ಕೋವಿಡ್‌ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಆಸ್ಪತ್ರೆಗಳಲ್ಲಿ ಮಂಗಳವಾರದಿಂದ ಅಗತ್ಯವುಳ್ಳವರಿಗೆ ಆರ್‌ಟಿಪಿಸಿಆರ್‌, ಆರ್‌ಎಟಿ ತಪಾಸಣೆ ಆರಂಭಿಸಲಾಗಿದೆ. ಜತೆಗೆ ಮುಂಜಾಗ್ರತೆಯಾಗಿ ಹಾಸಿಗೆಗಳನ್ನು ಮೀಸಲು ಇಟ್ಟುಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೋವಿಡ್‌ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಆಸ್ಪತ್ರೆಗಳಲ್ಲಿ ಮಂಗಳವಾರದಿಂದ ಅಗತ್ಯವುಳ್ಳವರಿಗೆ ಆರ್‌ಟಿಪಿಸಿಆರ್‌, ಆರ್‌ಎಟಿ ತಪಾಸಣೆ ಆರಂಭಿಸಲಾಗಿದೆ. ಜತೆಗೆ ಮುಂಜಾಗ್ರತೆಯಾಗಿ ಹಾಸಿಗೆಗಳನ್ನು ಮೀಸಲು ಇಟ್ಟುಕೊಳ್ಳಲಾಗಿದೆ.

ಗರ್ಭಿಣಿಯರು, ಬಾಣಂತಿಯರು, ಮಕ್ಕಳಿಗೆ ಹಾಗೂ ಉಸಿರಾಟದ ತೊಂದರೆ ಇರುವವರು, ಕ್ಯಾನ್ಸರ್‌ ರೋಗಿಗಳಲ್ಲಿ ಜ್ವರ ಕಂಡು ಬಂದಿದ್ದರೆ ಕೋವಿಡ್‌ ಪರೀಕ್ಷೆ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರ್‌ಟಿಪಿಸಿಆರ್ ತಪಾಸಣೆ ಮಾಡಲಾಗುತ್ತಿದ್ದು, ಪ್ರಕರಣ ಹೆಚ್ಚಾದಲ್ಲಿ ಅಗತ್ಯ ಪ್ರಮಾಣದ ಪರೀಕ್ಷೆಗಾಗಿ ಸಿ.ವಿ.ರಾಮನ್‌ ಆಸ್ಪತ್ರೆಯಲ್ಲಿ ಆರ್‌ಟಿಪಿಸಿಆರ್‌ ತಪಾಸಣೆಗಾಗಿ ಲ್ಯಾಬ್‌ ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ.

ಬೌರಿಂಗ್‌ ಆಸ್ಪತ್ರೆಯಲ್ಲಿ ಐದು ಐಸಿಯು, ಜನರಲ್‌ 30 ಹಾಗೂ ಮಕ್ಕಳ ವಿಭಾಗದಲ್ಲಿ 25 ಹಾಸಿಗೆಗಳನ್ನು ಮೀಸಲು ಇಟ್ಟುಕೊಳ್ಳಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ಎಚ್‌ ಬ್ಲಾಕ್‌ನಲ್ಲಿ ಪುರುಷ ಮತ್ತು ಮಹಿಳೆಯರಿಗೆ ತಲಾ 20 ಆಕ್ಸಿಜನ್‌ ಹಾಸಿಗೆ ಮತ್ತು 10 ಐಸಿಯು ಹಾಸಿಗೆ ಮೀಸಲು ಇಟ್ಟುಕೊಳ್ಳಲಾಗಿದೆ.

ಹೋಟೆಲ್‌/ಮೆಟ್ರೋದಲ್ಲಿ ಎಚ್ಚರ:

ನಗರದ ಕೆಲ ಹೋಟೆಲ್‌ಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಫಲಕ ಅಳವಡಿಸಲಾಗಿದೆ. ಮೇಟ್ರೋ ರೈಲಿನಲ್ಲಿ ಕೂಡ ಕೋವಿಡ್‌ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್‌ ಕಡ್ಡಾಯ ಕುರಿತಂತೆ ಮಾರ್ಗಸೂಚಿ ತರಲು ಬೆಂಗಳೂರು ಮೆಟ್ರೋ ರೈಲು ನಿಗಮ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಭೇಟಿ

ಕೆ.ಸಿ‌.ಜನರಲ್ ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಭೇಟಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿನ ಆಕ್ಸಿಜನ್ ಸಿಲಿಂಡರ್, ತುರ್ತು ಐಸಿಯು ಬೆಡ್ ವ್ಯವಸ್ಥೆ, ತುರ್ತು ಚಿಕಿತ್ಸಾ ಘಟಕ, ವೆಂಟಿಲೆಟರ್, ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಕೋವಿಡ್ ಸಂಬಂಧಿಸಿದ ಉಪಕರಣ ಹಾಗೂ ಅವುಗಳ ಗುಣಮಟ್ಟದ ಕುರಿತು ಪರಿಶೀಲಿಸಿದರು.