ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಜಂಕ್ಷನ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 3 ಮನೆಗಳಿಗೆ ಬೆಂಕಿಯ ಕೆನ್ನಾಲಗೆ ಚಾಚಿದ್ದು ಪರಿಣಾಮ ಒಟ್ಟು ಸುಮಾರು 40 ಲಕ್ಷ ರು.ನಷ್ಟವುಂಟಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.ಸ್ಥಳೀಯ ನಿವಾಸಿ, ಗೋಣಿಚೀಲ ವ್ಯಾಪಾರಿ ಮೋನಾಕ ಎಂಬವರಿಗೆ ಸೇರಿದೆಯೆನ್ನಲಾದ ಗೋಣಿಚೀಲ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ಪಕ್ಕದ ಹಮೀದ್, ಜರಿ ಮಹಮ್ಮದ್ ಹಾಗೂ ಇನ್ನೋರ್ವ ಹಮೀದ್ ಎಂಬವರ ಮನೆಯ ಹಂಚಿನ ಛಾವಣಿಗೂ ಬೆಂಕಿ ಕೆನ್ನಾಲಗೆ ಅವರಿಸಿದೆ.
ಅನಾಹುತ ತಪ್ಪಿಸಿದ ಚಾಲಕ:ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಬಡಕಬೈಲಿನ ಅಶೋಕ್ ಎಂಬವರು ಬಿಗ್ ಬ್ಯಾಗ್ ಸಂಸ್ಥೆಯ ರಾತ್ರಿ ಪಾಳಿಯ ನೌಕರರನ್ನು ಮನೆಗೆ ತಲುಪಿಸಿ ವಾಪಾಸಾಗುತ್ತಿದ್ದಾಗ ಮೋನಾಕ್ಕ ಅವರ ಗೋಣಿಚೀಲದ ಗೋದಾಮಿನಿಂದ ದಟ್ಟ ಹೊಗೆ ಮತ್ತು ಬೆಂಕಿ ಜ್ವಾಲೆ ಹೊರಬರುತ್ತಿರುವುದನ್ನು ಗಮನಿಸಿದ್ದು ಅಲ್ಲಿ ಇದ್ದ ನಾಲ್ಕುಮನೆಗಳಿಗೆ ಬೆಂಕಿ ಆವರಿಸಿಕೊಂಡಿತ್ತು. ತಕ್ಷಣ ಅವರು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರ ಸಹಕಾರದಿಂದ ಬಾಗಿಲು ಬಡಿದು ಅಕ್ಕಪಕ್ಕದ ಮನೆಯವರನ್ನು ಎಬ್ಬಿಸಿದರಲ್ಲದೆ ಬಂಟ್ವಾಳ ಅಗ್ನಿಶಾಮಕ ಠಾಣೆ, ಶಾಸಕರಿಗೂ ಕರೆಮಾಡಿ ಮಾಹಿತಿ ನೀಡಿದ್ದರು.
ಅದಾಗಲೇ ಗೋದಾಮಿನ ಗೋಣಿಚೀಲ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಅದರ ಕೆನ್ನಾಲಗೆ ಹಮೀದ್, ಜರಿಮಹಮ್ಮದ್ ,ಹಮೀದ್ ಎಂಬವರ ಮನೆಯ ಹಂಚು, ಮೇಲ್ಛಾವಣಿಗೂ ಅವರಿಸಿತ್ತೆನ್ನಲಾಗಿದೆ. ಈ ಘಟನೆಯಿಂದಾಗಿ ಮೂವರಿಗೆ ತಲಾ ಐದು ಲಕ್ಷ ರು.ನಷ್ಟ ಸಂಭವಿಸಿದರೆ, ಮೋನಕ್ಕ ಅವರ ಗೋದಾಮು ಬೆಂಕಿಗಾಹುತಿಯಾಗಿ ಸುಮಾರು 25 ಲಕ್ಷ ರು.ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾ ಮಧ್ಯರಾತ್ರಿಯೇ ಸ್ಥಳಕ್ಕಾಗಮಿಸಿ ಮನೆಮಂದಿಗೆ ಸಾಂತ್ವನ ಹೇಳಿದರು. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಗೋಣಿ ಗೋದಾಮಿನಲ್ಲಿವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.