ಸಾರಾಂಶ
ವಿಶೇಷ ವರದಿ ಗದಗ
ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ರೈತರ ಹೊಲಗಳಲ್ಲಿ ನಿರ್ಮಿಸಿದ ಕಂದಕ ಬದು, ಕೃಷಿ ಹೊಂಡಗಳು ಮುಂಗಾರು ಮಳೆಯಿಂದಾಗಿ ಭರ್ತಿಯಾಗುತ್ತಿದ್ದು, ಅಂತರ್ಜಲ ಮಟ್ಟ ಹೆಚ್ಚಾಗುತ್ತಿದೆ.ರೈತರ ಕೃಷಿ ಚಟುವಟಿಕೆಗೆ ಮತ್ತು ನೀರಿನ ಅಭಾವ ನೀಗಿಸಲು ಮಳೆಯ ನೀರನ್ನು ಸಂಗ್ರಹಿಸಿ ಅದನ್ನು ವ್ಯವಸಾಯಕ್ಕೆ ಬಳಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಗದಗ ತಾಲೂಕಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಯೋಜನೆಯಡಿ ಅಂತರ್ಜಲ ಅಭಿವೃದ್ಧಿ ಮಾಡುವುದಕ್ಕೆ ಹಾಗೂ ಮಣ್ಣು ಮತ್ತು ನೀರು ಸಂರಕ್ಷಣೆಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ರೈತರು ತಮ್ಮ ಹೊಲದಲ್ಲಿ ಕಂದಕ ಬದು ನಿರ್ಮಾಣ ಮಾಡಿ, ತೆಗೆದ ಗುಂಡಿಗಳಲ್ಲಿ ಮಳೆ ಬಂದಾಗ ನೀರು ಶೇಖರಣೆಯಾಗಿ ಅಂತರ್ಜಲ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ. ಈ ಯೋಜನೆಯನ್ನು ಸರ್ಕಾರ ಸಮರ್ಪಕವಾಗಿ ಅನುಷ್ಠಾನ ಮಾಡುವುದರಿಂದ ರೈತರಿಗೆ ಸಾಕಷ್ಟು ಪ್ರಯೋಜನ ಲಭಿಸಲಿದೆ.ಸಕ್ರಿಯ ಉದ್ಯೋಗ ಚೀಟಿದಾರರು ತಮ್ಮ ಗ್ರಾಮಗಳಲ್ಲಿಯ ರೈತರ ಜಮೀನುಗಳಲ್ಲಿ ಅಕುಶಲ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಬದು ನಿರ್ಮಿಸಿದ ಸ್ಥಳದ ಮೇಲೆಯೇ ಸಾಮಾಜಿಕ ಅರಣ್ಯ ಇಲಾಖೆ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಯವರು ಉಚಿತವಾಗಿ ಸಸಿಗಳನ್ನು ನೀಡುತ್ತಾರೆ. ಈ ಸಸಿಗಳು ಮಣ್ಣಿನ ಸವಕಳಿ ತಡೆದು, ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು. ರೇಷ್ಮೆ ಬೆಳೆ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಅವಕಾಶವಿದೆ. ಒಂದು ಎಕರೆಯಲ್ಲಿ 12 ಕಂದಕ ಬದುಗಳನ್ನು ತೆಗೆಯಲು ಅವಕಾಶವಿದೆ.
ಅಂತರ್ಜಲ ಮಟ್ಟ ಏರಿಕೆ: ಕಳೆದ ಎರಡು ತಿಂಗಳ ಅವಧಿಯಲ್ಲಿ ತಾಲೂಕಿನಲ್ಲಿ ನಿರೀಕ್ಷೆಗಿಂತಲೂ ಅಧಿಕವಾಗಿ ರೈತರ ಹೊಲದಲ್ಲಿ ಬದುಗಳನ್ನು ನಿರ್ಮಿಸಿ ದಾಖಲೆ ಮಾಡಲಾಗಿದೆ. ಇದರಿಂದ ಅಂತರ್ಜಲಮಟ್ಟ ವೃದ್ಧಿಗೊಳ್ಳುವ ಜತೆಗೆ ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗಿದೆ. ಮಣ್ಣಿನ ಸವಕಳಿ ನಿಯಂತ್ರಣ, ತೇವಾಂಶ ಹೆಚ್ಚಾಗುವುದರಿಂದ ಶೇ. 10ರಿಂದ 15ರಷ್ಟು ಬೆಳೆ ಇಳುವರಿಯಾಗಲಿದೆ.ರೈತರ ಕೃಷಿ ಚಟುವಟಿಕೆಗೂ ನೀರು ಬಳಕೆ: ಈಗಾಗಲೆ ಮಳೆಯಿಂದ ಕೃಷಿಹೊಂಡ, ಗೋಕಟ್ಟೆ, ಹಳ್ಳ, ಕಾಲುವೆ, ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಇದರಿಂದಾಗಿ ದನಕರುಗಳಿಗೆ ನೀರಿನ ದಾಹ ನೀಗಿಸುತ್ತದೆ. ಇನ್ನು ಈ ನರೇಗಾ ಯೋಜನೆಯಡಿ ನಿರ್ಮಿತಗೊಳ್ಳುವ ಕೃಷಿಹೊಂಡದಲ್ಲಿ ಶೇಖರಣೆಯಾದ ನೀರಿನಿಂದ ರೈತರು ಕೃಷಿ ಚಟುವಟಿಕೆಗೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ.
