ಬಾಡಗರಕೇರಿ: ಹುಲಿ ದಾಳಿಗೆ 16 ಆಡುಗಳು ಬಲಿ

| Published : Feb 02 2025, 01:00 AM IST

ಸಾರಾಂಶ

ಬಿರುನಾಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಡಗರಕೇರಿ ಗ್ರಾಮದಲ್ಲಿ ರೈತರೋರ್ವರ ಕೊಟ್ಟಿಗೆಯಲ್ಲಿದ್ದ ಆಡುಗಳ ಮೇಲೆ ಹುಲಿ ದಾಳಿ ನಡೆಸಿ 12 ಆಡುಗಳು ಹಾಗೂ 7 ಆಡು ಮರಿಗಳನ್ನು ಕೊಂದು ಎಳೆದೊಯ್ದಿದೆ.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಬಿರುನಾಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಡಗರಕೇರಿ ಗ್ರಾಮದಲ್ಲಿ ರೈತರೋರ್ವರ ಕೊಟ್ಟಿಗೆಯಲ್ಲಿದ್ದ ಆಡುಗಳ ಮೇಲೆ ಹುಲಿ ದಾಳಿ ನಡೆಸಿ 12 ಆಡುಗಳು ಹಾಗೂ 7 ಆಡು ಮರಿಗಳನ್ನು ಕೊಂದು ಎಳೆದೊಯ್ದಿದೆ.

ಬಾಡಗರಕೇರಿ ಗ್ರಾಮದ ಕೂಂಬೈಲ್ ನಿವಾಸಿ ಡಾಲಿ(ದಿನೇಶ್) ಎಂಬವರಿಗೆ ಸೇರಿದ ಆಡುಗಳು ಹಾಗೂ ಆಡು ಮರಿಗಳನ್ನು ಶುಕ್ರವಾರ ರಾತ್ರಿ ಹುಲಿ ದಾಳಿ ನಡೆಸಿ ಕೊಂದು ಎಳೆದೊಯ್ದಿದೆ. ಆಡುಗಳನ್ನು ಎಳೆದೊಯ್ದಿರುವ ದಾರಿಯಲ್ಲಿ ಒಂದು ಸತ್ತಿರುವ ಆಡು ದೊರೆತಿದೆ. ಉಳಿದ ಎಲ್ಲಾ ಆಡುಗಳನ್ನು ಹುಲಿ ತಿಂದು ಹಾಕಿದ್ದು ಕೊಟ್ಟಿಗೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ಒಂದು ಆಡು ಮಾತ್ರ ಬದುಕಿ ಉಳಿದಿದೆ.

ಈ ಬಗ್ಗೆ ಮಾತನಾಡಿದ ಸಂತ್ರಸ್ತ ರೈತ ಡಾಲಿ, ಬಲಿಯಾದ 12 ದೊಡ್ಡ ಆಡುಗಳ ಪೈಕಿ, ಗಬ್ಬದ 4 ಆಡುಗಳು ಮರಿ ಹಾಕುವ ಕಾಲ ಕೂಡಿತ್ತು. ಇದಲ್ಲದೆ 6 ತಿಂಗಳ 7 ಮರಿ ಆಡುಗಳು ಬಲಿಯಾಗಿವೆ. ಆಶ್ಚರ್ಯ ರೀತಿ ಒಂದು ಆಡು ತಪ್ಪಿಸಿ ಬದುಕುಳಿದಿದೆ, ಹುಲಿ ಎಳೆದೊಯ್ದಿದಿರುವ ತೋಟದ ಮಾರ್ಗದಲ್ಲಿ, ಹುಲಿ ತಿಂದು, ಉಳಿಸಿರುವ ಆಡುಗಳ ಕಳೇಬರ ಪತ್ತೆಯಾಗಿದೆ ಎಂದು ತಿಳಿಸಿದ್ದು, ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಲು ಮನವಿ ಮಾಡಿದ್ದಾರೆ.

