ಭವಿಷ್ಯ ದೃಷ್ಟಿಯಿಂದ ಬೆಸ ಸೆಮಿಸ್ಟರ್‌ ಪರೀಕ್ಷೆ ನಡೆಸಿ

| Published : Jul 03 2024, 12:21 AM IST

ಸಾರಾಂಶ

ದಾವಣಗೆರೆ ವಿ.ವಿ. ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಭವಿಷ್ಯ ದೃಷ್ಟಿಯಿಂದ ಬೆಸ ಸೆಮಿಸ್ಟರ್ ಪರೀಕ್ಷೆ ನಡೆಸಬೇಕು ಎಐಡಿಎಸ್‌ಒ ಸಂಘಟನೆ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ದಾವಣಗೆರೆಯಲ್ಲಿ ಒತ್ತಾಯಿಸಿದ್ದಾರೆ.

- ಅಂತಿಮ ಪದವಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಪೂಜಾ ನಂದಿಹಳ್ಳಿ ಒತ್ತಾಯ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ವಿ.ವಿ. ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಭವಿಷ್ಯ ದೃಷ್ಟಿಯಿಂದ ಬೆಸ ಸೆಮಿಸ್ಟರ್ ಪರೀಕ್ಷೆ ನಡೆಸಬೇಕು ಎಐಡಿಎಸ್‌ಒ ಸಂಘಟನೆ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಒತ್ತಾಯಿಸಿದರು.

ತಾಲೂಕಿನ ತೋಳಹುಣಸೆ ಶಿವಗಂಗೋತ್ರಿಯ ದಾವಣಗೆರೆ ವಿವಿ ಕಚೇರಿ ಎದುರು ಮಂಗಳವಾರ ಎಐಡಿಎಸ್‌ಒ ಜಿಲ್ಲಾ ಘಟಕ ನೇತೃತ್ವದಲ್ಲಿ ದಾವಿವಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಬೆಸ ಸೆಮಿಸ್ಟರ್ ಪರೀಕ್ಷೆಗೆ ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

2023-2024ನೇ ಸಾಲಿನಲ್ಲಿ 3ನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಎನ್‌ಇಪಿ-2020ರ ಮೊದಲ ಬ್ಯಾಚ್‌ ವಿದ್ಯಾರ್ಥಿಗಳಲ್ಲಿ ಅನೇಕರು ಸೆಮಿಸ್ಟರ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಹಠಾತ್‌ ಜಾರಿಗೊಳಿಸಿದ ನೂತನ ಶಿಕ್ಷಣ ನೀತಿಯಿಂದಾಗಿ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಆತಂಕದಲ್ಲಿ ವಿದ್ಯಾರ್ಥಿಗಳು:

ಒಂದನೇ ಸೆಮಿಸ್ಟರ್ ಪರೀಕ್ಷೆಯಲ್ಲೇ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿಲ್ಲ. 1, 2 ಮತ್ತು 3ನೇ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡ ವಿಷಯಗಳಿಗೆ ಒಮ್ಮೆಲೆ 4ನೇ ಸೆಮಿಸ್ಟರ್‌ನಲ್ಲಿ ಅವಕಾಶ ನೀಡಲಾಯಿತು. ಒಟ್ಟು ಪದವಿ ಶಿಕ್ಷಣ‍ವೇ ಒತ್ತಡ, ಗೊಂದಲದಲ್ಲಿ ಕಳೆದಿದೆ. ಈಗ ವಿದ್ಯಾರ್ಥಿಗಳು ಅಂತಿಮ ಸೆಮಿಸ್ಟರ್ ಪರೀಕ್ಷೆ ಬರೆಯಲಿದ್ದಾರೆ. 1ನೇ ಸೆಮಿಸ್ಟರ್ ಮೊದಲ್ಗೊಂಡು ಬೆಸ ಸೆಮಿಸ್ಟರ್‌ಗಳಲ್ಲಿ ಅನೇಕರು ಅನುತ್ತೀರ್ಣರಾಗಿ, ಆತಂಕದಲ್ಲಿದ್ದಾರೆ. ಈ ವಿದ್ಯಾರ್ಥಿಗಳು ಅಂತಿಮ ವರ್ಷದಲ್ಲಿದ್ದು, ತಮ್ಮ ಮುಂದಿನ ಉನ್ನತ ವ್ಯಾಸಂಗಕ್ಕಾಗಿ ಇದಿರು ನೋಡುತ್ತಿದ್ದಾರೆ ಎಂದು ತಿಳಿಸಿದರು.

