ಕಡಕೋಳ ಪುನರ್ವಸತಿ ಕೇಂದ್ರಕ್ಕೆ ತಪ್ಪದ ನೀರಿನ ಬವಣೆ !

| Published : May 19 2025, 12:06 AM IST

ಸಾರಾಂಶ

ಮೇ ತಿಂಗಳು ಕಳೆಯುತ್ತ ಬಂದರೂ ಮುಂಗಾರು ಪೂರ್ವ ಮಳೆ ಸಮರ್ಪಕವಾಗಿ ಬಂದಿಲ್ಲ. ಇದರಿಂದ ಬಿಸಿಲ ಬೇಗೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ನದಿಗಳ ನೀರಿನ ಪ್ರಮಾಣ ಕಡಿಮೆ ಆಗುತ್ತಿದ್ದು, ನದಿ ತೀರದ ಗ್ರಾಮಗಳಲ್ಲೂ ನೀರಿಗಾಗಿ ಹಾಹಾಕಾರ ಉಂಟಾಗಿದೆ.

ಕೇಶವ ಕುಲಕರ್ಣಿ

ಕನ್ನಡಪ್ರಭ ವಾರ್ತೆ ಜಮಖಂಡಿ

ಮೇ ತಿಂಗಳು ಕಳೆಯುತ್ತ ಬಂದರೂ ಮುಂಗಾರು ಪೂರ್ವ ಮಳೆ ಸಮರ್ಪಕವಾಗಿ ಬಂದಿಲ್ಲ. ಇದರಿಂದ ಬಿಸಿಲ ಬೇಗೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ನದಿಗಳ ನೀರಿನ ಪ್ರಮಾಣ ಕಡಿಮೆ ಆಗುತ್ತಿದ್ದು, ನದಿ ತೀರದ ಗ್ರಾಮಗಳಲ್ಲೂ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಇತ್ತ ನಗರದ ಹೊರವಲಯದಲ್ಲಿರುವ ಕಡಕೋಳ ಪುನರ್ವಸತಿ ಕೇಂದ್ರದಲ್ಲಿ ಕೆಲ ತಿಂಗಳಿಂದ ನೀರಿನ ಸಮಸ್ಯೆ ತಲೆದೋರಿದ್ದು, ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ನೀರಿಗಾಗಿ ನಿತ್ಯ ಅಲೆದಾಟ:

ಕುಡಿಯುವ ನೀರಿನ ಅಭಾವ ಇಲ್ಲಿನ ಜನರ ನಿದ್ದೆಗೆಡಿಸಿದೆ. ಸುಮಾರು 3 ಕಿ.ಮೀ ದೂರ ಕ್ರಮಿಸಿ ತೋಟದ ಕೊಳವೆಬಾವಿ ಮತ್ತಿತರ ಕಡೆ ನೀರು ತರಬೇಕಾದ ಪರಿಸ್ಥಿತಿ ಎದುರಾಗಿದೆ. ಕೆಲಸ ಬಿಟ್ಟು ನಿತ್ಯ ನೀರಿಗಾಗಿ ಅಲೆಯುತ್ತಿದ್ದಾರೆ. ಕುಟುಂಬದಲ್ಲಿ ಒಬ್ಬರು ಅದಕ್ಕಾಗಿಯೇ ಕೆಲಸ ಬಿಟ್ಟು ನಿಲ್ಲಬೇಕಿದೆ. ಮಹಿಳೆಯರು, ವೃದ್ಧರು, ರೋಗಿಗಳಿರುವ ಕುಟುಂಬದ ಬವಣೆ ಹೇಳತೀರದು. ಜನರ ಕುಡಿಯುವ ನೀರಿಗಾಗಿ ಹೇಗೋ ಎಲ್ಲಿಗಾದರೂ ಹೋಗಿ ತರಬಹುದು ಆದರೆ, ದನಕರುಗಳಿಗೆ ಹಾಗೂ ನಿತ್ಯ ಬಳಕೆಗೆ ಎಲ್ಲಿಂದ ನೀರು ತರುವುದು ಎಂಬುದು ಇಲ್ಲಿನ ನಾಗರಿಕರ ಪ್ರಶ್ನೆ.

ಗಮನ ಸೆಳೆದಿದ್ದ ಕನ್ನಡಪ್ರಭ:

ಸಮಸ್ಯೆ ಪರಿಹಾರಕ್ಕೆ ನಿವಾಸಿಗಳು ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕಡಕೋಳ ಪುನರ್ವಸತಿ ಕೇಂದ್ರದ ನಿವಾಸಿಗಳ ನೀರಿನ ಸಮಸ್ಯೆ ಕುರಿತು ತಿಂಗಳ ಹಿಂದೆ ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿತ್ತು. ಆಗ ಎರಡು ಬೋರ್‌ವೆಲ್‌ ಮೂಲಕ ತಾತ್ಕಾಲಿಕವಾಗಿ ನೀರು ಪೂರೈಕೆ ಆರಂಭಿಸಿದ್ದರು. ನಂತರದಲ್ಲಿ ಅದು ನಿಂತು ಹೋಯಿತು. ವರದಿ ಪ್ರಕಟವಾದಾಗ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸಬೂಬು ಹೇಳಿದ್ದ ಅಧಿಕಾರಿಗಳು ಈವರೆಗೂ ಕ್ರಮ ಜರುಗಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ನಗರಸಭೆಯವರಿಗೆ ಹೇಳಿ ಪ್ಲಾಟ್‌ನಲ್ಲಿರುವ ತೆರೆದ ಬಾವಿ ಸ್ವಚ್ಛಗೊಳಿಸಿ ಅದರಲ್ಲಿಯ ನೀರನ್ನು ಬಳಕೆಗೆ ಅನುಕೂಲ ಮಾಡಿಸಿಕೊಡಲಾಗುವುದೆಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಈವರೆಗೂ ಬಾವಿಯ ಸ್ವಚ್ಛತೆಯ ಕೆಲಸವಾಗಿಲ್ಲ. ಬಾವಿಯಲ್ಲಿನ ತ್ಯಾಜ್ಯ ತೆಗೆಯಲಾಗಿದೆ. ಹಳೆಯ ಕೊಳೆತ ನೀರನ್ನು ಎತ್ತಿ ಸ್ವಚ್ಛಗೊಳಿಸುವ ಕೆಲಸವಾಗಿಲ್ಲ.

ಕಡು ಬೇಸಿಗೆ ಇರುವುದರಿಂದ ಅಂತರ್ಜಲಮಟ್ಟ ಕುಸಿದು ಕೊಳವೆಬಾವಿಗಳು ಬತ್ತಿಹೋಗಿವೆ. ಶುದ್ಧ ನೀರಿನ ಘಟಕಗಳು ಬಂದ್‌ ಆಗಿವೆ. ಅಧಿಕಾರಿಗಳು ಸಮಸ್ಯೆಯ ಗಂಭೀರತೆ ಅರಿತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಕಡಕೊಳ ಪು.ಕೆ. ನಿವಾಸಿ ಶ್ರೀಪಾದ ತಳಗಡೆ ಆಗ್ರಹಿಸಿದ್ದಾರೆ.