ಸ್ಥಳಕ್ಕೆ ಬಿರುನಾಣಿ ಹಾಗೂ ಶ್ರೀಮಂಗಲ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದ್ದು ಹುಲಿಯ ಜಾಡು ಪತ್ತೆಗೆ ಕಾರ್ಯಾಚರಣೆ ಆರಂಭಿಸಿದರು.

ಬಿರುನಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮ್ಮತ್ತೀರ ರಾಜೇಶ್ ಭೇಟಿ ನೀಡಿ, ಅರಣ್ಯ ಇಲಾಖೆ ಕೂಡಲೇ ಕಾರ್ಯ ಪ್ರವರ್ತರಾಗಿ ಕಾರ್ಯಾಚರಣೆ ಕೈಗೊಂಡು ಹುಲಿ ಸೆರೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಅವರು ಈ ಸಂದರ್ಭ ಮಾತನಾಡಿ, ಆಡುಗಳ ಮೇಲೆ ದಾಳಿ ಮಾಡಿ ಹುಲಿ ಹೆಚ್ಚಿನ ಸಂಖ್ಯೆಯ ಆಡುಗಳನ್ನು ಕೊಂದು ಹಾಕಿದ್ದು, ಬಹುಶಃ ಹುಲಿಯೊಂದಿಗೆ ಎರಡು -ಮೂರು ಹುಲಿ ಮರಿಗಳು ಇರಬಹುದು. ಒಂದೇ ಹುಲಿ ಇಷ್ಟು ಆಡುಗಳನ್ನು ಕೊಂದು ಎಳೆದೊಯ್ಯಲು ಸಾಧ್ಯವಾಗುವುದಿಲ್ಲ. ಆಡುಗಳನ್ನು ಎಳೆದೊಯ್ದಿರುವ ಮಾರ್ಗ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಕಾಡಾನೆ ಸಂಚಾರ: ಇನ್ನೊಂದು ಕಡೆ ಕಾಡಾನೆಗಳು ಸಹ ಬಾಡಗರಕೇರಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು ಮುಖ್ಯ ರಸ್ತೆಯಲ್ಲಿ ಶನಿವಾರ ಮುಂಜಾನೆ ಏಳು ಗಂಟೆ ವೇಳೆಗೆ ಕಾಡಾನೆ ಹಿಂಡುಗಳು ನಡೆದುಕೊಂಡು ಹೋಗಿರುವುದು ಗೋಚರಿಸಿದೆ. ಗ್ರಾಮದ ಶ್ರೀ ಮೃತ್ಯುಂಜಯ ದೇವಸ್ಥಾನದಿಂದ ಬಿರುನಾಣಿ ಮುಖ್ಯ ರಸ್ತೆ ಮೂಲಕ ಕಾಡಾನೆ ಸಂಚರಿಸಿದೆ.

ಅಲ್ಲಲ್ಲಿ ತೋಟಗಳಿಗೆ ನುಗ್ಗಿ ಕಾಫಿ ಫಸಲಿಗೆ ಹಾನಿ ಮಾಡಿದೆ. ಇದೀಗ ಕಾಫಿ ಕಟಾವು ಹಾಗೂ ಕಾಫಿಗೆ ಸ್ಪ್ರಿಂಕ್ಲರ್ ಕೆಲಸ ನಡೆಯುತ್ತಿದ್ದು, ಬೆಳೆಗಾರರು ಹಾಗೂ ಕಾರ್ಮಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಕಾಡಾನೆಗಳು ಹಾಗೂ ಹುಲಿಯಿಂದ ಬಾಡಗರ ಕೇರಿ ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಕೂಡಲೇ ಹುಲಿ ಸೆರೆಗೆ ಹಾಗೂ ಕಾಡಾನೆಯನ್ನು ಕಾಡಿಗೆ ಅಟ್ಟಲು ಕಾರ್ಯಚರಣೆ ಕೈಗೊಳ್ಳುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಸಂಜೆ ವೇಳೆಗೆ ಕಾಡಾನೆಗಳು ಬಾಡಗರಕೇರಿ ಗ್ರಾಮದಿಂದ ತೆರಾಲು ಗ್ರಾಮಕ್ಕೆ ನುಗ್ಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.