ಎಚ್‌ಎಂಟಿ ಮೈದಾನದಲ್ಲಿ ಮೂರು ದಿನಗಳ ಫುಡ್‌ ಕಾರ್ನಿವಾಲ್‌ಗೆ ವಿದ್ಯುಕ್ತ ತೆರೆ

| Published : Sep 22 2025, 02:03 AM IST

ಎಚ್‌ಎಂಟಿ ಮೈದಾನದಲ್ಲಿ ಮೂರು ದಿನಗಳ ಫುಡ್‌ ಕಾರ್ನಿವಾಲ್‌ಗೆ ವಿದ್ಯುಕ್ತ ತೆರೆ
Share this Article
  • FB
  • TW
  • Linkdin
  • Email

ಸಾರಾಂಶ

‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಸಹಯೋಗದಲ್ಲಿ ಜಾಲಹಳ್ಳಿಯ ಎಚ್‌ಎಂಟಿ ಮೈದಾನದಲ್ಲಿ ಆಯೋಜಿದ್ದ ಮೂರು ದಿನಗಳ ‘ಪುಡ್‌ ಕಾರ್ನಿವಾಲ್‌’ಗೆ ಭಾನುವಾರ ವಿದ್ಯುಕ್ತ ತೆರೆ ಬಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಸಹಯೋಗದಲ್ಲಿ ಜಾಲಹಳ್ಳಿಯ ಎಚ್‌ಎಂಟಿ ಮೈದಾನದಲ್ಲಿ ಆಯೋಜಿದ್ದ ಮೂರು ದಿನಗಳ ‘ಪುಡ್‌ ಕಾರ್ನಿವಾಲ್‌’ಗೆ ಭಾನುವಾರ ವಿದ್ಯುಕ್ತ ತೆರೆ ಬಿತ್ತು.

ವಾರಾಂತ್ಯದ ಹಿನ್ನೆಲೆಯಲ್ಲಿ ಭಾನುವಾರ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ತಮಗಿಷ್ಟದ ಖಾದ್ಯಗಳನ್ನು ಸೇವಿಸಿ, ಶಾಪಿಂಗ್‌ ಮಾಡಿ ಅಚ್ಚುಕಟ್ಟಾದ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು, ಪಠ್ಯ ಸಂಬಂಧಿ ಪರಿಕರಗಳನ್ನು ಖರೀದಿಸಿ ಮನಗೆ ತೆಗೆದುಕೊಂಡು ಹೋಗುತ್ತಿದ್ದುದೂ ಕಂಡುಬಂತು.

ಶುಕ್ರವಾರ ಈ ಬೃಹತ್‌ ಆಹಾರ ಮೇಳಕ್ಕೆ ಚಾಲನೆ ನೀಡಲಾಗಿತ್ತು. ವಾರಾಂತ್ಯದ ಹಿನ್ನೆಲೆಯಲ್ಲಿ ಶನಿವಾರ ಮಳೆಯ ನಡುವೆಯೂ ನಾಗರಿಕರು ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಭಾನುವಾರ ಮಳೆರಾಯ ಬಿಡುವು ನೀಡಿದ್ದು ಶಾಪಿಂಗ್‌ ಖುಷಿ ಹೆಚ್ಚಾಗಲು ಕಾರಣವಾಯಿತು. ಕುಟುಂಬ ಸಮೇತ ಜನತೆ ಆಗಮಿಸಿ ಹರ್ಷ ವ್ಯಕ್ತಪಡಿಸಿದರು.

ಸಂಗೀತದ ರಸದೌತಣ:

ಒಂದೆಡೆ ಝಗಮಗಿಸುವ ವೇದಿಕೆ. ವೇದಿಕೆಯಲ್ಲಿದ್ದ ಗಾಯಕರು ಸುಶ್ರಾವ್ಯವಾಗಿ ಹಾಡು ಹೇಳುತ್ತಾ ಸಂಗೀತದ ರಸದೌತಣ ಉಣಿಸುತ್ತಿದ್ದರೆ ಮತ್ತೊಂದೆಡೆ, ಬಗೆ ಬಗೆಯ ಖಾದ್ಯಗಳು ಜನರನ್ನು ಸೆಳೆದವು. ರುಚಿಯಾದ ಹಲವು ವೆರೈಟಿಯ ದೋಸೆ, ಬಜ್ಜಿ-ಬೋಂಡ, ಪಾಪ್‌ಕಾರ್ನ್‌, ನೈಸರ್ಗಿಕ ಜ್ಯೂಸ್, ಪಡ್ಡು, ಮಷ್ರೂಮ್‌ ಬಿರಿಯಾನಿ ಸೇರಿದಂತೆ ಹಲವು ತಿಂಡಿ ತಿನಿಸುಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಸಹಭಾಗಿತ್ವದಲ್ಲಿ ಫ್ರೀಡಂ ಆಯಿಲ್ ಮತ್ತು ಎಕ್ಸಪೋಸ್ ಇಂಡಿಯಾ ಪ್ರಸ್ತುತ ಪಡಿಸಿದ್ದ ಈ ಫುಡ್ ಕಾರ್ನಿವಲ್ ಕೇವಲ ಆಹಾರಕ್ಕೆ ಮಾತ್ರ ಸೀಮಿತವಾಗದೆ ಶಾಪಿಂಗ್‌ಗೂ ಹೇಳಿ ಮಾಡಿಸಿದಂತಿತ್ತು. ಮಹಿಳೆಯರ ಮನಕ್ಕೊಪ್ಪುವ ವಿವಿಧ ರೀತಿಯ ವಸ್ತ್ರಗಳು, ಅಭರಣಗಳು, ಕೈಮಗ್ಗದ ವಸ್ತುಗಳು, ಗೃಹೋಪಯೋಗಿ ವಸ್ತುಗಳೂ ಈ ಮೇಳದಲ್ಲಿ ಇದ್ದುದು ವಿಶೇಷವಾಗಿತ್ತು.