ಸಾರಾಂಶ
ಅಪಘಾತವೊಂದರಲ್ಲಿ ಪರಿಹಾರ ನೀಡಬೇಕಿದ್ದ ಕೆಎಸ್ಆರ್‌ಟಿಸಿ ವರ್ಷಗಳಿಂದ ಪರಿಹಾರ ನೀಡದಿದ್ದರಿಂದ ಮಂಗಳವಾರ ಬೆಳಗ್ಗೆ 10ಕ್ಕೆ ಕೂಡ್ಲಿಗಿ ಬಸ್ ನಿಲ್ದಾಣದಲ್ಲಿದ್ದ ದಾವಣಗೆರೆ-ಬಳ್ಳಾರಿ ಬಸ್ ಅನ್ನು ಕೂಡ್ಲಿಗಿ ನ್ಯಾಯಾಲಯದ ಅಧಿಕಾರಿಗಳು ಜಪ್ತಿ ಮಾಡಿ ತಂದು ಕೂಡ್ಲಿಗಿ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕೂಡ್ಲಿಗಿ
ಅಪಘಾತವೊಂದರಲ್ಲಿ ಪರಿಹಾರ ನೀಡಬೇಕಿದ್ದ ಕೆಎಸ್ಆರ್‌ಟಿಸಿ ವರ್ಷಗಳಿಂದ ಪರಿಹಾರ ನೀಡದಿದ್ದರಿಂದ ಮಂಗಳವಾರ ಬೆಳಗ್ಗೆ 10ಕ್ಕೆ ಕೂಡ್ಲಿಗಿ ಬಸ್ ನಿಲ್ದಾಣದಲ್ಲಿದ್ದ ದಾವಣಗೆರೆ-ಬಳ್ಳಾರಿ ಬಸ್ ಅನ್ನು ಕೂಡ್ಲಿಗಿ ನ್ಯಾಯಾಲಯದ ಅಧಿಕಾರಿಗಳು ಜಪ್ತಿ ಮಾಡಿ ತಂದು ಕೂಡ್ಲಿಗಿ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ್ದಾರೆ.ಕೂಡ್ಲಿಗಿ ಸಮೀಪದ ಗೋವಿಂದಗಿರಿ ಕ್ರಾಸ್ ಸಮೀಪ 2019 ಅಕ್ಟೋಬರ್ 12ರಂದು ರಸ್ತೆಯಲ್ಲಿ ಹೋಗುತ್ತಿದ್ದ ಗೋವಿಂದಗಿರಿ ಗೊಲ್ಲರಹಟ್ಟಿ ಗ್ರಾಮದ ಮಾರಪ್ಪ (55) ಎನ್ನುವ ವ್ಯಕ್ತಿಯ ಮೇಲೆ ಬಸ್ ಹರಿದಿದ್ದರಿಂದ ತೀವ್ರ ಗಾಯಗಳಾಗಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಮಾರಪ್ಪ ಸಾವನ್ನಪ್ಪಿದ್ದ. ಪರಿಹಾರ ಕೋರಿ ಮಾರಪ್ಪನ ಪತ್ನಿ ಬೊಮ್ಮಕ್ಕ ಮತ್ತು ಮಕ್ಕಳು ನ್ಯಾಯಾಲಯದ ಮೊರೆ ಹೋಗಿದ್ದರು.
ವಕೀಲರದ ಜಿ. ಸೀತಾರಾಂ ವಕಾಲತ್ ಮಂಡಿಸಿದ್ದರು. ₹15 ಲಕ್ಷ ಪರಿಹಾರದ ಮೊತ್ತ ನೀಡುವಂತೆ 2022 ಏಪ್ರಿಲ್ 28ರಂದು ಕೂಡ್ಲಿಗಿ ಹಿರಿಯ ಶ್ರೇಣಿ ನ್ಯಾಯಾಲಯ ಆದೇಶ ಮಾಡಿದೆ. ಪರಿಹಾರ ಮೊತ್ತವನ್ನು ನೀಡಲು ದಾವಣಗೆರೆ ಕೆಎಸ್ಆರ್‌ಟಿಸಿ ಡಿವಿಜನಲ್ ಮ್ಯಾನೇಜರ್ ವಿಳಂಬ ಮಾಡಿದ್ದರಿಂದ ಅರ್ಜಿದಾರರ ಪರ ವಕೀಲರಾದ ಜಿ. ಸೀತಾರಾಂ ಅವರು ಜಪ್ತಿ ಆದೇಶ ಜಾರಿಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಕೂಡ್ಲಿಗಿ ಹಿರಿಯ ಶ್ರೇಣಿ ನ್ಯಾಯಾಧೀಶರು ಬಸ್ ಜಪ್ತಿ ಮಾಡುವಂತೆ ಆದೇಶ ಮಾಡಿರುತ್ತಾರೆ.ಈ ಆದೇಶದ ಪ್ರಕಾರ ನ್ಯಾಯಾಲಯದ ಅಮೀನರಾದ ವಿ.ಚನ್ನಪ್ಪ ಮತ್ತು ಇತರರು ಮಂಗಳವಾರ ದಾವಣಗೆರೆ ಘಟಕದ ಕೆ.ಎ.17.ಎಫ್- 1524 ನಂಬರಿನ ಬಸ್ಸನ್ನು ಜಪ್ತಿ ಮಾಡಿ ನ್ಯಾಯಾಲಯದಲ್ಲಿ ತಂದು ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರಾದ ಜಿ. ಸೀತಾರಾಂ ಹಾಗೂ ನೊಂದ ಕುಟುಂಬದ ಸದಸ್ಯರು ಹಾಜರಿದ್ದರು.