋಟೆ, ಬೆಟ್ಟದಿಂದ ಬಟ್ಟಲಿಗೆ ಕಾಫಿಯ ಪಯಣ, ಸೆಲ್ಫಿ ಪಾಯಿಂಟ್ ಇನ್ನಿತರೆ ಪ್ರದರ್ಶಿಕೆಗಳು ಜನರ ಕಣ್ಮನ ಸೆಳೆಯುತ್ತಿವೆ.
ಕೃಷಿ ಇಲಾಖೆಯ ವತಿಯಿಂದ ಸಿರಿಧಾನ್ಯ ಅಲಂಕಾರ , ಕೃಷಿ ಪರಿಕರಗಳು, ಕೀಟನಾಶಕಗಳು, ಮೀನುಗಾರಿಕೆ ವತಿಯಿಂದ ಅಲಂಕಾರಿಕ ಮೀನುಗಳು ಸೇರಿದಂತೆ ಅರಣ್ಯ ಇಲಾಖೆ ವತಿಯಿಂದ ವಿಶೇಷವಾಗಿ ಆನೆಗಳ ಕಲಾಕೃತಿಗಳು ಜನರನ್ನು ಆಕರ್ಷಿಸುತ್ತದೆ. ಹಾಗೂ ವಿವಿಧ ಇಲಾಖೆ ವತಿಯಿಂದ ಮಳಿಗೆಗಳನ್ನು ತೆರೆಯಲಾಗಿದೆ.ನಗರಸಭೆ ಅಧ್ಯಕ್ಷ ಚಂದ್ರೇಗೌಡ ಎಂ, ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ, ಕೃಷಿ ಇಲಾಖೆ ಜಂಟಿ ಕೃಷಿನಿರ್ದೇಶಕ ರಮೇಶ್ ಕುಮಾರ್, ಹೇಮಾವತಿ ತೋಟಗಾರಿಕೆ ಸಂಘದ ಉಪಾಧ್ಯಕ್ಷ ಸುಜಾತ ನಾರಾಯಣ್ ಮತ್ತಿತರರು ಭಾಗವಹಿಸಿದ್ದರು.