ಚಾಮರಾಜನಗರ ತಾಲೂಕಿನ ಬದನಗುಪ್ಪೆ ಗ್ರಾಮದಲ್ಲಿ ಈಗಾಗಲೇ ಅಳವಡಿಸಿರುವ ಡಾ. ಬಿ.ಆರ್.ಅಂಬೇಡ್ಕರ್ ನಾಮಫಲಕದ ಜಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರ ಒಂದೇ ನಾಮಫಲಕದಲ್ಲಿ ಹಾಕಿ ಅಳವಡಿಸುವ ಜೊತೆಗೆ ಯಾವುದೇ ಸಂಘ ಸಂಸ್ಥೆಗಳ ಹೆಸರನ್ನು ನಮೂದಿಸಕೂಡದು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಬದನಗುಪ್ಪೆ ಗ್ರಾಮದಲ್ಲಿ ಈಗಾಗಲೇ ಅಳವಡಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ನಾಮಫಲಕದ ಜಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರ ಒಂದೇ ನಾಮಫಲಕದಲ್ಲಿ ಹಾಕಿ ಅಳವಡಿಸುವ ಜೊತೆಗೆ ಯಾವುದೇ ಸಂಘ ಸಂಸ್ಥೆಗಳ ಹೆಸರನ್ನು ನಮೂದಿಸಕೂಡದು ಎಂದು ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಬದನಗುಪ್ಪೆಯಲ್ಲಿ ನಾಮಫಲಕ ತೆರವು ಸಂಬಂಧ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ವೈಷಮ್ಯ ಬೆಳೆದು ಕಳೆದ ಹಲವಾರು ತಿಂಗಳಿಂದ ಆಗಿಂದಾಗ್ಗೆ ಗಲಾಟೆಗಳು ನಡೆಯುತ್ತಿತ್ತು. ಇತ್ತೀಚೆಗೆ ಇದೇ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿತ್ತು. ಜಿಲ್ಲಾ ಪೋಲಿಸ್ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿದ್ದರು. ಸ್ಥಳದಲ್ಲಿಯೇ ಪೊಲೀಸರು ಮೊಕ್ಕಾಂ ಹೂಡಿದ್ದರು. ಮುನ್ನಚ್ಚರಿಕೆ ಕ್ರಮವಾಗಿ ಎರಡು ಸಮುದಾಯಗಳ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಲಾಗಿತ್ತು.

ಈ ಸಂಬಂಧ ಇಂದು ಜಿಲ್ಲಾಧಿಕಾರಿ ಶ್ರೀರೂಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್ಪಿ ಮುತ್ತುರಾಜ್, ಸಿಇಓ ಮೋನಾ ರೋತ್, ಎಡಿಸಿ ಜವರೇಗೌಡ, ಡಿಎವೈಎಸ್ ಸ್ನೇಹ ರಾಜ್ , ಎಸಿ ದೀನೇಶ್ ಕುಮಾರ್ ಮೀನಾ, ತಹಸೀಲ್ದಾರ್ ಗಿರಿಜಾ ಸೇರಿ ಎರಡು ಸಮುದಾಯಗಳ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ಎರಡು ಮುದಾಯದಗಳ ಮುಖಂಡರುಗಳು ಮಾತನಾಡಿ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ನಾಯಕ ಸಮುದಾಯದವರು ವಾಸಿಸುವ ಜಾಗದಲ್ಲಿ ನಾಮಫಲಕ ಹಾಕಿರುವುದು ಸರಿಯಲ್ಲ. ಪರಿಶಿಷ್ಟ ಜಾತಿಯವರು ವಾಸಿಸುವ ರಸ್ತೆ ಹಾಗೂ ಜಾಗದಲ್ಲಿ ನಾಮಫಲಕ ಹಾಕಿಕೊಳ್ಳಲಿ. ಈ ನಾಮಫಲಕ ಇಲ್ಲಿ ಇರುವುದರಿಂದ ಏನಾದರು ದುಷ್ಕೃತಗಳು ನಡೆದಾಗ ನಮ್ಮ ಸಮುದಾಯ ಹೊಣೆ ಮಾಡಲಾಗುತ್ತದೆ. ಹೀಗಾಗಿ ಇಲ್ಲಿ ಬೇಡ ಎಂದು ಹೇಳುತ್ತಿದ್ದೇವೆ ಹೊರತು ಬೇರೆ ಉದ್ದೇಶ ಇಲ್ಲ ಎಂದು ತಿಳಿಸಿದರು.

