7 ದಶಕಗಳ ಹಿಂದೆಯೇ ಆತ್ಮನಿರ್ಭರತೆಯ ಕನಸಿನೊಂದಿಗೆ ಆರಂಭವಾಗಿದ್ದ ದೇಶದ ಹೆಮ್ಮೆಯ, ಸರ್ಕಾರಿ ಸ್ವಾಮ್ಯದ ವಾಚ್ ತಯಾರಿಕಾ ಕಂಪನಿಯಾದ ಹಿಂದುಸ್ಥಾನ್ ಮಷಿನ್ ಟೂಲ್ಸ್ ಲಿ.(ಎಚ್‌ಎಂಟಿ) ಕೊನೆಗೂ ತನ್ನ ಅಸ್ತಿತ್ವಕ್ಕೆ ತೆರೆ ಎಳೆದುಕೊಳ್ಳಲು ಮುಂದಾಗಿದೆ.
ನವದೆಹಲಿ: 7 ದಶಕಗಳ ಹಿಂದೆಯೇ ಆತ್ಮನಿರ್ಭರತೆಯ ಕನಸಿನೊಂದಿಗೆ ಆರಂಭವಾಗಿದ್ದ ದೇಶದ ಹೆಮ್ಮೆಯ, ಸರ್ಕಾರಿ ಸ್ವಾಮ್ಯದ ವಾಚ್ ತಯಾರಿಕಾ ಕಂಪನಿಯಾದ ಹಿಂದುಸ್ಥಾನ್ ಮಷಿನ್ ಟೂಲ್ಸ್ ಲಿ.(ಎಚ್‌ಎಂಟಿ) ಕೊನೆಗೂ ತನ್ನ ಅಸ್ತಿತ್ವಕ್ಕೆ ತೆರೆ ಎಳೆದುಕೊಳ್ಳಲು ಮುಂದಾಗಿದೆ. ನೋಂದಣಿ ದಾಖಲೆಗಳಿಂದ ತನ್ನ ವಾಚ್ ತಯಾರಿಕಾ ಘಟಕದ ಹೆಸರನ್ನು ರದ್ದುಪಡಿಸುವಂತೆ ಕೋರಿ ಕೇಂದ್ರ ಕಂಪನಿಗಳ ವ್ಯವಹಾರದ ಸಚಿವಾಲಯಕ್ಕೆ ಎಚ್‌ಎಂಟಿ ಪತ್ರ ಬರೆದಿದೆ. ಇದರೊಂದಿಗೆ ಕಂಪನಿ ಪುನರುಜ್ಜೀವನದ ಕನಸಿಗೆ ತೆರೆ ಬಿದ್ದಿದ್ದು, ಇತಿಹಾಸದ ಕೊಂಡಿಯೊಂದು ಕಳಚುವ ಸಮಯ ಸನ್ನಿಹಿತವಾಗಿದೆ.
2016ರ ಜ.6ರಂದು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು(ಸಿಸಿಇಎ), ಎಚ್‌ಎಂಟಿಯ 3 ಅಂಗಸಂಸ್ಥೆಗಳನ್ನು ಮುಚ್ಚಲು ಅನುಮತಿ ನೀಡಿತ್ತು. ಆ ಬಳಿಕ ಅಗತ್ಯ ಔಪಚಾರಿಕತೆಗಳನ್ನೆಲ್ಲಾ ಪೂರೈಸಿದ್ದು, ಇದೀಗ ಅಂತಿಮವಾಗಿ ವಾಚ್ ತಯಾರಿಕೆಗೆ ಮಂಗಳ ಹಾಡಿದೆ. ಕೇಂದ್ರ ಸರ್ಕಾರದ ಹಿಂದಿನ ನಿರ್ಧಾರದ ಹೊರತಾಗಿಯೂ ಅದರ ಪುನರುಜ್ಜೀವನ ಆಸೆ ಇತ್ತಾದರೂ, ಅದಕ್ಕೂ ಇದೀಗ ತೆರೆ ಬಿದ್ದಿದೆ.
ಸಂಸ್ಥೆಯ ಇತಿಹಾಸ:
1961ರಲ್ಲಿ ಸರ್ಕಾರಿ ಒಡೆತನದ ಎಚ್‌ಎಂಟಿ ಲಿ. ಮತ್ತು ಜಪಾನ್‌ನ ಸಿಟಿಜನ್ ವಾಚ್ ಜಂಟಿಯಾಗಿ ‘ಎಚ್‌ಎಂಟಿ ವಾಚ್’ ಉತ್ಪಾದನೆಯನ್ನು ಆರಂಭಿಸಿದವು. ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಈ ಸಂಸ್ಥೆ, ಭಾರತದ ಮೊದಲ ಕೈಗಡಿಯಾರ ತಯಾರಕನಾಗಿ ಹೊರಹೊಮ್ಮಿತ್ತು. ಕೈಗೆಟುಕುವ ದರಗಳಲ್ಲಿ ಲಭ್ಯವಿದ್ದ ಈ ವಾಚ್‌ಗಳು ಭಾರತೀಯರ ಅಚ್ಚುಮೆಚ್ಚಾಗಿದ್ದವು. ಎಚ್‌ಎಂಟಿಯ ವಾಚ್‌ಗಳು ಸರಳ ವಿನ್ಯಾಸವನ್ನು ಹೊಂದಿದ್ದವಾದರೂ, ಬಾಳಿಕೆಗೆ ಹೆಸರುವಾಸಿಯಾಗಿದ್ದವು. ಜನತಾ, ಪೈಲಟ್, ಕೊಹಿನೂರ್ ಎಚ್‌ಎಂಟಿಯ ಪ್ರಮುಖ ಬ್ರ್ಯಾಂಡ್‌ಗಳಾಗಿದ್ದವು. ಇದುವರೆಗೂ 10 ಕೋಟಿಗೂ ಹೆಚ್ಚಿನ ವಾಚುಗಳು ಮಾರಾಟವಾಗಿರುವ ಅಂದಾಜಿದೆ.
ಅವನತಿ:
ವರ್ಷ ಕಳೆದಂತೆ ಅನೇಕ ವಾಚ್ ಕಂಪನಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರಿಂದ 2000ದ ಬಳಿಕ ಎಚ್‌ಎಂಟಿ ಪತನ ಆರಂಭವಾಗಿತ್ತು. ಇದೀಗ ಶಾಶ್ವತವಾಗಿ ತನ್ನ ಟಿಕ್ ಟಿಕ್ ಸದ್ದನ್ನು ನಿಲ್ಲಿಸಲಿದೆ.