ಒತ್ತಾಯಗಳೇನು?:

ವಿದ್ಯಾರ್ಥಿಗಳ ಭವಿಷ್ಯ ಗಮನದಲ್ಲಿಟ್ಟುಕೊಂಡು, ಬೆಸ ಸೆಮಿಸ್ಟರ್ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಮರು ಮೌಲ್ಯಮಾಪನದಲ್ಲಿ ಬಂದಿದ್ದ ಅಂಕದಲ್ಲಿ ಆಗಿರುವ ದೋಷಗಳನ್ನು ಸರಿಪಡಿಸಬೇಕು. ನಮ್ಮೆಲ್ಲಾ ಬೇಡಿಕೆಗಳ ಬಗ್ಗೆ ಪ್ರಥಮಾದ್ಯತೆ ಮೇಲೆ ದಾವಣಗೆರೆ ವಿವಿ ಸ್ಪಂದಿಸಬೇಕು ಎಂದು ಆಗ್ರಹಿಸಿ ಕುಲಪತಿ ಪ್ರೊ. ಎಫ್‌.ಡಿ. ಕುಂಬಾರ ಅವರಿಗೆ ಮನವಿ ಅರ್ಪಿಸಿದರು.

ಸಂಘಟನೆ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ ಬೀಳೂರ್, ಜಿಲ್ಲಾ ಉಪಾಧ್ಯಕ್ಷೆ ಬಿ.ಕಾವ್ಯ, ಯಶವಂತ್, ನಿಖಿಲ್, ಅಫ್ಜಲ್, ನಯನ, ತನುಶ್ರೀ, ಕಾವ್ಯ, ನಿವೇದಿತಾ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿದ್ದರು.

- - -

ಬಾಕ್ಸ್‌ ಕುಲಪತಿ ಪ್ರೊ.ಕುಂಬಾರ ಭರವಸೆ ಮನವಿ ಸ್ವೀಕರಿಸಿದ ಕುಲಪತಿ ಪ್ರೊ.ಕುಂಬಾರ, ಮರು ಮೌಲ್ಯಮಾಪನ ಅಂಕಗಳಲ್ಲಿ ಆದ ದೋಷಗಳನ್ನು ಶೀಘ್ರವೇ ಸರಿಪಡಿಸಲಾಗುವುದು. 6ನೇ ಸೆಮಿಸ್ಟರ್ ಪರೀಕ್ಷಾ ಶುಲ್ಕದ ದಿನಾಂಕವನ್ನು ಜು.7ನೇ ತಾರೀಖಿನವರೆಗೂ ವಿಸ್ತರಿಸಲಾಗುವುದು. ರಾಜ್ಯಮಟ್ಟದಲ್ಲೂ ಯುಯುಸಿಎಂಎಸ್ ಪೋರ್ಟಲ್ ಮೂಲಕವೇ ಪರೀಕ್ಷಾ ಶುಲ್ಕಗಳನ್ನು ಪಾವತಿಸಲು ಅವಕಾಶ ಇರುವುದರಿಂದ ಈ ಬಗ್ಗೆ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಗಮನ ಸೆಳೆದು, ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

- - - -2ಕೆಡಿವಿಜಿ2:

ದಾವಣಗೆರೆ ತಾಲೂಕು ಶಿವಗಂಗೋತ್ರಿಯ ದಾವಣಗೆರೆ ವಿವಿ ಆಡಳಿತ ಕಚೇರಿ ಎದುರು ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಕುಲಪತಿ ಪ್ರೊ.ಕುಂಬಾರ ಅವರಿಗೆ ಮನವಿ ಅರ್ಪಿಸಿದರು. -2ಕೆಡಿವಿಜಿ3:

ದಾವಣಗೆರೆ ತಾಲೂಕು ಶಿವಗಂಗೋತ್ರಿಯ ದಾವಣಗೆರೆ ವಿ.ವಿ.ಯ ಆಡಳಿತ ಕಚೇರಿ ಎದುರು ಎಐಡಿಎಸ್ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.