ಇದಕ್ಕೆ ಪ್ರತಿಯಾಗಿ ಗ್ರಾಮದ ಪರಿಶಿಷ್ಟ ಜಾತಿಯ ಮುಖಂಡರು ಮಾತನಾಡಿ, ಇದೊಂದು ಗ್ರಾಮ ಠಾಣ ಜಾಗವಾಗಿದ್ದು, ನಮ್ಮ ಬೀದಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಈ ಹಿಂದಿನಿಂದಲು ಇಲ್ಲಿ ತೆರೆದ ಬಾವಿ ಇತ್ತು. ನಾವು ಇಲ್ಲಿ ನೀರು ತೆಗೆದುಕೊಳ್ಳುತ್ತಿದ್ದೆವು. ಈ ಜಾಗದಲ್ಲಿ ಜಾತ್ರೆ ಹಾಗೂ ವಿಶೇಷ ಸಂದರ್ಭಗಳಲ್ಲಿ ನಾಟಕ ಪ್ರದರ್ಶನಗಳು ನಡೆಯುತ್ತಿತ್ತು. ಸಂವಿಧಾನ ಶಿಲ್ಪಿ ಹಾಗೂ ಸಮಾನತೆಯ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್ ಅವರ ನಾಮಫಲಕವನ್ನು ಅಳವಡಿಸಿದ್ದೇವೆ. ನಮ್ಮ ಬೀದಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಇಲ್ಲಿ ನಾಮಫಲಕ ಆಳವಡಿಸಿದರೆ ತಪ್ಪೇನು. ಇದರಿಂದ ನಮ್ಮ ಅಂಬೇಡ್ಕರ್ ಬಡಾವಣೆಗೆ ಬರುವವರಿಗೆ ದಾರಿ ತೋರಿಸಿದಂತಾಗುತ್ತದೆ. ಇದಕ್ಕೆ ವಿರೋಧ ಏಕೆ ಎಂಬುದು ನಮ್ಮ ಪ್ರಶ್ನೆ. ಜೊತೆಗೆ ದೇಶವೇ ಅಂಬೇಡ್ಕರ್ ಹಾಗೂ ಅವರ ಸಂವಿಧಾನವನ್ನು ಒಪ್ಪಿಕೊಂಡಿದೆ. ಶೋಷಿತರೇ ಶೋಷಿತರನ್ನು ದೂಷಣೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

ಸಭೆಯಲ್ಲಿ ಚರ್ಚೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಏರಿದ ಧ್ವನಿಯಲ್ಲಿ ವ್ಯಕ್ತಿಯೊಬ್ಬರು ಮಾತನಾಡಲು ಮುಂದಾದಾಗ ಎಸ್ಪಿ ಮುತ್ತುರಾಜ್ ಅವರು ಖಡಕ್ ಸೂಚನೆ ನೀಡಿದರು. ಇದು ಶಾಂತಿ ಸಭೆ, ಶಾಂತಿಯಾಗಿ ಮಾತನಾಡಬೇಕು. ಇಲ್ಲಿ ಯಾರು ವಿರೋಧಿಗಳು ಇಲ್ಲ ಎಂದೂ ಎಚ್ಚರಿಕೆ ಕೊಟ್ಟರು. ಬಳಿಕ ಜಿಲ್ಲಾಧಿಕಾರಿಗಳು ನೀಡಿದ ಸೂಚನೆಗೆ ಎಲ್ಲರು ಒಪ್ಪಿಗೆ ಸೂಚಿಸಿದರು.

ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಗ್ರಾಮ ಠಾಣೆ ಜಾಗದಲ್ಲಿಯೇ ಡಾ. ಅಂಬೇಡ್ಕರ್, ವಾಲ್ಮೀಕಿ ಭಾವಚಿತ್ರವಿರುವ ಒಂದೇ ಸಮಾನ ಅಳತೆಯಲ್ಲಿರುವ ಅಂಬೇಡ್ಕರ್ ಬಡಾವಣೆ ಮತ್ತು ವಾಲ್ಮೀಕಿ ಬಡಾವಣೆಗೆ ಹೋಗುವ ರಸ್ತೆ ಎಂದು ನಮೂದಿಸಿ ಹಾಕುವಂತೆ ಸೂಚನೆ ನೀಡಿದರು. ಸೋಮವಾರವೇ ಈ ಕಾರ್ಯವಾಗಬೇಕು. ಎಲ್ಲಾ ಮುಖಂಡರ ಸಮ್ಮುಖದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ನಾಮಫಲಕ ಅನಾವರಣಗೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಬದನಗುಪ್ಪೆ ಗ್ರಾಮದ ಯಜಮಾನರಾದ ನಾಗಣ್ಣ, ಯ. ನಾಗಯ್ಯ, ಮುಕುಂದ ಮೂರ್ತಿ, ಮಹೇಶ್ ಬದನಗುಪ್ಪೆ, ಡಾ. ಬಿ.ಆರ್. ಅಂಭೇಡ್ಕರ್ ಮಹಾಸಭಾದ ಅಧ್ಯಕ್ಷ ಉಮೇಶ್‌ಕುದರ್, ಕಾರ್ಯಾಧ್ಯಕ್ಷ ಸಿ.ಕೆ. ಮಂಜುನಾಥ್, ವಾಸು ಹೊಂಡರಬಾಳು, ರಾಮಸಮುದ್ರ ನಾಗರಾಜು, ಕಾಂಗ್ರೆಸ್ ಮುಖಂಡರಾದ ಮಹೇಶ್ ಕುದರ್, ನಲ್ಲೂರು ಸೋಮೇಶ್ವರ, ಅಯ್ಯನಪುರ ಶಿವಕುಮಾರ್, ನಾಯಕ ಸಮುದಾಯದ ಮುಖಂಡರಾದ ಎಂ. ರಾಮಚಂದ್ರು, ಕೆಲ್ಲಂಬಳ್ಳಿ ಸೋಮನಾಯಕ, ಪು. ಶ್ರೀನಿವಾಸನಾಯಕ, ಆರ್. ಸುಂದರ್, ಸುರೇಶ್ ನಾಯಕ್, ಶಿವರಾಮನಾಯಕ, ಎರಡು ಸಮುದಾಯದ ಯಜಮಾನರು, ಯುವ ಮುಖಂಡರು ಇದ್ದರು.