ಯೋಜನೆಯಡಿ ಗ್ರಾಪಂಗೆ ಅರ್ಜಿ ಸಲ್ಲಿಸಿ 3 ಎಕರೆ ಕೃಷಿ ಜಮೀನಿನಲ್ಲಿ ಕಂದಕ ಬದು ನಿರ್ಮಾಣ ಮಾಡಿಕೊಂಡಿದ್ದು, ಇತೀಚೆಗೆ ಉತ್ತಮ ಮಳೆಯಾಗಿ ನೀರು ಸಂಗ್ರಣೆಯಾಗಿದೆ. ಜಮೀನುಗಳಲ್ಲಿ ಕಂದಕ ಬದು ನಿರ್ಮಾಣ ಮಾಡುತ್ತಿರುವುದರಿಂದ ಮಳೆ ನೀರು ನಿಂತುಕೊಳ್ಳಲು ಅನುಕೂಲವಾಗಿದೆ. ಈ ಹಿಂದೆ ಜಮೀನಿನ ಮಣ್ಣು ಸಹ ಕೊಚ್ಚಿಕೊಂಡು ಹೋಗುತ್ತಿತ್ತು. ಇದೀಗ ಸಂಪೂರ್ಣ ಮಳೆಯಿಂದ ಜಮೀನು ಹಸಿಯಾಗಿ ಉತ್ತಮ ಬೆಳೆಗಳು ಬರುವ ನಿರೀಕ್ಷೆಯಿದೆ ಎಂದು ರೈತ ಮಹದೇವಪ್ಪ ಹೇಳಿದರು.ರೈತರು ಕೃಷಿಹೊಂಡ, ಬದುವಿನ ಮೇಲೆ ನುಗ್ಗೆ, ಹುರಳಿ, ತೊಗರಿ, ಕುಂಬಳ, ಮೆಣಸಿನಕಾಯಿ, ಟೊಮೆಟೋ, ಅಳಸಂದೆ, ಅವರೆ ಕಾಯಿ, ಈರುಳ್ಳಿ ಬೆಳೆಯಬಹುದು. ಇದರಿಂದಾಗಿ ಮನೆಗೆ ಅಗತ್ಯ ತರಕಾರಿ ಕೊಳ್ಳುವುದು ಸಹ ತಪ್ಪಲಿದೆ. ಅಧಿಕ ಉತ್ಪಾದನೆಯ ತರಕಾರಿ ಮಾರಾಟದಿಂದ ರೈತರಿಗೆ ಆದಾಯವೂ ದೊರೆಯಲಿದೆ. ಹುಲ್ಲಿನ ಬೀಜ ಬಿತ್ತನೆಯಿಂದ ಜಾನುವಾರುಗಳಿಗೆ ಪೌಷ್ಟಿಕ ಹಸಿ ಮೇವು ಪೂರೈಕೆ ಮಾಡಲು ಸಹ ಸಾಧ್ಯವಾಗುತ್ತದೆ ಎಂದು ತಾಪಂ ಸಹಾಯಕ ನಿರ್ದೇಶಕ ಕುಮಾರ ಪೂಜಾರ ಹೇಳಿದರು.
ನರೇಗಾ ಯೋಜನೆಯಡಿ, ನೀರು ಮತ್ತು ಮಣ್ಣು ಸಂರಕ್ಷಣೆ ಕಾಮಗಾರಿಗಳನ್ನು ಅನುಷ್ಠಾನ ಮಾಡುವುದರೊಂದಿಗೆ ಗ್ರಾಮದ ಕೂಲಿಕಾರರಿಗೆ ಕೆಲಸ ಒದಗಿಸಿ, ಕುಟುಂಬ ನಿರ್ವಹಣೆ ಅರ್ಥಿಕ ಸಹಕಾರಿಯಾಗಲಿದೆ. ಜತೆಗೆ ಮಳೆಯ ನೀರು ವ್ಯರ್ಥವಾಗದಂತೆ ತಡೆಯುವುದರಿಂದ ಅಂತರ್ಜಲ ಪ್ರಮಾಣ ಕೂಡ ಹೆಚ್ಚಾಗಲಿದೆ ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನವರ ತಿಳಿಸಿದ್ದಾರೆ.