ಸಾರಾಂಶ
- ಸೋಮನಮಲ್ಲಾಪುರ ಜಮೀನಿನಲ್ಲಿ ಶೇಂಗಾ ಬೆಳೆ ಪ್ರಾತ್ಯಕ್ಷಿಕೆಯಲ್ಲಿ ಅತೀಕ್ ಉಲ್ಲಾ
- - -ಕನ್ನಡಪ್ರಭಾ ವಾರ್ತೆ ಹೊನ್ನಾಳಿ
2025-26ನೇ ಸಾಲಿನ ರಾಷ್ಟ್ರೀಯ ಖಾದ್ಯ ತೈಲಗುಚ್ಚ ಪ್ರಾತ್ಯಕ್ಷಿಕೆ ಯೋಜನೆಯಡಿ ತಾಲೂಕಿನ ಎಸ್.ಮಲ್ಲಾಪುರ, ಹೊನ್ನೂರು ವಡ್ಡರಹಟ್ಟಿ ಗ್ರಾಮಗಳನ್ನು ಆಯ್ಕೆ ಮಾಡಿ ಇಲಾಖೆಯಿಂದ ವಿಶಿಷ್ಟ (ಟಿಸಿಜಿಎಸ್-1694) ತಳಿಯ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದ್ದು, ಮಳೆಯಾಶ್ರಿತ ಪ್ರದೇಶದಲ್ಲಿ ಉತ್ತಮವಾಗಿ ಬೆಳೆ ಬಂದಿದೆ. ರೈತರು ಉತ್ತಮ ಇಳುವರಿ ಜೊತೆಯಲ್ಲಿ ಉತ್ಕೃಷ್ಟ ಮೇವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಕೃಷಿ ಅಧಿಕಾರಿ ಅತೀಕ್ ಉಲ್ಲಾ ಹೇಳಿದರು.ತಾಲೂಕಿನ ಸೋಮನಮಲ್ಲಾಪುರ ಗ್ರಾಮದ ಜಮೀನಿನಲ್ಲಿ ಸೋಮವಾರ ಬೆಳೆ ವೀಕ್ಷಿಸಿ ಅವರು ಮಾತನಾಡಿದರು. ಕೇಂದ್ರ ಪುರಸ್ಕೃತ ಈ ಯೋಜನೆಯಲ್ಲಿ ಈ ವರ್ಷ ರೈತರಿಗೆ ಶೇಂಗಾ ಬಿತ್ತನೆ ಬೀಜ ವಿತರಿಸಲಾಗಿದೆ. ಪ್ರಾತ್ಯಕ್ಷಿಕೆ ನಡೆಸಿದ ಜಮೀನುಗಳಲ್ಲಿ ಬೆಳೆ ಹುಲುಸಾಗಿ ಬೆಳೆದಿದೆ. ಈ ಯೋಜನೆಯು 2 ಅಂಶಗಳನ್ನು ಹೊಂದಿದೆ. ಒಂದು ಮಣ್ಣಿನ ಆರೋಗ್ಯ ಮತ್ತು ಮನುಷ್ಯನ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳ ತಡೆಯುವುದು. ಈ ನಿಟ್ಟಿನಲ್ಲಿ ಎಣ್ಣೆಕಾಳು ಬೆಳೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಈ ಯೋಜನೆ ರೂಪಿಸಲಾಗಿದೆ ಎಂದರು.
ಯೋಜನೆ ಪರಿಣಾಮ ದೇಶದಲ್ಲಿ ಖಾದ್ಯ ತೈಲ ಉತ್ಪಾದನೆ ಹೆಚ್ಚಾಗಿ, ನಮ್ಮ ಖಾದ್ಯತೈಲವನ್ನು ನಾವೇ ಬಳಸಿ, ಕಲಬೆರೆಕೆ ಎಣ್ಣೆಗಳಿಂದ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಸಹಕಾರಿಯಾಗಿದೆ. ಎಣ್ಣೆಕಾಳು ಬೆಳೆಗಳಿಂದ ನಮ್ಮ ಭೂಮಿ ಫಲವತ್ತತೆಯೂ ಹೆಚ್ಚಾಗುವುದು. ಶೇಂಗಾ ಕೃಷಿಯಿಂದ ಸಾರಜನಕ ಮಣ್ಣಿನಲ್ಲಿ ಸ್ವೀಕರಿಸುತ್ತದೆ. ಸಾವಯುವ ಪದಾರ್ಥಗಳನ್ನು ಸೇರಿಸುತ್ತದೆ. ಇದು ಮಣ್ಣಿನ ರಚನೆ ಮತ್ತು ತೇವಾಂಶಧಾರಣ ಸಾಮರ್ಥ್ಯ ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಕೃಷಿ ಅಧಿಕಾರಿ ಅತೀಕ್ ಉಲ್ಲಾ ವಿವರಿಸಿದರು.ಈ ಸಂದರ್ಭ ರೈತ ವಸಂತಪ್ಪ ದೊಡ್ಡೇರಳ್ಳಿ ತಮ್ಮ ಕೃಷಿ ಅನುಭವ ಹಂಚಿಕೊಂಡರು. ಕೃಷಿ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪಡೆದು ಉತ್ತಮ ಮಳೆಯಿಂದಾಗಿ ಈ ವರ್ಷ ಬೆಳೆ ಬೆಳೆದಿದ್ದೇವೆ. ಉತ್ತಮ ಇಳುವರಿ ಜೊತೆಯಲ್ಲಿ ಹಾಲು ಹಿಂಡುವ ರಾಸುಗಳಿಗೆ ಪೌಷ್ಟಿಕ ಹೊಟ್ಟು ಸಹ ಸಿಗುವ ನಿರೀಕ್ಷೆಯಲ್ಲಿದ್ದೇವೆ. ಬೆಳೆ ಬದಲಾವಣೆಯಿಂದ ಮೆಕ್ಕೆಜೋಳಕ್ಕೆ ಮಾರಕವಾದ ಮುಳ್ಳುಸಜ್ಜೆಯ ಸಮಸ್ಯೆ ಕೂಡ ಶೇಂಗಾ ಕೃಷಿಯಲ್ಲಿ ಇರುವುದಿಲ್ಲ. ಮುಂದಿನ ಬೆಳೆ ಹಿಂಗಾರಿ ಜೋಳ ಹಾಕಿದರೆ ಅದು ಕೂಡ ಉತ್ತಮವಾಗಿ ಬೆಳೆಯಬಹುದು ಎಂದು ಹೇಳಿದರು.
- - --18ಎಚ್.ಎಲ್.ಐ1.ಜೆಪಿಜಿ:
ಕೃಷಿ ಅಧಿಕಾರಿ ಅತೀಕ್ ಉಲ್ಲಾ ಶೇಂಗಾ ಬೆಳೆ ವೀಕ್ಷಿಸಿದರು.